ಶುಕ್ರವಾರ, ಸೆಪ್ಟೆಂಬರ್ 24, 2021
24 °C
ವಿಜಯಪುರ ನಗರ ಸಂಚಾರಿ ವ್ಯವಸ್ಥೆ ಸುಧಾರಣಾ ಕಾಮಗಾರಿಗೆ ಚಾಲನೆ 

22 ಕಡೆ ಅತ್ಯಾಧುನಿಕ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ನಗರದ 22 ಸ್ಥಳಗಳಲ್ಲಿ ಅತ್ಯಾಧುನಿಕ ಸಿ.ಸಿ ಕ್ಯಾಮೆರಾ ಅಳವಡಿಕೆ ಮಾಡಲಾಗುವುದು ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿದರು.

ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು ₹ 5.25 ಕೋಟಿ ವೆಚ್ಚದಲ್ಲಿ ಸಂಚಾರಿ ವ್ಯವಸ್ಥೆ ಸುಧಾರಣೆಗೆ ಕಾಮಗಾರಿ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿ.ಸಿ ಕ್ಯಾಮೆರಾ ಅಳವಡಿಕೆಯಿಂದ ಕಾನೂನು ಉಲ್ಲಂಘನೆ ಪ್ರಕರಣಗಳು ನಿಯಂತ್ರಣಗೊಳ್ಳುವ ಜೊತೆಗೆ ಅಪರಾಧ ಚಟುವಟಿಕೆ ತಗ್ಗಿಸಬಹುದಾಗಿದೆ. ಪೊಲೀಸರ ಮೇಲಿನ ಒತ್ತಡ ಕಡಿಮೆ ಆಗುವ ಜೊತೆಗೆ ಸಾರ್ವಜನಿಕರ ಭದ್ರತೆ ದೃಷ್ಟಿಯಿಂದ ಇದು ಹೆಚ್ಚು ಸಹಕಾರಿಯಾಗಲಿದೆ ಎಂದು ಹೇಳಿದರು.

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ನಗರಕ್ಕೆ ಮಂಜೂರಾಗಿದ್ದ ₹ 125 ಕೋಟಿ ಅನುದಾನ ಸರ್ಕಾರಕ್ಕೆ ಮರಳಿ ಹೋಗಿತ್ತು. ನನ್ನ ಸತತ ಪ್ರಯತ್ನದ ಫಲವಾಗಿ ವಿಜಯಪುರ ಪಾಲಿಕೆ ಸೇರಿದಂತೆ ರಾಜ್ಯದ ಇತರೆ ಮಹಾನಗರ ಪಾಲಿಕೆಗಳಿಗೂ ತಲಾ ₹ 125 ಕೋಟಿ ದೊರಕಿದೆ ಎಂದು ಹೇಳಿದರು.

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯು 2019-20 ರಿಂದ 2022-23ನೇ ಸಾಲಿನ ವರೆಗಿನ ನಾಲ್ಕು ವರ್ಷದ ಯೋಜನೆಯಾಗಿರುತ್ತದೆ. ಈ ಯೋಜನೆಯಲ್ಲಿ ₹ 125 ಕೋಟಿಗಳು ವಿಜಯಪುರ ಮಹಾನಗರಪಾಲಿಕೆಗೆ ಹಂಚಿಕೆಯಾಗಿದೆ. ಈ ಪೈಕಿ ₹105 ಕೋಟಿ ಮೊತ್ತಕ್ಕೆ ಸರ್ಕಾರದಿಂದ ಕ್ರಿಯಾಯೋಜನೆ ಅನುಮೋದನೆಯಾಗಿದೆ ಎಂದರು.

ಒಟ್ಟು 11 ಪ್ಯಾಕೇಜ್‌ಗಳಲ್ಲಿ ಈಗಾಗಲೇ 9 ಪ್ಯಾಕೇಜ್‌ಗಳಿಗೆ ಟೆಂಡರ್ ಕರೆಯಲಾಗಿರುತ್ತದೆ. ಈ 9 ಪ್ಯಾಕೇಜ್‌ಗಳಲ್ಲಿ 2 ಪ್ಯಾಕೇಜ್‌ಗಳ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. 1 ಪ್ಯಾಕೇಜ್‌ಗೆ ಕಾಮಗಾರಿ ಆದೇಶ ನೀಡಲಾಗಿದೆ. ಉಳಿದ 6 ಪ್ಯಾಕೇಜ್‌ಗಳು ಟೆಂಡರ್ ಹಂತದಲ್ಲಿವೆ. ಇವುಗಳನ್ನು ಕೂಡಲೇ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಿ ವಿಜಯಪುರ ನಗರದಲ್ಲಿನ ಹಲವು ರಸ್ತೆಗಳನ್ನು ಪೂರ್ಣಗೊಳಿಸಲಾಗುವುದು. ನಗರದಲ್ಲಿ ಅವಶ್ಯವಿರುವ ಎಲ್ಲ ಮುಖ್ಯ ಹಾಗೂ ಆಂತರಿಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.  

ಜಿಲ್ಲಾ ಉಸ್ತುವಾರಿ ಸಚಿವೆ  ಶಶಿಕಲಾ ಜೊಲ್ಲೆ ಅವರು ಈ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು. ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ, ಪಾಲಿಕೆಯ ಆಯುಕ್ತ  ವಿಜಯ್ ಮೆಕ್ಕಳಕಿ, ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಬಿ.ಡಿ.ಎ ಅಧ್ಯಕ್ಷರು ಶ್ರೀಹರಿ ಗೋಳಸಂಗಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.