ಬುಧವಾರ, ಮೇ 12, 2021
18 °C
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಇತಿಹಾಸದ ಕಣ್ಣೋಟ

ಮಹಾತ್ಮ ಗಾಂಧಿ ಛಾಯಾಚಿತ್ರಗಳ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ನಗರದ ‘ಭಾರತರತ್ನ’ ಡಾ. ಬಿ.ಆರ್. ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಅವರ ಜೀವನ ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿನ ಅಪರೂಪದ ಘಟನೆಗಳ ಮೇಲೆ ಬೆಳಕು ಚೆಲ್ಲುವ ವಿಶೇಷ ಛಾಯಾಚಿತ್ರ ಪ್ರದರ್ಶನ ನಡೆಯಿತು.

ಮೋಹನ ದಾಸ ಕರಮ ಚಂದ ಗಾಂಧಿ ಅವರು ಹುಟ್ಟಿದ ಗುಜರಾತ್‌ನ ಪೋರಬಂದರ್‌ ಚಿತ್ರ,  ವಿದೇಶದಲ್ಲಿ ಕಾನೂನು ಪದವಿಯನ್ನು ಪಡೆದ ಚಿತ್ರ. ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿ ನಡೆಸಲು ಹೋದ ಸಂದರ್ಭದಲ್ಲಿ ನಡೆಸಿದ ಹೋರಾಟಗಳು, ರಾಷ್ಟ್ರ ನೇತಾರ ಗೋಪಾಲಕೃಷ್ಣ ಗೋಖಲೆ ಅವರು ಗಾಂಧೀಜಿಗೆ ನೀಡಿದ ಪ್ರೇರಣೆಯನ್ನು ಪ್ರತಿಬಿಂಬಿಸುವ ಅಪರೂಪದ ಛಾಯಾಚಿತ್ರಗಳು ಪ್ರದರ್ಶನದಲ್ಲಿ ಕಂಡುಬಂದವು.

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಗಾಂಧೀಜಿ ಭಾರತದ ವಿವಿಧೆಡಗೆ ಭೇಟಿ ನೀಡಿದ ಚಿತ್ರಗಳು, ಬ್ರಿಟಿಷ್ ಸರ್ಕಾರದ ವಿರುದ್ಧ ಸತ್ಯಾಗ್ರಹ, ಕರ ನಿರಾಕರಣೆ, ಅಸಹಕಾರ ಚಳವಳಿ ಕೈಗೊಂಡಾಗ ತೆಗೆದ ಛಾಯಾಚಿತ್ರ, 1924ರಲ್ಲಿ ಬೆಳಗಾವಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ಪಾಲ್ಗೊಂಡಿದ್ದ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆಯಾಗಿದ್ದವು.

ಸ್ವಾತಂತ್ರ್ಯ ಸಂಗ್ರಾಮದ ಕಾಲಘಟ್ಟದಲ್ಲಿ ಮಹಾತ್ಮ ಗಾಂಧೀಜಿಯವರು ದೇಶದುದ್ದಕ್ಕೂ ನಿರಂತರ ಸಂಚಾರ ನಡೆಸಿದ್ದರು. ಕರ್ನಾಟಕಕ್ಕೆ ಬಾಪುರವರು 18ಕ್ಕೂ ಹೆಚ್ಚು ಸಲ ಭೇಟಿಕೊಟ್ಟಿದ್ದರು. ಸ್ವಾತಂತ್ರ್ಯ ಅಂದೋಲನದ ಜೊತೆಗೆ ಹಲವು ಸಮಾಜಮುಖಿ ಕಾರ್ಯಕ್ರಮ, ರಚನಾತ್ಮಕ ಕೆಲಸಗಳನ್ನು ಮಹಾತ್ಮರು ಮಾಡಿರುವ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಕಂಡುಬಂದವು.

ಕರ್ನಾಟಕ ಪ್ರವಾಸ ಸಂದರ್ಭದಲ್ಲಿ ಜನರೊಂದಿಗೆ ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ಕ್ಲಿಕ್ಕಿಸಿದ್ದ ಚಿತ್ರಗಳು. ನಾಡಿನ ವಿವಿಧ ಸಾಮಾಜಿಕ ಸಂಘ, ಸಂಸ್ಥೆಗಳಿಗೆ ಭೇಟಿದ್ದ ಅಪರೂಪದ ಛಾಯಾ ಚಿತ್ರಗಳನ್ನು ಪ್ರದರ್ಶನದಲ್ಲಿ ಗಮನ ಸೆಳೆಯುವಂತಿವೆ.

ಗ್ರಾಮ ಸ್ವರಾಜ್ಯ,ಸ್ವದೇಶಿ ಆಂದೋಲನ, ಕುಷ್ಟರೋಗ ಪೀಡಿತರ ಸೇವೆ ಮಾಡಿದ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರಗಳು ಕಣ್ಮುಂದೆ ಇತಿಹಾಸವನ್ನು ಅನಾವರಣಗೊಳಿಸುವಂತಿವೆ.

ಬೆಂಗಳೂರಿನ ರಾಷ್ಟ್ರೀಯ ಹೈನುಗಾರಿಕೆ ಸಂಸ್ಥೆಗೆ ಮಹಾತ್ಮ ಗಾಂಧಿ ಭೇಟಿ ನೀಡಿದ ಹಾಗೂ ಪಶುಪಾಲನೆ ಕುರಿತು ಮಾಹಿತಿ  ಪಡೆಯುತ್ತಿರುವುದು ಹಾಗೂ ಸಂಸ್ಥೆಯ ಸಂದರ್ಶಕರ ಪುಸ್ತಕದಲ್ಲಿ ಮಾಡಿರುವ  ಸಹಿಯನ್ನು ಕಾಣಬಹುದು.

ತಳ ಸಮುದಾಯದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು ಹಾಗೂ ಮನುಷ್ಯರೆಲ್ಲರೂ ಒಂದೇ ಜಾತಿಗೆ ಸೇರಿದವರೆಂಬ ಸಂದೇಶ ಸಾರಲು ಗಾಂಧೀಜಿ ಪ್ರವಾಸ ಕೈಗೊಂಡರು. ಈ ಸಂದರ್ಭದಲ್ಲಿ ಹರಿಜನರ ಏಳಿಗೆಗಾಗಿ ಕರ್ನಾಟಕದಲ್ಲಿ ಎರಡು ಬಾರಿ  ಪ್ರವಾಸ ಕೈಗೊಂಡಿದ್ದರು. 1934ರಲ್ಲಿ  ವಿಜಯಪುರಕ್ಕೆ ಗಾಂಧೀಜಿ ಭೇಟಿ ನೀಡಿದ ಹಾಗೂ ಸಭೆ ನಡೆಸಿದ ಅಪರೂಪದ ಚಿತ್ರವನ್ನು ಪ್ರದರ್ಶನದಲ್ಲಿ ಇಡಲಾಗಿರುವುದು ವಿಶೇಷವಾಗಿತ್ತು.

ಬಾಪೂಜಿ ದೇಶ, ವಿದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಚಿತ್ರಗಳು,  ಗ್ರಾಮೀಣಾಭಿವೃದ್ಧಿ, ದಲಿತರ ಏಳಿಗೆ ಮೊದಲಾದ ಅರ್ಥಪೂರ್ಣ ಯೋಜನೆಗಳನ್ನು ಕಾರ್ಯಗತಗೊಳಿಸಿರುವ ಚಿತ್ರಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು