ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದ 15 ಸರ್ಕಾರಿ ಆಸ್ಪತ್ರೆಗಳಿಗೆ ‘ಕಾಯಕಲ್ಪ’ ಪ್ರಶಸ್ತಿ ಗೌರವ

ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪರಿಶ್ರಮಕ್ಕೆ ಸಂದ ಗೌರವ
Last Updated 2 ನವೆಂಬರ್ 2020, 10:39 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ಸಂಕಷ್ಟಕರ ಪರಿಸ್ಥಿತಿಯಲ್ಲೂ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸುವ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಜಿಲ್ಲೆಯ 15 ಸರ್ಕಾರಿ ಆಸ್ಪತ್ರೆಗಳು ಪ್ರಸಕ್ತ ಸಾಲಿನ ‘ಕಾಯಕಲ್ಪ’ ಪ್ರಶಸ್ತಿಗೆ ಭಾಜನವಾಗಿವೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪಸೆ ಅವರ ಅವಿರತ ಶ್ರಮ ಮತ್ತು ಮಾರ್ಗದರ್ಶನದಲ್ಲಿ 15 ಆಸ್ಪತ್ರೆಗಳು ಈ ಪ್ರಶಸ್ತಿಯನ್ನು ಗಳಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಗೆ ಖ್ಯಾತಿ ತಂದಿವೆ.

ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡುವ ಆಸ್ಪತ್ರೆಗಳನ್ನು ಉತ್ತೇಜಿಸುವ ಉದ್ದೇಶದಿಂದ ‘ಕಾಯಕಲ್ಪ’ ಪ್ರಶಸ್ತಿಯನ್ನು 2015ರಿಂದ ನೀಡಲಾಗುತ್ತಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆರಂಭದಿಂದಲೂ ಹೆಚ್ಚು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವ ಮೂಲಕ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದೆ.

ಡಿಎಚ್‌ಒ ಶ್ಲಾಘನೆ:ಜಿಲ್ಲೆಗೆ ಬರಪೂರ ಪ್ರಶಸ್ತಿ ಬಂದಿರುವ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪಸೆ,ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕಾಗಿ ನೀಡುವ ಕಾಯಕಲ್ಪ ಪ್ರಶಸ್ತಿಯು ಈ ಬಾರಿ 15 ಸರ್ಕಾರಿ ಆಸ್ಪತ್ರೆಗಳಿಗೆ ಲಭಿಸಿರುವುದು ಸಂತಸ ತಂದಿದೆ ಎಂದರು.

ಖಾಸಗಿ ಆಸ್ಪತ್ರೆಗಳಿಗೆ ಮೀರಿದ ಮೂಲಸೌಲಭ್ಯ, ಸ್ವಚ್ಛತೆ, ಸಮರ್ಪಕ ನಿರ್ವಹಣೆ, ಸೋಂಕು ನಿಯಂತ್ರಣ, ದಾಖಲೆಗಳ ನಿರ್ವಹಣೆ ಮಾಡುತ್ತಿರುವುದರಿಂದ ಈ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಡಾ.ರಾಜೇಶ್ವರಿ ಗೋಲಗೇರಿ, ಜಿಲ್ಲಾ ಗುಣಮಟ್ಟ ಭರವಸೆ ಸಲಹೆಗಾರರಾದ ಡಾ.ಸಂತೋಷ ಕಂಚಾಣಿ, ಜಿಲ್ಲಾಸ್ಪತ್ರೆ ಗುಣಮಟ್ಟ ವ್ಯವಸ್ಥಾಪಕ ಡಾ.ಮೆಹಬೂಬ್‌ ಪಾಷಾ, ಸಹಾಯಕ ಕಾರ್ಯಕ್ರಮ ಅಧಿಕಾರಿ ಈರಪ್ಪ ಹೊಣಗೆಕರ್‌ ತಂಡದ ವಿಶೇಷ ಆಸಕ್ತಿಯೂ ಪ್ರಶಸ್ತಿ ಲಭಿಸಲು ಕಾರಣವಾಗಿದೆ ಎಂದು ತಿಳಿಸಿದರು.

2019ರಲ್ಲಿ ಜಿಲ್ಲೆಯ 11 ಆಸ್ಪತ್ರೆಗಳಿಗೆ ‘ಕಾಯಕಲ್ಪ’ ಪ್ರಶಸ್ತಿ ಲಭಿಸಿತ್ತು. 2020ರಲ್ಲಿ 15 ಆಸ್ಪತ್ರೆಗಳಿಗೆ ಈ ಪ್ರಶಸ್ತಿ ಲಭಿಸಿದೆ. 2020–21ನೇ ಸಾಲಿನ ‘ಕಾಯಕಲ್ಪ’ ಪ್ರಶಸ್ತಿಗೆ ಈಗಾಗಲೇ ಆಂತರಿಕ ಮೌಲ್ಯಮಾಪನಕ್ಕೆ ಒಳಪಟ್ಟಿರುವ ಜಿಲ್ಲೆಯ 42 ಆಸ್ಪತ್ರೆಗಳು ಮುಖ್ಯ ಮೌಲ್ಯಮಾಪನ ಹಾಗೂ ಬಾಹ್ಯ ಮೌಲ್ಯ ಮಾಪನಕ್ಕೆ ಸಜ್ಜಾಗಿವೆ. ಈ ಬಾರಿ ಹೆಚ್ಚಿನ ಆಸ್ಪತ್ರೆಗಳು ಪ್ರಶಸ್ತಿಗೆ ಆಯ್ಕೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ಸನ್ಮಾನ:ಪ್ರಶಸ್ತಿ ಪುರಸ್ಕೃತ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗೆ ನ.3ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಅವರಿಂದ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತ ಆಸ್ಪತ್ರೆಗಳು

ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗ:ಹೊರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ₹ 2 ಲಕ್ಷ ನಗದು ಒಳಗೊಂಡ ಪ್ರಥಮ ಬಹುಮಾನಕ್ಕೆ ಪಾತ್ರವಾಗಿದೆ. ಉಳಿದಂತೆ ಹೊನವಾಡ, ತಿಕೋಟಾ, ಲಚ್ಯಾಣ, ಗೊಳಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ತಲಾ ₹ 50 ಮೊತ್ತವಿರುವ ಸಮಾಧಾನಕರ ಬಹುಮಾನ ಪಡೆದುಕೊಂಡಿವೆ.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗ:ವಿಜಯಪುರ ನಗರದ ದರ್ಗಾ, ಶಾಂತಿನಗರ, ನವಭಾಗ್‌ ನಗರ ಆರೋಗ್ಯ ಕೇಂದ್ರಗಳು ತಲಾ ₹ 50 ಸಾವಿರ ನಗದು ಒಳಗೊಂಡ ಸಮಾಧಾನಕರ ಬಹುಮಾನ ಪಡೆದುಕೊಂಡಿವೆ.

ತಾಲ್ಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರ ವಿಭಾಗ:ಸಿಂದಗಿ ತಾಲ್ಲೂಕು ಆಸ್ಪತ್ರೆ, ತಡವಲಗ, ನಿಡಗುಂದಿ, ಚಡಚಣ, ಕಾಳಗಿ ಮತ್ತು ನಾಲತವಾಡದ ಸಮುದಾಯ ಆರೋಗ್ಯ ಕೇಂದ್ರಗಳು ತಲಾ ₹ ಲಕ್ಷ ಮೊತ್ತದ ಸಮಾಧಾನಕರ ಬಹುಮಾನಕ್ಕೆ ಪಾತ್ರವಾಗಿವೆ.

ಜಿಲ್ಲಾಸ್ಪತ್ರೆ ವಿಭಾಗ:ವಿಜಯಪುರ ನಗರದಲ್ಲಿರುವ ಜಿಲ್ಲಾಸ್ಪತ್ರೆಯು ₹ 10 ಲಕ್ಷ ನಗದು ಒಳಗೊಂಡ ರಾಜ್ಯ ಮಟ್ಟದ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ.

ಸ್ವಚ್ಛ ರತ್ನ:ತಡವಲಗಾ, ನಾಲತವಾಡ ಸಮುದಾಯ ಆರೋಗ್ಯ ಕೇಂದ್ರಗಳಿಗೆ ₹ 1ಲಕ್ಷ ನಗದು ಒಳಗೊಂಡಿರುವ ‘ಸ್ವಚ್ಛ ರತ್ನ’ ಪ್ರಶಸ್ತಿ ಲಭಿಸಿದೆ.

---

ಆಸ್ಪತ್ರೆಗಳ ವೈದ್ಯಾಧಿಕಾರಿಗಳು, ವೈದ್ಯ ಸಿಬ್ಬಂದಿ ಹಾಗೂ ಗ್ರೂಫ್‌ ‘ಡಿ’ ನೌಕರರ ಸತತ ಪರಿಶ್ರಮದಿಂದ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ವಿಜೇತ ಎಲ್ಲ ಆಸ್ಪತ್ರೆಗಳನ್ನು ಅಭಿನಂದಿಸುತ್ತೇನೆ.
- ಡಾ.ಮಹೇಂದ್ರ ಕಾಪಸೆ,ಡಿಎಚ್‌ಒ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT