ಗುರುವಾರ , ಡಿಸೆಂಬರ್ 8, 2022
18 °C
ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್‌ ಯುವ ಮುಖಂಡ ಸಂಗಮೇಶ ಬಬಲೇಶ್ವರ ಒತ್ತಾಯ

ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ನೀಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ರಾಜ್ಯ ಸರ್ಕಾರ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯನ್ನು ನೀಗಿಸಿ ಮಕ್ಕಳನ್ನು ಸದೃಢರನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಯುವ ಮುಖಂಡ ಸಂಗಮೇಶ ಬಬಲೇಶ್ವರ ಹೇಳಿದರು.

ನಗರದ ಬಿ.ಎಲ್.ಡಿ.ಇ. ವೈದ್ಯಕೀಯ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಿಯು ಕಾಲೇಜುಗಳ ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಗುರುವಾರ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ಭಾರತದ ಭವಿಷ್ಯದ ನಾಗರಿಕರಾಗಿದ್ದಾರೆ. ಆದರೆ, ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ನೀಡಲು ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಶಿಕ್ಷಕರ ಕೊರತೆ ಸೇರಿದಂತೆ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ಜೀವನದಲ್ಲಿ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಮಾರ್ಗದರ್ಶಕರಾಗಿ ಜೀವ ತುಂಬುತ್ತಾರೆ. ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಆತ್ಮದಂತೆ ಕೆಲಸ ಮಾಡುತ್ತಾರೆ. ಹೀಗಾಗಿ ದೈಹಿಕ ಶಿಕ್ಷಣ ಶಿಕ್ಷಕರು ಸದೃಢ ರಾಷ್ಟ್ರ ನಿರ್ಮಾಣದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಬಿ.ಎಲ್.ಡಿ.ಇ. ಸಂಸ್ಥೆಯ ಆಡಳಿತಾಧಿಕಾರಿ ಬಿ.ಆರ್.ಪಾಟೀಲ ಮಾತನಾಡಿ ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಕ್ರೀಡೆಯೂ ಬಹುಮುಖ್ಯವಾಗಿದೆ. ಎರಡನ್ನೂ ವಿದ್ಯಾರ್ಥಿಗಳು ಶ್ರದ್ಧೆಯಿಂದ ಮಾಡಿದರೆ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದರು.

ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಮಂಡ್ಯ ತಂಡಕ್ಕೆ ಟ್ರೋಫಿ ಮತ್ತು ₹15 ಸಾವಿರ ನಗದು ಬಹುಮಾನ ವಿತರಿಸಲಾಯಿತು. ಎರಡನೇ ಸ್ಥಾನ ಪಡೆದ ಮೈಸೂರು ಬಾಲಕಿಯರ ತಂಡಕ್ಕೆ ಟ್ರೋಫಿ ಮತ್ತು ₹10 ಸಾವಿರ ನಗದು ಬಹುಮಾನ ನೀಡಲಾಯಿತು.

ಬಾಲಕರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ಮೈಸೂರು ತಂಡಕ್ಕೆ ಟ್ರೋಫಿ ಮತ್ತು ₹15 ಸಾವಿರ ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ದಾವಣಗೆರೆ ತಂಡಕ್ಕೆ ಟ್ರೋಫಿ ಹಾಗೂ ₹ 10 ಸಾವಿರ ನಗದು ಬಹುಮಾನ ವಿತರಿಸಲಾಯಿತು.

ಬಿ.ಎಲ್.ಡಿ.ಇ. ಸಂಸ್ಥೆಯ ವತಿಯಿಂದ ವಿಜೇತ ತಂಡಗಳಿಗೆ ಟ್ರೋಫಿ ಮತ್ತು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರ ವತಿಯಿಂದ ನಗದು ಬಹುಮಾನ ನೀಡಲಾಯಿತು.

ಬಿ.ಎಲ್.ಡಿ.ಇ. ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಬಿ.ಆರ್.ಕೊಟ್ನಾಳ, ಆಡಳಿತಾಧಿಕಾರಿ  ಐ.ಎಸ್.ಕಾಳಪ್ಪನವರ, ಬಿ.ಆರ್.ಪಾಟೀಲ, ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎಸ್.ಕೋರಿ, ದೈಹಿಕ ಸಹಾಯಕ ನಿರ್ದೇಶಕ ಕೈಲಾಸ ಹಿರೇಮಠ, ಬಿ.ಎಲ್.ಡಿ.ಇ. ಸಂಸ್ಥೆಯ ಕಚೇರಿ ಅಧೀಕ್ಷಕ ಎಸ್.ಎ.ಬಿರಾದಾರ, ಪಿಯು ಇಲಾಖೆ ಉಪನಿರ್ದೇಶಕ ಎಸ್.ಎನ್.ಬಗಲಿ, ಪ್ರಾಚಾರ್ಯ  ಸಿ.ಬಿ.ಪಾಟೀಲ, ಡಾ. ಜಿ.ಡಿ.ಅಕಮಂಚಿ, ಎಲ್.ಬಿ.ಪಾಟೀಲ, ಸಂತೋಷ ಲೋಕುರಿ, ಮಧುಸೂದನ ಮಾಗಿ, ವಿ.ಟಿ.ಗೊಂಬಿ, ಎಸ್.ಬಿ.ಗೋಗಿ, ವಿ.ಎಸ್.ಹಂಜಿ, ಎಸ್.ಆರ್.ಮುತ್ತಗಿ, ವಾಣಿಶ್ರೀ ಹಿರೇಮಠ, ಎಸ್.ಪಿ.ಶೇಗುಣಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.