ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಶೇ 60ರಷ್ಟು ಮಹಿಳೆಯರಿಗೆ ಅವಕಾಶ

ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ
Last Updated 5 ಏಪ್ರಿಲ್ 2022, 12:31 IST
ಅಕ್ಷರ ಗಾತ್ರ

ವಿಜಯಪುರ: ಪ್ರಸಕ್ತಆರ್ಥಿಕ ವರ್ಷದ ಆರಂಭದಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯಲ್ಲಿ ಶೇ 60ರಷ್ಟುಮಹಿಳೆಯರ ಭಾಗವಹಿಸುವಿಕೆ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಹೇಳಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪ್ರಸ್ತುತ ವರ್ಷ ಮಹಿಳೆಯರ ಭಾಗವಹಿಸುವಿಕೆಯನ್ನು ಶೇ 60 ರಷ್ಟು ಹೆಚ್ಚಿಸಬೇಕು ಎಂದು ಅವರು ಸೂಚಿಸಿದರು.

ದುರ್ಬಲ ವರ್ಗಗಳಾದ ಅಂಗವಿಕಲರು, ಹಿರಿಯ ನಾಗರಿಕರು, ಎಸ್‌ಸಿ, ಎಸ್‌ಟಿ, ಮಹಿಳಾ ಪ್ರಧಾನ ಕುಟುಂಬ ಹಾಗೂ ಮಂಗಳಮುಖಿಯರಿಗೆ ಈ ವರ್ಷ ಮೊದಲ ಆದ್ಯತೆಯಲ್ಲಿ ಉದ್ಯೋಗ ಚೀಟಿಗಳನ್ನು ವಿತರಿಸಬೇಕು ಮತ್ತು ಕಡ್ಡಾಯವಾಗಿ ಕೂಲಿ ಕೆಲಸ ಒದಗಿಸಬೇಕು ಎಂದರು.

ನರೇಗಾ ಕೂಲಿ ಕಾರ್ಮಿಕರ ಉದ್ಯೋಗ ಚೀಟಿಗಳನ್ನು ಗ್ರಾಮ ಪಂಚಾಯಿತಿ, ಗುತ್ತಿಗೆದಾರರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಬಳಿ ಇಟ್ಟುಕೊಳ್ಳದೇ ಕಡ್ಡಾಯವಾಗಿ ಫಲಾನುಭವಿಗಳ ಬಳಿ ಉದ್ಯೋಗ ಚೀಟಿಗಳು ಇರಬೇಕು ಎಂದರು.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ರಿಂದ 30 ಕೂಲಿಕಾರ್ಮಿಕರಿಗೆ ಒಬ್ಬ ಕಾಯಕ ಬಂಧು ಅವರನ್ನು ನೇಮಕ ಮಾಡಿ ಕನಿಷ್ಠ 5 ಕಾಯಕ ಸಂಘಗಳನ್ನು ರಚನೆ ಮಾಡಬೇಕು. ಕಾಯಕ ಬಂಧುಗಳನ್ನು ರಚನೆ ಮಾಡುವಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡಬೇಕು. ಕಡ್ಡಾಯವಾಗಿ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಒದಗಿಸಬೇಕು ಎಂದು ಸೂಚಿಸಿದರು.

ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಯೋಜನೆಯಡಿ ಉದ್ಯೋಗ ಚೀಟಿಗಳನ್ನು ವಿತರಿಸಿ ಶಾಲೆಗಳಲ್ಲಿ ಪೌಷ್ಟಿಕ ತೋಟ ನಿರ್ವಹಣೆಗಾಗಿ, ನರ್ಸರಿಗಳ ನಿರ್ವಹಣೆಗಾಗಿ, ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆಗಾಗಿ ಸ್ವ-ಸಹಾಯ ಸಂಘದ ಮಹಿಳೆಯರನ್ನು ನಿಯೋಜಿಸಬೇಕು. ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳನ್ನು ಹೆಚ್ಚು-ಹೆಚ್ಚು ಅನುಷ್ಠಾನಗೊಳಿಸಬೇಕು ಎಂದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪಶು ಆಸ್ಪತ್ರೆಗಳ ಆವರಣದಲ್ಲಿ ದನದ ದೊಡ್ಡಿ ಮತ್ತು ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಮಾಡಲು ಅವಕಾಶ ನೀಡಲಾಗಿದೆ. ನರೇಗಾ ಕಾಮಗಾರಿ ಸ್ಥಳಗಳಲ್ಲಿ ಕಡ್ಡಾಯವಾಗಿ ನಾಮ ಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.

ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಸೋಮವಾರ ನರೇಗಾ ದಿನ ಆಚರಣೆ ಮಾಡಬೇಕು. ನರೇಗಾ ದಿನ ಆಚರಣೆಯಲ್ಲಿ ಸಾರ್ವಜನಿಕರಿಂದ ಹೊಸ ಉದ್ಯೋಗ ಚೀಟಿಗಾಗಿ ನಮೂನೆ 1ರಲ್ಲಿ ಅರ್ಜಿಗಳನ್ನು ಸ್ವೀಕರಿಸಬೇಕು, ಕೆಲಸದ ಬೇಡಿಕೆಗಾಗಿ ನಮೂನೆ 6ರಲ್ಲಿ ಅರ್ಜಿ ಸ್ವೀಕರಿಸಬೇಕು ಮತ್ತು ಕೂಲಿ ಕಾರ್ಮಿಕರ ಸಮಸ್ಯೆಗಳು, ಕುಂದುಕೊರತೆಗಳನ್ನು ಪರಿಹರಿಸುವ ಕಾರ್ಯ ಮಾಡಬೇಕು ಎಂದು ಅವರು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಬಿ.ದೇವರಮನಿ, ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ ಸಭೆಯಲ್ಲಿಉಪಸ್ಥಿತರಿದ್ದರು.

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಪ್ರಸ್ತುತ ಸಾಲಿನ ಮೊದಲ ಮೂರು ತಿಂಗಳು ಕೇವಲ ಕೂಲಿ ಆಧಾರಿತ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು.

–ರಾಹುಲ್ ಶಿಂಧೆ,ಮುಖ್ಯಕಾರ್ಯನಿರ್ವಹಣಾಧಿಕಾರಿ,ಜಿಲ್ಲಾ ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT