ಚಡಚಣ: ಸಮಗ್ರ ಕೃಷಿಯಲ್ಲಿ ಯಶ ಕಂಡ ರೈತ

ಚಡಚಣ: ಕಷ್ಟದ ದಿನಗಳಲ್ಲಿ ಜೀವನ ಸಾಗಿಸುತ್ತಿದ್ದ ಚಡಚಣದ ನಿರುದ್ಯೋಗಿ ಯುವಕನೊಬ್ಬ ಪ್ರಗತಿಪರ ರೈತನಾಗಿ ಕೃಷಿಯಲ್ಲಿ ಹೆಸರು ಮಾಡಿದ ಸಾಧನೆ ಇತರೆಯವರಿಗೆ ಮಾದರಿಯಾಗಿದೆ.
ಕುಟುಂಬದ 40 ಎಕರೆ ಜಮೀನು ಉಳುಮೆಗೂ ಕಾಸಿರದೆ ಪರದಾಡುತ್ತಿದ್ದ ಉಮೇಶ ಗುರುಬಸಪ್ಪ ಕೊಂಕಣಗಾಂವ ಎಂಬ ಯುವಕ ಡಿಪ್ಲೋಮಾ ಮುಗಿಸಿ 11 ವರ್ಷ ಬೆಂಗಳೂರು, ಪುಣೆ ನಗರಗಳಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ. ನಗರ ಜೀವನಕ್ಕೆ ಹೊಂದಿಕೊಳ್ಳದೇ ಗ್ರಾಮಕ್ಕೆ ಮರಳಿ, ತಮ್ಮ ಒಣ ಜಮೀನಿನ್ನು ಹಂತ ಹಂತವಾಗಿ ಸುಧಾರಣೆಗೊಳಿಸಿ, ನಿರಾವರಿಗೆ ಒಳಪಡಿಸಿ ಕೃಷಿಯಲ್ಲಿ ಉತ್ತಮ ಆದಾಯ ಗಳಿಸ ತೊಡಗಿದ್ದಾರೆ.
40 ಎಕರೆ ಜಮೀನನ್ನು ಸಂಪೂರ್ಣ ನಿರಾವರಿಗೆ ಒಳಪಡಿಸಲು 3 ಬಾವಿಗಳನ್ನು, 7 ಕೊಳವೆ ಬಾವಿಗಳನ್ನು ತೋಡಿಸಿದರು. 2 ಬೃಹತ್ ಗಾತ್ರದ ಕೃಷಿಹೊಂಡ ನಿರ್ಮಿಸಿ, ಹನಿ ನಿರಾವರಿ ಪದ್ಧತಿ ಅಳವಡಿಸಿಕೊಂಡು ವಾಣಿಜ್ಯ ಬೆಳೆಗಳೊಂದಿಗೆ ಸಾಂಪ್ರದಾಯಿಕ ಹಾಗೂ ಸಾವಯವ ಕೃಷಿ ಪದ್ಧತಿಯಿಂದ ಅಧಿಕ ಇಳುವರಿ ಪಡೆಯಲಾರಂಭಿಸಿದ್ದಾರೆ.
ತಮ್ಮ ಜಮೀನಿನ 7 ಎಕರೆ ಪ್ರದೇಶಲ್ಲಿ ಉತ್ತಮ ಗುಣಮಟ್ಟದ ಮೆಳಸಿನಕಾಯಿ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಪ್ರಸಕ್ತ ವರ್ಷ ಬ್ಯಾಡಗಿ ಹಾಗೂ ಸಂಕೇಶ್ವರ ಮೆಣಸಿನಕಾಯಿ ಬೆಳೆದು ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಸುಮಾರು ₹21 ಲಕ್ಷ ನಿವ್ವಳ ಆದಾಯದ ಗುರಿ ಹೊಂದಿದ್ದಾರೆ.
ಜಮೀನಿನ ಭಾಗವಾಗಿ 5 ಎಕರೆ ಪ್ರದೇಶದಲ್ಲಿ ದಾಳಿಂಬೆ. 10 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಗಳೊಂದಿಗೆ 2 ಎಕರೆ ಪ್ರದೇಶದಲ್ಲಿ ರಸಬಾಳೆ, ತೆಂಗಿನಮರಗಳನ್ನು ಬೆಳೆಸಿದ್ದಾರೆ. ಇನ್ನುಳಿದ ಜಮೀನಿನಲ್ಲಿ ಮಾವು, ಸಾಗವಾನಿ ಜೊತೆಗೆ ಕಲ್ಲಂಗಡಿ, ಖರಬೂಜ, ಟೊಮಾಟೊ, ಹಿರೇಕಾಯಿ ಹಾಗೂ ಹಾಗಲಕಾಯಿ ಸೇರಿದಂತೆ ವಿವಿಧ ಬಗೆಯ ತರಕಾರಿ ಬೆಳೆದು ಸಮಗ್ರ ಕೃಷಿಯಿಂದ ವಾರ್ಷಿಕ ಸುಮಾರು ₹ 60 ಲಕ್ಷ ಆದಾಯ ಹೊಂದುತ್ತಿದ್ದಾರೆ.
ವಿವಿಧ ಬಗೆಯ ಜಾನುವಾರುಗಳ ಸಾಕಾಣಿಕೆಯೊಂದಿಗೆ ಜಮೀನಿನ ಶೇ 80 ಭಾಗ ಸಾವಯವ ಕೃಷಿ ಪದ್ಧತಿಗೆ ಒಳಪಡಿಸಿದ್ದಾರೆ. ಇದಕ್ಕಾಗಿ ಜೈವಿಕ ರಸಗೊಬ್ಬರ ತೊಟ್ಟಿ ನಿರ್ಮಿಸಿದ್ದಾರೆ. ಕೃಷಿ ಹಾಗೂ ಜಾನುವಾರು ತ್ಯಾಜ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಬೆಳೆದ ಬೆಳೆಯನ್ನು ಸೂಕ್ತವಾಗಿ ಸಂಗ್ರಹಿಸಿಡಲು ತಮ್ಮದೆ ಆದ ಕೋಲ್ಡ್ ಸ್ಟೋರೇಜ್ ನಿರ್ಮಿಸಿಕೊಂಡಿದ್ದಾರೆ.
****
ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಜೋತು ಬೀಳದೆ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿಯಲ್ಲಿ ನಿರಂತರ ಆದಾಯ ಪಡೆಯಬಹುದು
-ಉಮೇಶ ಕೊಂಕಣಗಾಂವ ರೈತ, ಚಡಚಣ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.