ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | 55 ದಿನ ಲಾಕ್‌ಡೌನ್‌, ₹46.75 ಕೋಟಿ ಆದಾಯ ನಷ್ಟ

ಈಶಾನ್ಯ ಕರ್ನಾಟಕ ಸಾರಿಗೆ ವಿಜಯಪುರ ವಿಭಾಗ
Last Updated 19 ಮೇ 2020, 19:30 IST
ಅಕ್ಷರ ಗಾತ್ರ

ವಿಜಯಪುರ: ಕೊರೊನಾ ಲಾಕ್‌ಡೌನ್‌ನಿಂದ ಬಸ್‌ಗಳು 55 ದಿನ ಸಂಚರಿಸದ ಕಾರಣಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗಕ್ಕೆ ₹46.75 ಕೋಟಿ ಆದಾಯ ನಷ್ಟವಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಜಿ.ಗಂಗಾಧರ್‌, ನೆರೆಯ ಮಹಾರಾಷ್ಟ್ರ, ಗೋವಾ, ತೆಲಂಗಾಣ ಮತ್ತು ಆಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧ ನಗರಗಳು ಮತ್ತು ಜಿಲ್ಲೆಯೊಳಗೆ ಸೇರಿದಂತೆ ಪ್ರತಿ ದಿನ 700 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದವು, ಇದರಿಂದ ₹ 85 ಲಕ್ಷ ಆದಾಯ ಬರುತ್ತಿತ್ತು. ಆದರೆ, ಲಾಕ್‌ಡೌನ್‌ ಆದ ಬಳಿಕ ಎಲ್ಲ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿರುವ ಕಾರಣಕ್ಕೆ ಆದಾಯ ನಷ್ಟವಾಗಿದೆ ಎಂದು ಹೇಳಿದರು.

ಚಾಲಕ, ನಿರ್ವಾಹಕ ಸೇರಿದಂತೆ ವಿಭಾಗದಲ್ಲಿ 3300 ಸಿಬ್ಬಂದಿ ಇದ್ದು, ಸದ್ಯ ಒಂದು ಸಾವಿರ ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಾಗಿದ್ದಾರೆ. ಆರೋಗ್ಯ ದೃಷ್ಟಿಯಿಂದ 55 ವರ್ಷ ಮೇಲ್ಪಟ್ಟವರನ್ನು ಸದ್ಯ ಕೆಲಸಕ್ಕೆ ಬರದಂತೆ ತಿಳಿಸಲಾಗಿದೆ. ಸ್ವಇಚ್ಛೆಯಿಂದ ಕೆಲಸಕ್ಕೆ ಬರುವವರಿಗೆ ಅವಕಾಶ ಇದೆ ಎಂದು ಹೇಳಿದರು.

ನಿರ್ವಹಣೆ:ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲ ಬಸ್‌ಗಳನ್ನು ಎರಡು ದಿನಕ್ಕೊಮ್ಮೆ ಸ್ಟಾಟ್‌ ಮಾಡಿ, ಅಗತ್ಯ ನಿರ್ವಹಣೆ(ಮೆಂಟೆನೆನ್ಸ್‌) ಮಾಡಲಾಗಿದೆ. ಹೀಗಾಗಿ ಎಲ್ಲ ಬಸ್‌ಗಳು ಸುಸ್ಥಿತಿಯಲ್ಲಿವೆ ಎಂದು ತಿಳಿಸಿದರು.

200 ಕಿ.ಮೀ.ಒಳಗಿನ ನಗರಗಳಿಗೆ ಬೆಳಿಗ್ಗೆ ತೆರಳುವ ಬಸ್‌ಗಳು ಮರಳಿ ಅದೇ ದಿನ ಬರಲಿವೆ. 250 ಕಿ.ಮೀ.ಕ್ಕಿಂತ ದೂರದ ನಗರಗಳಿಗೆ ತೆರಳುವ ಬಸ್‌ಗಳು ಅಲ್ಲಿಯೇ ತಂಗಲಿದ್ದು, ಮರುದಿನ ಜಿಲ್ಲೆಗೆ ಬರಲಿವೆ ಎಂದು ಹೇಳಿದರು.

ಐದು ಸಾವಿರ ಮಾಸ್ಕ್‌:ವಿಜಯಪುರ ವಿಭಾಗದಲ್ಲಿ 5 ಸಾವಿರ ಮಾಸ್ಕ್‌, ಅಗತ್ಯ ಸ್ಯಾನಿಟೈಸರ್‌ ಸಂಗ್ರಹವಿದೆ.ಚಾಲಕರು ಮತ್ತು ನಿರ್ವಾಹಕರ ಆರೋಗ್ಯ ದೃಷ್ಟಿಯಿಂದ ಪ್ರತಿ ದಿನಕ್ಕೆ ತಲಾ ಎರಡು ಮಾಸ್ಕ್‌ ನೀಡಲಾಗುತ್ತಿದೆ. ಜೊತೆಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹೆಲ್ತ್‌ ಡೆಸ್ಕ್‌:ಆರೋಗ್ಯ ಇಲಾಖೆಯಿಂದ ಪ್ರತಿ ಬಸ್‌ ನಿಲ್ದಾಣದಲ್ಲಿ ಹೆಲ್ತ್‌ ಡೆಸ್ಕ್‌ ವ್ಯವಸ್ಥೆ ಮಾಡಲಾಗಿದೆ. ಹೊರ ಜಿಲ್ಲೆಗಳಿಂದ ಬರುವ ಮತ್ತು ಹೋಗುವ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜಧಾನಿಗೆ ಇಂದಿನಿಂದ ಬಸ್‌
ಬೆಂಗಳೂರಿಗೆ ಮೇ 20ರಿಂದ ಮೂರು ಬಸ್‌ಗಳನ್ನು ಓಡಿಸಲಾಗುವುದು. ಬೆಳಿಗ್ಗೆ 7.30 ರಿಂದ 9 ಗಂಟೆ ಒಳಗೆ ಪ್ರತಿ ಅರ್ಧ ತಾಸಿಗೊಮ್ಮೆ ಈ ಬಸ್‌ಗಳು ಹೊರಡಲಿವೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಜಿ.ಗಂಗಾಧರ್‌ ಹೇಳಿದರು.

ಮೇ 21ರಿಂದ ಬೆಂಗಳೂರಿಗೆ ನಾನ್‌ ಎಸಿ ಸ್ಲೀಪರ್‌ ಬಸ್‌ಗಳನ್ನು ಹಗಲು ವೇಳೆಯಲ್ಲೇ ಬೆಂಗಳೂರಿಗೆ ಸಂಚರಿಸಲಿದೆ ಎಂದು ತಿಳಿಸಿದರು.

ಪ್ರಯಾಣಿಕರ ಕೊರತೆ
ವಿಜಯಪುರ:
ನಗರದಿಂದ ಹುಬ್ಬಳ್ಳಿ, ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ, ಹೊಸಪೇಟೆ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಿಗೆ ಮಂಗಳವಾರದಿಂದ ಬಸ್‌ ಸಂಚಾರ ಆರಂಭವಾದರೂ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು.

ಬೆಳಿಗ್ಗೆ 7ರಿಂದ ಬಸ್‌ ಸಂಚಾರ ಆರಂಭವಾದರೂ 8 ಗಂಟೆ ವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರು ಬಾರದ ಹಿನ್ನೆಲೆಯಲ್ಲಿ ಹುಬ್ಬಳ್ಳಿ, ಬೆಳಗಾವಿ, ಕಲಬುರ್ಗಿಗೆ ವಿಳಂಬವಾಗಿ ಬಸ್‌ ಸಂಚರಿಸಿದವು.

180 ಬಸ್‌ ಕಾರ್ಯಾಚರಣೆ:ಲಾಕ್‌ಡೌನ್‌ ಬಳಿಕ ಪ್ರಥಮ ದಿನವಾದ ಮಂಗಳವಾರ 250 ಬಸ್‌ಗಳನ್ನು ವಿವಿಧ ಮಾರ್ಗಗಳಲ್ಲಿ ಓಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ನಿರೀಕ್ಷಿತ ಸಂಖ್ಯೆಯಲ್ಲಿ ಪ್ರಯಾಣಿಕರು ಬಾರದೇ ಇದ ಕಾರಣಕ್ಕೇ ಕೇವಲ 180 ಬಸ್‌ಗಳನ್ನು ಮಾತ್ರ ಓಡಿಸಲಾಯಿತು ಎಂದು ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT