ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಖುಷಿ | ದ್ರಾಕ್ಷಿ ನಾಡಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆದ ರೈತ

ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಯುವ ರೈತ ಗುರು ಮಾಳಿ ಪ್ರಯೋಗ ಯಶಸ್ವಿ
Published 26 ಜನವರಿ 2024, 5:46 IST
Last Updated 26 ಜನವರಿ 2024, 5:46 IST
ಅಕ್ಷರ ಗಾತ್ರ

ತಿಕೋಟಾ: ಸಂಪೂರ್ಣ ದ್ರಾಕ್ಷಿ ಬೆಳೆಗೆ ಅವಲಂಬಿತರಾಗಿರುವ ಈ ಭಾಗದಲ್ಲಿ ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಯುವ ರೈತ ಗುರು ಮಾಳಿ ಬಾಬಾನಗರದಲ್ಲಿರುವ ತಮ್ಮ ಒಟ್ಟು ಐದು ಎಕರೆ ಜಮೀನಿನಲ್ಲಿ ಎರಡೂವರೆ ಎಕರೆ ಬ್ಯಾಡಗಿ ಮೆಣಸಿನಕಾಯಿ (2043), ಎರಡೂವರೆ ಎಕರೆ ಸಿಜೆಂಟಾ ಮೆಣಸಿನ (553) ಬೆಳೆ ಬೆಳೆದು ಮಾದರಿಯಾಗಿದ್ದಾರೆ.

ಪ್ರವಾಸಕ್ಕೆಂದು ಕೊಪ್ಪಳಕ್ಕೆ ಹೋದಾಗ ಗುರು ಅವರ, ಅಡವಿಬಾವಿ ಗ್ರಾಮದ ಸ್ನೇಹಿತ ಮಲ್ಲಪ್ಪ ಯರಿಯರ್ ಅವರ ತೋಟದಲ್ಲಿ ಬೆಳೆದ ಈ ಬೆಳೆ ಕಂಡು ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಬರುವ ನಿರೀಕ್ಷೆ ಇಟ್ಟುಕೊಂಡು ದ್ರಾಕ್ಷಿ ನಾಡಿನಲ್ಲಿ ಪ್ರಯೋಗ ಮಾಡಿದ್ದಾರೆ. ಅವರ ತೋಟದಿಂದ ಬೀಜ ತಂದು ಹೆಬ್ಬಾಳಹಟ್ಟಿ ನರ್ಸರಿ ಸಹಾಯದಿಂದ ಸಸಿ ತಯಾರಿಸಿ ತೋಟದಲ್ಲಿ ನಾಟಿ ಮಾಡಿದ್ದಾರೆ.

ಒಂದು ಎಕರೆಗೆ ಹನ್ನೆರಡು ಸಾವಿರ ಸಸಿ, ಐದು ಎಕರೆಗೆ ಅರವತ್ತು ಸಾವಿರ ಮೆಣಸಿನಕಾಯಿ ಸಸಿ ನಾಟಿ ಮಾಡಿದ್ದಾರೆ. ಗಿಡದಿಂದ ಗಿಡಕ್ಕೆ ಒಂದು ಅಡಿ, ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಂತರವಿಟ್ಟು ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಒಂದು ಎಕರೆಗೆ ಎರಡು ಟನ್ ಮೆಣಸಿನಕಾಯಿ ಬೆಳೆಯುತ್ತದೆ. ಒಂದು ಕೆಜಿಗೆ ಕನಿಷ್ಠ ₹ 150 ದರ ಬಂದರು ₹ 3 ಲಕ್ಷ ಆಗುತ್ತದೆ. ಐದು ಎಕರೆಗೆ ಒಂಬತ್ತರಿಂದ ಹತ್ತು ಟನ್ ಆಗುವುದು. ಒಟ್ಟು ₹ 15 ಲಕ್ಷ ಆದಾಯ ದೊರಕುವ ನಿರೀಕ್ಷೆ ಇದೆ. ಎಕರೆಗೆ ಒಂದು ಲಕ್ಷ ಖರ್ಚು ಕಳೆದರೂ ಐದು ಎಕರೆಗೆ ಐದು ಲಕ್ಷ ಖರ್ಚಾಗಿ  ಹತ್ತು ಲಕ್ಷ ಆದಾಯ ದೊರಕುತ್ತದೆ ಎನ್ನುತ್ತಾರೆ ರೈತ.

ಸದ್ಯ ಏಳು ಟನ್ ಬೆಳೆ ಬಂದಿದ್ದು, ಬ್ಯಾಡಗಿ ಮಾರುಕಟ್ಟೆಗೆ ಮಾರಾಟಕ್ಕೆ ಒಯ್ಯಲು ಸಿದ್ಧತೆ ನಡೆದಿದೆ. ಹತ್ತಾರು ದಿನ ಬಿಸಿಲಿಗೆ ಒಣಹಾಕಿ ಕಸ ಕಡ್ಡಿಯಿಂದ ಸ್ವಚ್ಛಗೊಳಿಸಲಾಗಿದೆ. ಇನ್ನೂ ಮೂರು ಟನ್ ತೋಟದಲ್ಲಿ ಇದೆ ಎಂದು ಅವರು ಹೇಳಿದರು.

ಹದಿನೆಂಟು ಎಕರೆ ದ್ರಾಕ್ಷಿ ಬೆಳೆ ಇದ್ದು ಅದರಿಂದಲೂ ಉತ್ತಮ ಆದಾಯ ಪಡೆಯುವ  ಗುರು, ಎರಡು ಒಣದ್ರಾಕ್ಷಿ ವಿಂಗಡನಾ ಮಷಿನ್ ಹೊಂದಿದ್ದು, ಇದರಿಂದ ಈ ಭಾಗದ ಒಣದ್ರಾಕ್ಷಿ ಬೆಳೆಯುವ ರೈತರಿಗೆ ಅನೂಕೂಲವಾಗಿದೆ. ಈ ಘಟಕಗಳಲ್ಲಿ ಹತ್ತಾರು ಜನರಿಗೆ ಋತುಮಾನಕ್ಕೆ ತಕ್ಕಂತೆ  ಉದ್ಯೋಗ ದೊರೆತಿದೆ. ಸಹೋದರ ಮಲ್ಲಿಕಾರ್ಜುನ, ಅಳಿಯ ಬೈರು, ಅಶೋಕ ಎಲ್ಲ ಜಮೀನಿನಲ್ಲಿ ಕೃಷಿ ಮಾಡಲು ಸಹಾಯಕರಾಗಿದ್ದಾರೆ.

ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಬೆಳಗಾವಿ ವತಿಯಿಂದ ಕರ್ನಾಟಕ ಭೂಷಣ ಪ್ರಶಸ್ತಿ ಕೂಡಾ ಲಭಿಸಿದೆ.

ತಿಕೋಟಾ ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ಬೆಳೆದ ಬ್ಯಾಡಗಿ ಮೆಣಸಿನಕಾಯಿಯನ್ನು ರೈತ ಗುರು ಮಾಳಿ ಬಿಸಿಲಿಗೆ ಒಣ ಹಾಕಲು ಗುಂಪು ಮಾಡುತ್ತಿರುವುದು
ತಿಕೋಟಾ ತಾಲ್ಲೂಕಿನ ಬಾಬಾನಗರ ಗ್ರಾಮದಲ್ಲಿ ಬೆಳೆದ ಬ್ಯಾಡಗಿ ಮೆಣಸಿನಕಾಯಿಯನ್ನು ರೈತ ಗುರು ಮಾಳಿ ಬಿಸಿಲಿಗೆ ಒಣ ಹಾಕಲು ಗುಂಪು ಮಾಡುತ್ತಿರುವುದು

ಕೈ ಹಿಡಿದ ನೀರಾವರಿ: ಮೊದಲು ಕೃಷಿಗೆ ನೀರು ಪೂರೈಸುವುದೇ ದೊಡ್ಡ ಸವಾಲಾಗಿತ್ತು. ಸಾವಿರಾರು ಅಡಿ ಬೋರವೆಲ್ ಕೊರೆದರೂ ನೀರು ಬರುತ್ತಿರಲಿಲ್ಲ. ಸಾಕಷ್ಟು ಸಾಲ ಮಾಡಿ ಈ ಭಾಗದ ರೈತರು ಕಣ್ಣಿರು ಹಾಕುತ್ತಿದ್ದರು. ಸದ್ಯ ಎಂ.ಬಿ‌.ಪಾಟೀಲ ಅವರು ಮಾಡಿದ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಈ ಭಾಗದ ಹಳ್ಳ, ಬಾಂದಾರ ತುಂಬಿ ಹರಿದಿದ್ದರ ಪರಿಣಾಮ ಅಂತರ್ಜಲ ಹೆಚ್ಚಾಗಿದ್ದು ಬೋರ್‌ವೆಲ್‌ಗಳಲ್ಲಿ ನೀರು ಭರಪೂರ ಬಂದಿವೆ. ಇದರಿಂದ ಕೃಷಿ ಹೊಂಡ ಮಾಡಿಕೊಂಡಿದ್ದು, ಬೆಳೆಗಳಿಗೆ ಪೂರಕವಾಗಿದೆ.

ಸದ್ಯ ದ್ರಾಕ್ಷಿ ಹೆಚ್ಚಾಗಿ ಬೆಳೆದರೂ ನಿಗದಿತ ದರವಿಲ್ಲದೆ ಕಷ್ಟದಲ್ಲಿದ್ದೇವೆ. ಮೆಣಸಿನಕಾಯಿ ಬೆಳೆಯಿಂದ ಉತ್ತಮ ಆದಾಯ ಬರುವ ನೀರಿಕ್ಷೆ ಇದೆ
-ಗುರು ಮಾಳಿ ರೈತ ಕಳ್ಳಕವಟಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT