ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿಯಲ್ಲಿ ಯುವಕನ ಸಾಧನೆ 

ದ್ರಾಕ್ಷಿ,ಲಿಂಬೆ, ಬಾರಿ, ದಾಳಿಂಬೆ ಬೆಳೆದು ಲಾಭ ಗಳಿಸುತ್ತಿರುವ ರೈತ
ಎ.ಸಿ.ಪಾಟೀಲ
Published 12 ಜನವರಿ 2024, 6:13 IST
Last Updated 12 ಜನವರಿ 2024, 6:13 IST
ಅಕ್ಷರ ಗಾತ್ರ

ಇಂಡಿ: ತಾಲ್ಲೂಕಿನ ಹಿರೇರೂಗಿ ಗ್ರಾಮದ ಕರ್ಕಿ ಕುಟುಂಬದ ಯುವಕ ಜಿತೇಂದ್ರ ಕಾಶಿನಾಥ ಕರ್ಕಿ ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಕಾಯಕದ ಮೂಲಕ ಲಕ್ಷ ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.

4 ಎಕರೆ ಜಮೀನಿನಲ್ಲಿ 2 ಎಕರೆ ದ್ರಾಕ್ಷಿ ಬೆಳೆ ಬೆಳೆದಿದ್ದು, ಇನ್ನೊಂದು ತಿಂಗಳಲ್ಲಿ ಕಟಾವಿಗೆ ಬರುವುದಿದೆ. ಕಳೆದ ವರ್ಷವೂ ಕೂಡಾ 5 ಟನ್ ಒಣ ದ್ರಾಕ್ಷಿ ಬೆಳೆದಿದ್ದು,ಒಣ ದ್ರಾಕ್ಷಿದರ ಕಡಿಮೆಯಿದ್ದ ಕಾರಣ ನಿರೀಕ್ಷಿಸಿದಷ್ಟು ಆದಾಯ ಬಂದಿರಲಿಲ್ಲ. ಈ ವರ್ಷ ಬರ ಎದುರಿಸಿದರೂ ದ್ರಾಕ್ಷಿ ಬೆಳೆ ನಿರೀಕ್ಷಿಸಿದಂತೆ ಚೆನ್ನಾಗಿ ಬೆಳೆದಿದ್ದು, ಇದೀಗ ಶೇಂಗಾದ ಕಾಳಿನಷ್ಟು ದ್ರಾಕ್ಷಿ ಬೆಳೆದು ನಿಂತಿದೆ. ಇನ್ನೊಂದು ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಈ ವರ್ಷ ಸುಮಾರು 5.5 ಟನ್ ಒಣದ್ರಾಕ್ಷಿ ಬೆಳೆಯುವ ನಿರೀಕ್ಷೆಯಲ್ಲಿದ್ದಾನೆ ಎನ್ನುತ್ತಾರೆ ರೈತ ಜಿತೇಂದ್ರ ಕರ್ಕಿ.

ಒಂದು ಎಕರೆಯಲ್ಲಿ ಲಿಂಬೆ, ಅರ್ಧ ಎಕರೆಯಲ್ಲಿ ಬಾರಿ, ಇನ್ನರ್ಧ ಎಕರೆಯಲ್ಲಿ ದಾಳಿಂಬೆ ಬೆಳೆ ಬೆಳೆದಿರುವ ಜಿತೇಂದ್ರ,  ಪ್ರಸಕ್ತ ವರ್ಷದಲ್ಲಿ ಲಿಂಬೆಯಿಂದ ಸುಮಾರು ₹ 2 ಲಕ್ಷ ಆದಾಯ, ಬಾರಿಯಿಂದ ₹ 1 ಲಕ್ಷ ಆದಾಯ ನಿರೀಕ್ಷೆಯಲ್ಲಿದ್ದಾನೆ.

ದಾಳಿಂಬೆ ಬೆಳೆ ಕಾಯಿ ಬಿಡುವ ಹಂತದಲ್ಲಿದ್ದು, ಅವುಗಳ ಫಲ ಹೇಗಿರುತ್ತದೆಯೋ ಅದನ್ನು ಪರಿಗಣಿಸಿ ಆದಾಯ ಬರುತ್ತದೆ ಎಂದು ಹೇಳುವ ರೈತ ಜಿತೇಂದ್ರ ಈ ಎಲ್ಲಾ ಬೆಳೆಗಳಿಗೆ ಸಾವಯವ ಪದ್ದತಿಯಲ್ಲಿಯೇ ಸಂರಕ್ಷಣೆ ಮಾಡುತ್ತಿದ್ದಾರೆ.

ಸಾವಯವ ಕೃಷಿ ಚಟುವಟಿಕೆಗೆ ಅನುಕೂಲವಾಗಲಿ ಎಂದು ತೋಟದಲ್ಲಿ 4 ಜಾನುವಾರುಗಳು (ದನಗಳು) ಕಟ್ಟಿದ್ದಾರೆ. 8 ಕುರಿಗಳನ್ನು ಸಾಕಿದ್ದಾರೆ. ಇವುಗಳಿಂದ ಗೊಬ್ಬರ ಪಡೆದು ಬೆಳೆಗಳಿಗೆ ನೀಡುತ್ತಾರೆ. ಕಡಿಮೆ ಬಿದ್ದರೆ ಕಲಬುರಗಿ ಜಿಲ್ಲೆಯಿಂದ ಕುರಿ ಗೊಬ್ಬರ ತರಿಸಿಕೊಳ್ಳುತ್ತಾರೆ. ದನಗಳಿಂದ ಬರುವ ಹಾಲು ಮನೆಗೆ ಅಗತ್ಯವಿದ್ದಷ್ಟು ಬಳಸಿ, ಉಳಿದದ್ದು ಮಾರಾಟ ಮಾಡುತ್ತಾರೆ.

ಈ ಎಲ್ಲಾ ಬೆಳೆಗಳಿಗೆ ನೀರಿನ ಅನುಕೂಲಕ್ಕಾಗಿ ಒಂದು ಬಾವಿ ತೋಡಿದ್ದು, ಬಾವಿಯಲ್ಲಿ ಅಲ್ಪಸ್ವಲ್ಪ ನೀರಿದೆ. ಹೆಚ್ಚಿನ ನೀರಿಗಾಗಿ ಜಮೀನಿನಲ್ಲಿ 120X100 ಅಡಿ ಸುತ್ತಳತೆಯ ಮತ್ತು 30 ಅಡಿ ಆಳದ ಹೊಂಡ ತೋಡಿದ್ದು, ಸಮೀಪದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಯಿಂದ ಪೈಪ್ ಲೈನ್ ಮಾಡಿಸಿದ್ದಾರೆ. ಕಾಲುವೆಗೆ ನೀರಿದ್ದ ಸಂದರ್ಭದಲ್ಲಿ ಹೊಂಡ ತುಂಬಿಸಿಕೊಳ್ಳುತ್ತಾರೆ. ನೀರು ಹಾಳಾಗಬಾರದೆಂದು ಸರ್ಕಾರದ ಸಹಾಯಧನದಿಂದ ಎಲ್ಲಾ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿದ್ದು, ಒಂದು ಹನಿ ನೀರು ಕೂಡಾ ಹಾಳಾಗದಂತೆ ನೋಡಿಕೊಳ್ಳುತ್ತಾರೆ.

ಎಲ್ಲಾ ಕೆಲಸವನ್ನು ತಾವೊಬ್ಬರೇ ಮಾಡುತ್ತಿದ್ದು, ಲಿಂಬೆ, ಬಾರಿ ತೆಗೆಯುವಾಗ, ದ್ರಾಕ್ಷಿ ಬೆಳೆ ಕಟಾವು ಸಂದರ್ಭದಲ್ಲಿ ಮಾತ್ರ ಆಳುಗಳನ್ನು ತೆಗೆದುಕೊಳ್ಳುವ ಇವರು ಇಡೀ ವರ್ಷ ಕೆಲಸ ಮಾಡುತ್ತಾರೆ.

ದ್ರಾಕ್ಷಿ, ದಾಳಿಂಬೆ, ಬಾರಿ, ಲಿಂಬೆ ಬೆಳೆಗಳಿಗೆ ಔಷಧ ಸಿಂಪರಣೆಗಾಗಿಯೇ ಒಂದು ಚಿಕ್ಕ ಟ್ರ್ಯಾಕ್ಟರ್ ತೆಗೆದುಕೊಂಡಿದ್ದು, ತಾನೇ ಬೆಳೆಗಳಿಗೆ ಔಷಧ ಸಿಂಪರಣೆ ಮಾಡುತ್ತಾರೆ. ದ್ರಾಕ್ಷಿ, ದಾಳಿಂಬೆ ಬೆಳೆಗಳಿಗೆ ಔಷಧಿಗಾಗಿ ಮಾತ್ರ ಸ್ವಲ್ಪ ಖರ್ಚು ಬಿಟ್ಟರೆ ಹೆಚ್ಚಿನ ಖರ್ಚು ಮಾಡುವುದಿಲ್ಲ. ಹೀಗಾಗಿ ಈ ನಾಲ್ಕು ಬೆಳೆಗಳು ಸೇರಿ ಖರ್ಚು ತೆಗೆದು ವರ್ಷಕ್ಕೆ ಒಟ್ಟು ಸುಮಾರು ₹ 8 ರಿಂದ ₹ 9 ಲಕ್ಷ ಆದಾಯ ಪಡೆದುಕೊಳ್ಳುತ್ತಾರೆ.

ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ರೈತ ಜಿತೇಂದ್ರ ಕರ್ಕಿ ಅವರ  ಜಮೀನಿನಲ್ಲಿ ಇರುವ ಕೃಷಿ ಹೊಂಡ 
ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ರೈತ ಜಿತೇಂದ್ರ ಕರ್ಕಿ ಅವರ  ಜಮೀನಿನಲ್ಲಿ ಇರುವ ಕೃಷಿ ಹೊಂಡ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT