ಶನಿವಾರ, ಏಪ್ರಿಲ್ 1, 2023
23 °C
ಮಿಶ್ರ ಬೇಳೆ ಪದ್ಧತಿಯಿಂದ ಅಧಿಕ ಲಾಭ

ಸಾವಯವ ಕೃಷಿಯಲ್ಲಿ ಯಶ ಕಂಡ ರೈತ

ಅಲ್ಲಮಪ್ರಭು ಕರ್ಜಗಿ Updated:

ಅಕ್ಷರ ಗಾತ್ರ : | |

Prajavani

ಚಡಚಣ: ಕೃಷಿಯಲ್ಲಿ ಲಾಭ ಕಡಮೆ, ಬೆಳೆ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಹಲವು ರೈತರು ಬೇಸರ ವ್ಯಕ್ತಪಡಿಸುತ್ತಾರೆ. ಇವರ ಮಧ್ಯೆ ಕೃಷಿಯಲ್ಲಿ ಹೊಸ ಹೊಸ ಪದ್ಧತಿಗಳನ್ನು ಅಳವಡಿಸಿಕೊಂಡು ಉತ್ತಮ ಆದಾಯ ಹೊಂದಬಹುದು ಎನ್ನುವುದಕ್ಕೆ ಹಲಸಂಗಿ ಗ್ರಾಮದ ರೈತ ಅಶೋಕ ಬಿಂದುರಾವ ಕುಲಕರ್ಣಿ ನಾಡಗೌಡ ಎಂಬುವವರು ಮಾದರಿಯಾಗಿದ್ದಾರೆ.

ತಮ್ಮ 150 ಎಕರೆ ಜಮೀನಿನಲ್ಲಿ ಸಾವಯವ ಸಂಸ್ಕರಣಾ ಘಟಕ ಸ್ಥಾಪಿಸಿ, ಬಹುಪಾಲು ಸಾವಯವ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡುತ್ತ ಉತ್ತಮ ಫಸಲು ಪಡೆಯುತ್ತಿದ್ದಾರೆ.

100ಕ್ಕೂ ಹೆಚ್ಚು ಆಕಳುಗಳನ್ನು ಸಾಕಿರುವ ಇವರು, ಅವುಗಳ ಸೆಗಣಿ ಹಾಗೂ ಕೃಷಿ ತ್ಯಾಜ್ಯಗಳಿಂದ ಉತ್ತಮ ಸಾವಯವ ಗೊಬ್ಬರ ತಯಾರಿಸುತ್ತಾರೆ. ಇದೂ ಅಲ್ಲದೆ ತಿಪ್ಪೆ ಗೊಬ್ಬರ, ಎರೆಹುಳು ಗೊಬ್ಬರ ಹಾಗೂ ಬಯೋಡೈಜಿಸ್ಟರ್‌ನಿಂದ ಸಾವಯವ ಗೊಬ್ಬರ ತಯಾರಿಸಿ, ತಮ್ಮ ತೋಟದಲ್ಲಿ ನಿಂಬೆ, ಕಬ್ಬು ಹಾಗೂ ಮಾವಿನ ಗಿಡಗಳಿಗೆ ಉಪಯೋಗಿಸಿ ಉತ್ತಮ ಫಸಲು ಪಡೆದುಕೊಳ್ಳುತ್ತಿದ್ದಾರೆ.

ಮಿಶ್ರ ಬೆಳೆ ಪದ್ಧತಿಯೊಂದಿಗೆ ಅಂತರ್‌ ಬೆಳೆ ಬೆಳೆಯುತ್ತಾರೆ. ಸುಮಾರು 7 ಅಡಿ ಅಂತರದಲ್ಲಿ ಕಬ್ಬಿನ ಸಾಲಿನ ನಡುವೆ ಗೋದಿ, ಕಡಲೆ ಬೆಳೆಯುತ್ತಾರೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಇವರು ಸಾವಯವ ಗೊಬ್ಬರದೊಂದಿಗೆ ರಾಸಾಯನಿಕ ಗೊಬ್ಬರವನ್ನೂ ಉಪಯೋಗಿಸುತ್ತಾರೆ. ಸುಮಾರು 80 ಎಕರೆ ಜಮೀನಿನಲ್ಲಿ ಕಬ್ಬು, 10 ಎಕರೆ ಜಮೀನಿನಲ್ಲಿ ದ್ರಾಕ್ಷಿ, 100 ಸಾಗವಾನಿ ಮರಗಳು, 100 ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಇವುಗಳ ಮಧ್ಯೆಯೂ ಮಿಶ್ರ ಬೆಳೆ ಬೆಳೆದು ಅಧಿಕ ಲಾಭ ಪಡೆದುಕೊಳ್ಳುತ್ತಿದ್ದಾರೆ.

ರೈತ ಅಶೋಕ ಕುಲಕರ್ಣಿ ಅವರದ್ದು ಅವಿಭಕ್ತ ಕುಟುಂಬ, ಮನೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಜನ ಕುಟುಂಬ ಸದಸ್ಯರಿದ್ದಾರೆ. ಅದಕ್ಕಾಗಿ ಮನೆಗೆ ಬೇಕಾದದನ್ನು ಜಮೀನಿನ ಉಳಿದ ಪ್ರೇಶದಲ್ಲಿ ಸಿರಿಧಾನ್ಯಗಳಾದ ಹುರುಳೆ, ಮುಕುಣಿ, ನವಣೆ, ಹೆಸರು, ಜೋಳ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತ ವಾರ್ಷಿಕ ಕನಿಷ್ಠ ₹1 ಕೋಟಿ ಕೃಷಿ ಆದಾಯ ಗಳಿಸುತ್ತಿದ್ದಾರೆ.

ಕೃಷಿ ಪಂಡಿತ ಪ್ರಶಸ್ತಿ:

ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ಹಲಸಂಗಿಯ ರೈತ ಅಶೋಕ ಬಿಂದುರಾವ ಕುಲಕರ್ಣಿ ಅವರಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ಕೊಡಮಾಡುವ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿಯನ್ನು ಇತ್ತೀಚೆಗೆ ವಿಜಯಪುರದಲ್ಲಿ ಜರುಗಿದ 74ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಿ ಗೌರವಿಸಲಾಗಿದೆ.

***  

ಸಾವಯವ ಕೃಷಿ ಪದ್ಧತಿಯೊಂದಿಗೆ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಂಡು ಕೃಷಿಯಲ್ಲಿ ಹೆಚ್ಚು ಇಳುವರಿಯೊಂದಿಗೆ ಅಧಿಕ ಲಾಭ ಪಡೆಯಬಹುದು

–ಅಶೋಕ ಕುಲಕರ್ಣಿ, ರೈತ ಹಲಸಂಗಿ

***

ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿರುವ ರೈತ ಅಶೋಕ ಕುಲಕರ್ಣಿ ಅವರ ಸಾಧನೆ ಇತರರಿಗೆ ಮಾದರಿಯಾಗಿದೆ. ಇವರಿಗೆ ಕೃಷಿ ಪಂಡಿತ ಪ್ರಶಸ್ತಿ ದೊರಕಿರುವುದು ಹೆಮ್ಮೆ ಎನಿಸುತ್ತದೆ

-ಸಂತೋಷ ಝಳಕಿ, ಗ್ರಾಮಸ್ಥ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು