ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕ್ ಗಾರ್ಡನ್‌ನಲ್ಲಿ ‘ತ್ರೀಡಿ ಥ್ರಿಲ್ಲರ್ ಥೇಟರ್’; ₹1 ಕೋಟಿಗೂ ಅಧಿಕ ವೆಚ್ಚ

ಪ್ರವಾಸಿಗರ ಆಕರ್ಷಣೆಗಾಗಿ ಯೋಜನೆ
Last Updated 22 ಜನವರಿ 2022, 19:31 IST
ಅಕ್ಷರ ಗಾತ್ರ

ಆಲಮಟ್ಟಿ: ದೊಡ್ಡದಾದ ಗುಹೆ, ಅದರ ಮೇಲೆ ಅನ್ಯಗ್ರಹದ ಏಲಿಯನ್ಸ್ ರೀತಿಯ ಆಕೃತಿಗಳು, ಒಳಗೆ ಕಾಲಿಟ್ಟರೆ ಗುಹೆಯೊಳಗೆ ಹೋದ ಅನುಭವ, ಅಲ್ಲಿಯೇ ಸಿನಿಮಾ ಪ್ರದರ್ಶನ, ಎಲ್ಲವೂ ಎದುರೇ ನಡೆದಂತೆ ಅನುಭವ.

ಹೌದು, ಇಂತಹದೊಂದು ‘ತ್ರೀಡಿ ಥ್ರಿಲ್ಲರ್ ಥೇಟರ್’ ಎಂಬ ಚೇತೋಹಾರಿ ಉದ್ಯಾನ ಆಲಮಟ್ಟಿಯ ರಾಕ್ ಗಾರ್ಡನ್‌ ಜೋಕಾಲಿ ಸೆಕ್ಟರ್ ಬಳಿ ನಿರ್ಮಾಣಗೊಂಡಿದೆ.

ಪ್ರವಾಸಿಗರ ಆಕರ್ಷಣೆ ಹಾಗೂ ಮನೋರಂಜನೆಗಾಗಿ ಹೊಸ ಯೋಜನೆಗಳನ್ನು ಉದ್ಯಾನಗಳಲ್ಲಿ ರೂಪಿಸಲಾಗುತ್ತಿದೆ. ಅದರಲ್ಲಿ ‘7ಡಿ ವರ್ಚುವಲ್ ರೈಡ್’ ಅತ್ಯಾಕರ್ಷಕವಾಗಿದೆ. ಸುಮಾರು 5 ಸಾವಿರ ಚದರ ಅಡಿಯಲ್ಲಿ ಗುಹೆ ಆಕಾರದಲ್ಲಿ ನಿರ್ಮಾಣಗೊಂಡಿರುವ ಥ್ರಿಲ್ಲರ್ ಥೇಟರ್ ಒಳಗಡೆ ಸಿನಿಮಾ ಪ್ರದರ್ಶನದ ಹಾಲ್ ಇದೆ.

ತ್ರೀಡಿ ಎಫೆಕ್ಟ್: 10 ನಿಮಿಷದ ಒಂದು ಪ್ರದರ್ಶನದಲ್ಲಿ ತ್ರೀಡಿ ಎಫೆಕ್ಟ್‌ವುಳ್ಳ ಒಂದು ಕಿರು ಚಿತ್ರ ಇರುತ್ತದೆ.

ಹವಾನಿಯಂತ್ರಿತ ಕತ್ತಲುಕೋಣೆಯಲ್ಲಿ ಎಲ್ಲವೂ ನೈಜತೆ ಅನುಭವ ತರುತ್ತದೆ. ಇಲ್ಲಿ 6 ಕುರ್ಚಿಗಳಿದ್ದು, ಚಿತ್ರದ ಶಬ್ದಕ್ಕೆ ತಕ್ಕಂತೆ ಅಲುಗಾಡುತ್ತವೆ. ನೀರಿನ ಗುಳ್ಳೆಗಳು ಸಹ ಥಿಯೇಟರ್‌ ತುಂಬಾ ಹರಿದಾಡುತ್ತವೆ. ಜೋರಾಗಿ ಗಾಳಿ ಬೀಸುತ್ತದೆ, ಹೊಗೆ ಬರುತ್ತದೆ, ವಿವಿಧ ಸುವಾಸನೆ ಹರಡುತ್ತದೆ, ಸಣ್ಣ ಹನಿಗಳ ಮಳೆ ಬೀಳುತ್ತದೆ, ಬೆಳಕು ಕೂಡಾ ಬದಲಾಗುತ್ತಿರುತ್ತದೆ.

ಉತ್ತಮ ಗುಣಮಟ್ಟದ ಧ್ವನಿಗಾಗಿ 8 ಉನ್ನತ ತಂತ್ರಜ್ಞಾನದ ಸೌಂಡ್ ಬಾಕ್ಸ್ ಅಳವಡಿಸಲಾಗಿದೆ. ಉನ್ನತ ತಂತ್ರಜ್ಞಾನದ ಪ್ರೊಜೆಕ್ಟರ್ ಅಳವಡಿಸಲಾಗಿದೆ. ಇದರಿಂದ ತೆರೆಯ ಮೇಲೆ ತ್ರೀಡಿ ಇಮೇಜ್ ಸೃಷ್ಟಿಯಾಗುತ್ತವೆ. ಹುಬ್ಬಳ್ಳಿಯ ಜೈ ಭಾರತ್‌ ಎಲೆಕ್ಟ್ರಿಕಲ್ಸ್‌ನವರು ಈ ತಂತ್ರಜ್ಞಾನ ಅಳವಡಿಕೆಯ ಗುತ್ತಿಗೆ ಪಡೆದಿದ್ದು, ಚೈನ್ಹೈನ ತಂತ್ರಜ್ಞರು ಕೆಲಸ ನಿರ್ವಹಿಸಿದ್ದಾರೆ.

₹1 ಕೋಟಿಗೂ ಹೆಚ್ಚು ಖರ್ಚು:

ಥ್ರಿಲ್ಲರ್ ಥೇಟರ್ ಕಟ್ಟಡ, ಗುಹೆ ಹಾಗೂ ಅದರ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಮಿರರ್ ಇಮೇಜ್ ಪ್ರದರ್ಶನದ ಕಟ್ಟಡ ಸೇರಿ ₹44 ಲಕ್ಷ ವ್ಯಯಿಸಲಾಗಿದೆ. ತ್ರೀಡಿ ಸೇರಿದಂತೆ ವಿವಿಧ ತಂತ್ರಜ್ಞಾನದ ಅಳವಡಿಕೆಗಾಗಿ ಸುಮಾರು ₹70 ಲಕ್ಷ ವ್ಯಯಿಸಲಾಗಿದೆ. ಗುತ್ತಿಗೆ ಪಡೆದವರೇ ಎರಡು ವರ್ಷಗಳ ಕಾಲ ಇದನ್ನು ನಿರ್ವಹಿಸಬೇಕಿದೆ.

ಕಲಾವಿದರ ಬಳಕೆ:

ಈ ಕಟ್ಟಡದ ನಂತರ ಸಿಗುವ ಹೊರಗುಹೆಯನ್ನು ಬೆಂಗಳೂರಿನ ಕಲಾವಿದ ಮಹಾದೇವ ಬಡಿಗೇರ ಅವರ ತಂಡ ನಿರ್ಮಿಸಿದ್ದು, ಅದರ ಮೇಲಿನ ಚಿತ್ತಾರಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ.

ಜ.26ರಂದು ಉದ್ಘಾಟನೆ

ರಾಕ್ ಗಾರ್ಡನ್‌ನತ್ರೀಡಿ ಥ್ರಿಲ್ಲರ್ ಥೇಟರ್, ಎಂಟ್ರೆನ್ಸ್ ಪ್ಲಾಜಾಗೆ ಅಳವಡಿಸಿರುವ ತ್ರೀಡಿ ಪ್ರೊಜೆಕ್ಟರ್ ಮ್ಯಾಪಿಂಗ್ ಹಾಗೂ ಆಲಮಟ್ಟಿ ಎಡದಂಡೆ ಕಾಲುವೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯ ನವೀಕೃತ ಕಟ್ಟಡ ಉದ್ಘಾಟನೆ ಜ.26ರಂದು ಸಂಜೆ ನಡೆಯಲಿದೆ.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಲೋಕಾರ್ಪಣೆ ಮಾಡುವರು. ಆದರೆ, ಕಾರ್ಯಕ್ರಮ ನಡೆಯುವ ಬಗ್ಗೆ ಇನ್ನೂ ಅಂತಿಮಗೊಂಡಿಲ್ಲ ಎಂದು ಕೆಬಿಜೆಎನ್‌ಎಲ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT