ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಅವಸಾನದ ಅಂಚಿಗೆ ಐತಿಹಾಸಿಕ ಕೋಟೆ ಗೋಡೆ

ಗುಮ್ಮಟಪುರವನ್ನು ಹೊರಸುತ್ತಿವರಿದ 11 ಕಿ.ಮೀ. ಕಲ್ಲಿನ ಕೋಟಗೋಡೆ
ಬಸವರಾಜ್‌ ಸಂಪಳ್ಳಿ
Published 12 ಫೆಬ್ರುವರಿ 2024, 6:11 IST
Last Updated 12 ಫೆಬ್ರುವರಿ 2024, 6:11 IST
ಅಕ್ಷರ ಗಾತ್ರ

ವಿಜಯಪುರ: ಶತಮಾನಗಳ ಹಿಂದೆ ಬಿಜಾಪುರದ ಆದಿಲ್ ಶಾಹಿ ಸಾಮ್ರಾಜ್ಯಕ್ಕೆ ರಕ್ಷಣೆ ನೀಡಿದ್ದ ಬೃಹತ್‌ ಕಲ್ಲಿನ ಕೋಟೆ ಇದೀಗ ಅವಸಾನದ ಅಂಚಿಗೆ ತಲುಪಿದೆ. 

ಐತಿಹಾಸಿಕ ಕೋಟೆಗೋಡೆಯ ರಕ್ಷಣೆಯ ಹೊಣೆ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಕಣ್ಣೆದುರೇ ಉದುರಿ ಬೀಳುತ್ತಿದ್ದರೂ ನಿರ್ಲಕ್ಷ್ಯ ವಹಿಸಿವೆ. ಇತಿಹಾಸದ ಅರವಿಲ್ಲದ ಸ್ಥಳೀಯರು ಗೋಡೆಯನ್ನೇ ಒತ್ತುವರಿ ಮಾಡಿ, ಬೀಡುಬಿಟ್ಟಿದ್ದಾರೆ!

ಹೌದು, ಆದಿಲ್‌ಶಾಹಿ ಅರಸರ ಕಾಲದ ಬೃಹತ್‌ ಕೋಟೆ ಗೋಡೆ ಪ್ರಕೃತಿ ಮತ್ತು ಜನರ ಆಕ್ರಮಣದಿಂದ ಜರ್ಜರಿತವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇನ್ನು ಕೆಲವೇ ವರ್ಷಗಳಲ್ಲಿ ಈ ಕೋಟೆ ಹೇಳ ಹೆಸರಿಲ್ಲದಂತಾಗುವುದರಲ್ಲಿ ಅನುಮಾನವಿಲ್ಲ.

ಐತಿಹಾಸಿಕ ಕೋಟೆಗೋಡೆಯು ಬಹುಶಃ ಭಾರತದ ಬೃಹತ್ ಕೋಟೆಗೋಡೆಗಳಲ್ಲೊಂದಾಗಿದೆ. ಗುಮ್ಮಟಪುರವನ್ನು ವೃತ್ತಾಕಾರದಲ್ಲಿ ಹೊರಸುತ್ತುವರಿದಿರುವ ಈ ಗೋಡೆಯ ಸುತ್ತಳತೆ ಸುಮಾರು 11 ಕಿ.ಮೀ.ಗೂ ಅಧಿಕ ಇದೆ. ಇನ್ನೊಂದು ಅರಮನೆಯನ್ನು ಸುತ್ತುವರಿದಿರುವ ಗೋಡೆಯು ಸುಮಾರು 2.5 ಕಿ.ಮೀ.ಇದೆ. ದೊಡ್ಡ ಕರಿ ಕಲ್ಲುಗಳಿಂದ ಕಟ್ಟಿರುವ ಕೋಟೆಗೋಡೆಗಳು ಕೆಲವೆಡೆ 30ರಿಂದ 50 ಅಡಿಗಳಷ್ಟು ದಪ್ಪ ಇವೆ. 

ಐತಿಹಾಸಿಕ ನಗರ ಬಿಜಾಪುರದ ಸುರಕ್ಷತೆಯ ದೃಷ್ಟಿಯಿಂದ ಈ ಕೋಟೆಗೋಡೆಯನ್ನು ಕ್ರಿ.ಶ. 1556ರಲ್ಲಿ ಯೂಸೂಫ್ ಆದಿಲ್ ಶಾಹನು ಕಟ್ಟಿಸಿರುವುದಾಗಿ ಇತಿಹಾಸದ ಪುಟಗಳಿಂದ ತಿಳಿಯುತ್ತದೆ. ಸುಂದರ ವಾಸ್ತುಶೈಲಿಯಲ್ಲಿ ಬಲಿಷ್ಠವಾಗಿ ಕಟ್ಟಿರುವ ಈ ಕೋಟೆಗೋಡೆಯನ್ನು ಸ್ಥಳೀಯವಾಗಿ ‘ಅರಕಿಲ್ಲಾ’ ಎಂದು ಕರೆಯುತ್ತಾರೆ.

ಈ ಕೋಟೆ ಗೋಡೆಯ ಸುತ್ತಲೂ 50 ಅಡಿ ಅಗಲದ ಕಂದಕವೂ ಇದೆ. ವೈರಿಗಳ ಆಕ್ರಮಣದಿಂದ ರಕ್ಷಣೆಗಾಗಿ ಕಟ್ಟಿಸಲಾದ ಈ ಕಂದಕದಲ್ಲಿ ಅಂದು ನೀರಿನ್ನು ಸಂಗ್ರಹಿಸಿ, ಅದರಲ್ಲಿ ಮೊಸಳೆ, ವಿಷಕಾರಿ ಹಾವುಗಳನ್ನು ಬಿಡುತ್ತಿದ್ದರು ಎನ್ನಲಾಗುತ್ತದೆ.

ಈ ಕೋಟೆ ಗೋಡೆ 30 ರಿಂದ 50 ಅಡಿ ಎತ್ತರ ಇದೆ. ಕೋಟೆಗುಂಟ ದೊಡ್ಡದಾದ 96 ಬುರ್ಜ್‌ಗಳಿವೆ. ಕೋಟೆಯಲ್ಲಿ 10 ಮುಖ್ಯದ್ವಾರಗಳಿದ್ದು, ಪ್ರತಿಯೊಂದು 25 ಅಡಿ ಅಗಲವಾಗಿವೆ. ವೈರಿಗಳ ಆಕ್ರಮಣದ ಸಮಯದಲ್ಲಿ ವಿಜಯಪುರದ ಆದಿಲ್‌ಶಾಹಿಗಳು ಈ ಕೋಟೆಗೋಡೆಯನ್ನು ಬಳಸುತ್ತಿದ್ದರು.

ಇಂತಹ ಐತಿಹಾಸಿಕ ಮಹತ್ವವುಳ್ಳ ಹಾಗೂ ಈಗಲೂ ಇತಿಹಾಸಕ್ಕೆ ಸಾಕ್ಷಿಯಾಗಿರುವ ಈ ಕೋಟೆಗೋಡೆ ಶಿಥಿಲವಾಗಿದ್ದು, ಕೆಲವೆಡೆ ಕಲ್ಲುಗಳು ಉರುಳಿ ಬಿದ್ದಿವೆ. ಕೆಲವೆಡೆ ಈ ಗೋಡೆಯನ್ನು ಅತಿಕ್ರಮಿಸಿ ಮನೆ, ಗುಡಿಸಲು, ಶೆಡ್‌ಗಳನ್ನು ಕಟ್ಟಿಕೊಳ್ಳಲಾಗಿದೆ. ಇನ್ನು ಕೆಲವೆಡೆ ಈ ಗೋಡೆಯ ಮೇಲೆ ಹುಲ್ಲು, ಕಂಠಿಗಳು ಬೆಳೆದು ಹಾಳಾಗಿದೆ. ಮಳೆ, ಗಾಳಿ, ಬಿಸಿಲಿಗೆ ಶತಮಾನಗಳಿಂದ ಮೈಯೊಡ್ಡಿ ಶಿಥಿಲವಾಗಿ ಬೀಳುತ್ತಿದೆ.

ಅಲ್ಲದೇ, ಕೋಟೆ ಗೋಡೆ ಪಕ್ಕದಲ್ಲಿರುವ ನೀರಿನ ಕಂದಕವು ತ್ಯಾಜ್ಯದಿಂದ ತುಂಬಿಕೊಂಡಿದೆ. ನಗರದ ಜನರು ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಅಷ್ಟೇ ಅಲ್ಲ, ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಹಂದಿ, ಬೀದಿನಾಯಿಗಳ ವಾಸಸ್ಥಾನವಾಗಿದೆ. ಕೋಟೆಗೋಡೆ ಕಂದಕದಲ್ಲಿ ತ್ಯಾಜ್ಯ ನೀರು ನಿಂತು ಸೊಳ್ಳೆಗಳ ಆವಾಸ ಸ್ಥಾನವಾಗಿದೆ.

ಕೋಟೆ ಗೋಡೆ ಜನರ ನಿರ್ಲಕ್ಷ್ಯದ ಜೊತೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯಕ್ಕೂ ಸಾಕ್ಷಿಯಾಗಿ ಉದುರಿಬೀಳುತ್ತಿದೆ. ತಾನು ಉದುರಿಬೀಳುವ ಜೊತೆಗೆ ಕೋಟೆಯ ಒಡಲಲ್ಲಿ ಹುದುಗಿರುವ ಇತಿಹಾಸವೂ ಉರುಳಿ ಕಾಲದಲ್ಲಿ ಲೀನವಾಗುತ್ತಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಕೋಟೆ ಗೋಡೆಯು ಪುರಾತತ್ವ ಇಲಾಖೆಗೆ ಸೇರಿದ ಆಸ್ತಿ ಎಂದು ಅಲ್ಲಲ್ಲಿ ಫಲಕವನ್ನು ಅಳವಡಿಸಿರುವುದನ್ನು ಹೊರತು ಪಡಿಸಿ, ಅದರ ಸಂರಕ್ಷಣೆಗೆ ಒಂದಿನಿತು ಆದ್ಯತೆ ನೀಡಿಲ್ಲ. 

ಐತಿಹಾಸಿಕ ವಿಜಯಪುರ ನಗರವು ಆದಿಲ್‌ಶಾಹಿಗಳ ಆಡಳಿತಾವಧಿಯಲ್ಲಿ ಕೋಟೆಗೋಡೆ ಒಳಗೆ ಸೀಮಿತವಾಗಿತ್ತು. ಆದರೆ, ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಳವಾಗಿ, ನಗರವು ಬೆಳೆಯುತ್ತಾ ಸದ್ಯ ಕೋಟೆಗೋಡೆಯ ಆಚೆಗೂ ಕಿ.ಮೀ.ಗಟ್ಟಲೇ ವಿಸ್ತಾರವಾಗಿ ಹಬ್ಬಿದೆ. ಐತಿಹಾಸಿಕ ಮಹತ್ವವುಳ್ಳ ಈ ಕೋಟೆ ಗೋಡೆಯ ರಕ್ಷಣೆಗೆ ಆದ್ಯತೆ ಸಿಗಬೇಕಿದೆ.

‘ಕೋಟೆ ಗೋಡೆ ಕುರುಹು ಈಗಾಗಲೇ ನಾಶವಾಗಿರುವ ಕಡೆ ಬಿಟ್ಟು, ನಗರದ ಬಾಗಲಕೋಟೆ ರಸ್ತೆಯ ಆರ್‌ಟಿಒ ಕಚೇರಿ ಬಳಿ, ಮನಗೂಳಿ ಅಗಸಿ ಬಳಿ, ಶಿವಾಜಿ ವೃತ್ತದ ಬಳಿ, ಇಂಡಿ ರಸ್ತೆ  ಮತ್ತು ಆಶ್ರಮ ರಸ್ತೆ(ಲಿಂಗದ ಗುಡಿ ರಸ್ತೆ)ಯಲ್ಲಿ ಹಾಗೂ ರೈಲು ನಿಲ್ದಾಣದ ಬಳಿ ಕೋಟೆ ಗೋಡೆ ಇಂದಿಗೂ ಕಾಣಲು ಲಭ್ಯ ಇದೆ. ಈ ಭಾಗದಲ್ಲಾದರೂ ರಕ್ಷಣೆ ಮಾಡಬೇಕು’ ಎನ್ನುತ್ತಾರೆ ಇತಿಹಾಸತಜ್ಞ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ.

‘ಕೆಲವು ಕಡೆ ಈಗಾಗಲೇ ಕೋಟೆಗೋಡೆ ಸಂಪೂರ್ಣ ನಾಶವಾಗಿದೆ. ಈ ಸ್ಥಳಗಳಲ್ಲಿ 300 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ಮನೆ, ಕಟ್ಟಡ, ಅಭಿವೃದ್ಧಿ ಕಾರ್ಯ ಮಾಡದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಅನಗತ್ಯ ನಿರ್ಬಂಧ ವಿಧಿಸಿರುವುದು ನಗರದ ಅಭಿವೃದ್ಧಿ ದೃಷ್ಟಿಯಿಂದ ಸರಿಯಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ಮಾಡಿಕೊಡಬೇಕು. ಸರ್ಕಾರವೂ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು’ ಎನ್ನುತ್ತಾರೆ ಅವರು.

ಶಿಥಿಲವಾಗಿರುವ ವಿಜಯಪುರ ಕೋಟೆ ಗೋಡೆ–ಪ್ರಜಾವಾಣಿ ಚಿತ್ರ
ಶಿಥಿಲವಾಗಿರುವ ವಿಜಯಪುರ ಕೋಟೆ ಗೋಡೆ–ಪ್ರಜಾವಾಣಿ ಚಿತ್ರ

–ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಇತಿಹಾಸ ತಜ್ಞ 

ಗಿಡಗಂಟಿಗಳಿಂದ ಆವೃತವಾಗಿರುವ ವಿಜಯಪುರದ ಐತಿಹಾಸಿಕ ಕೋಟೆ ಗೋಡೆ 
ಗಿಡಗಂಟಿಗಳಿಂದ ಆವೃತವಾಗಿರುವ ವಿಜಯಪುರದ ಐತಿಹಾಸಿಕ ಕೋಟೆ ಗೋಡೆ 
ವಿಜಯಪುರ ನಗರದ ಐತಿಹಾಸಿಕ ಕೋಟೆ ಗೋಡೆ ಬುಡದಲ್ಲಿ ಸ್ಥಳೀಯರು ಎಮ್ಮೆಗಳನ್ನು ಕಟ್ಟಿಹಾಕಿರುವುದು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಐತಿಹಾಸಿಕ ಕೋಟೆ ಗೋಡೆ ಬುಡದಲ್ಲಿ ಸ್ಥಳೀಯರು ಎಮ್ಮೆಗಳನ್ನು ಕಟ್ಟಿಹಾಕಿರುವುದು–ಪ್ರಜಾವಾಣಿ ಚಿತ್ರ
ಶಿಥಿಲಾವಸ್ತೆ ತಲುಪಿರುವ ವಿಜಯಪುರ ನಗರದ ಐತಿಹಾಸಿಕ ಕೋಟೆ ಗೋಡೆ–ಪ್ರಜಾವಾಣಿ ಚಿತ್ರ
ಶಿಥಿಲಾವಸ್ತೆ ತಲುಪಿರುವ ವಿಜಯಪುರ ನಗರದ ಐತಿಹಾಸಿಕ ಕೋಟೆ ಗೋಡೆ–ಪ್ರಜಾವಾಣಿ ಚಿತ್ರ
ಕೃಷ್ಣ ಕೊಲ್ಹಾರ ಕುಲಕರ್ಣಿ
ಕೃಷ್ಣ ಕೊಲ್ಹಾರ ಕುಲಕರ್ಣಿ
ಕೋಟೆ ಗೋಡೆ ಬಗ್ಗೆ ನಿಷ್ಕಾಳಜಿ ತೋರಿಸಿದ ಪರಿಣಾಮ ಬಿದ್ದುಹೋಗಿದೆ. ಐತಿಹಾಸಿಕ ವಿಜಯಪುರದ ಸೌಂದರ್ಯೀಕರಣದ ದೃಷ್ಟಿಯಿಂದ ಹಾಗೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ನಮ್ಮ ಮುಂದಿನ ಪೀಳಿಗೆಗೆ ತೋರಿಸಲಾದರೂ ಅಳಿದುಳಿದಿರುವ ಕೋಟೆಯನ್ನು ಕಾಪಾಡಲು ಕಾಳಜಿ ವಹಿಸಬೇಕು
ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಇತಿಹಾಸ ತಜ್ಞ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT