ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ಸಂಬಳ, ಉತ್ತಮ ಕೆಲಸದ ಆಮಿಷ; ಕುವೈತ್‌ನಲ್ಲಿ ಒಂಟೆ ಮೇಯಿಸಿದ ಯುವಕರು!

ಏಜೆನ್ಸಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಯುವಕರ ರಕ್ಷಣೆ
Published 6 ಸೆಪ್ಟೆಂಬರ್ 2023, 11:56 IST
Last Updated 6 ಸೆಪ್ಟೆಂಬರ್ 2023, 11:56 IST
ಅಕ್ಷರ ಗಾತ್ರ

ವಿಜಯಪುರ:‘ ಅಧಿಕ ಸಂಬಳ, ಉತ್ತಮ ಕೆಲಸ’ ಎಂಬ ಏಜೆಂಟ್‌ ಮಾತು ನಂಬಿ ಕುವೈತ್‌ಗೆ ಹೋಗಿ ಸಂಕಷ್ಟಕ್ಕೆ ಸಿಲುಕಿದ್ದ ಬಬಲೇಶ್ವರ ತಾಲ್ಲೂಕಿನ ಅಡವಿ ಸಂಗಾಪುರದ ಇಬ್ಬರು ಯುವಕರನ್ನು ಕೇಂದ್ರ ಸರ್ಕಾರದ ನೆರವಿನಿಂದ ಮರಳಿ ಊರಿಗೆ ಕರೆತರಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಉಮೇಶ ಕೋಳಕೂರ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಡವಿ ಸಂಗಾಪುರ ಗ್ರಾಮದ ಸಚಿನ್ ಜಂಗಮಶೆಟ್ಟಿ (21) ಮತ್ತು ವಿಶಾಲ ಸೇಲಾರ(22) ಎಂಬ ಯುವಕರು ಮುಂಬೈನ ಏಜೆಂಟ್‌ ಒಬ್ಬರ ಮೂಲಕ ಆರು ತಿಂಗಳ ಹಿಂದೆ ಕುವೈತ್‌ಗೆ ತೆರಳಿದ್ದರು ಎಂದು ಹೇಳಿದರು.

‘ಕುವೈತ್‌ನಲ್ಲಿ ತರಕಾರಿ ಪ್ಯಾಕ್‌ ಮಾಡುವ ಕೆಲಸವಿದ್ದು, ತಿಂಗಳಿಗೆ ₹32 ಸಾವಿರ ಸಂಬಳ ಕೊಡಿಸುವುದಾಗಿ ಮುಂಬೈನ ಏಜೆಂಟ್‌ ಇಪ್ಕಾರ್‌ ಎಂಬಾತ ಈ ಯುವಕರಿಗೆ ನಂಬಿಸಿದ್ದರು. ಅಲ್ಲದೇ, ಕುವೈತ್‌ಗೆ ತೆರಳಲು ಪಾಸ್‌ಪೋರ್ಟ್‌, ವೀಸಾ ಮತ್ತು ವಿಮಾನಯಾನದ ಖರ್ಚು, ಕಮಿಷನ್‌ ಸೇರಿದಂತೆ ತಲಾ ₹1 ಲಕ್ಷ ಹಣವನ್ನು ವಸೂಲಿ ಮಾಡಿದ್ದಾನೆ’ ಎಂದರು.

‘ಕುವೈತ್‌ಗೆ ಯುವಕರು ಹೋದ ಮೇಲೆ ಈ ಮೊದಲು ಹೇಳಲಾಗಿದ್ದ ತರಕಾರಿ ಪ್ಯಾಕ್‌ ಮಾಡುವ ಕೆಲಸದ ಬದಲಿಗೆ ಒಂಟೆಗಳನ್ನು ಮೇಯಿಸುವ ಕೆಲಸ ನೀಡಿದ್ದಾರೆ. ಅಲ್ಲದೇ, ಸಂಬಳವನ್ನು ಕೊಡದೇ, ಸರಿಯಾದ ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸಿದೇ ತೊಂದರೆ ನೀಡಿದ್ದಾರೆ. ಇದನ್ನು ಪ್ರಶ್ನಿಸಿದ ಯುವಕರಿಗೆ ಹೊಡಿಬಡಿ ಮಾಡಿ, ಫೋನ್‌ನಲ್ಲಿ ಮಾತನಾಡಲು ಅವಕಾಶ ನೀಡದೇ ಹಿಂಸೆ ನೀಡಿದ್ದಾರೆ’ ಎಂದು ದೂರಿದರು.

‘ಯುವಕರು ತಮ್ಮ ಪೋಷಕರನ್ನು ಫೋನ್‌ ಮೂಲಕ ಸಂಪರ್ಕಿಸಿ, ವಿಷಯ ತಿಳಿಸಿದ್ದಾರೆ. ಪೋಷಕರು ನಮಗೆ ವಿಷಯ ಮುಟ್ಟಿಸಿದ ಮೇಲೆ ಸಂಸದ ರಮೇಶ ಜಿಗಜಿಣಗಿ ಅವರ ಗಮನಕ್ಕೆ ತರಲಾಯಿತು. ಅವರು ಕೇಂದ್ರ ವಿದೇಶಾಂಗ ಸಚಿವರ ಮೂಲಕ ಕುವೈತ್‌ನಲ್ಲಿರುವ ಭಾರತೀಯ ರಾಯಬಾರಿ ಕಚೇರಿಯ ನೆರವಿನಿಂದ ಯುವಕರನ್ನು ನಾಲ್ಕು ದಿನಗಳ ಹಿಂದೆ ಸುರಕ್ಷಿತವಾಗಿ ಮರಳಿ ಗ್ರಾಮಕ್ಕೆ ಕರೆದುಕೊಂಡು ಬರಲಾಗಿದೆ’ ಎಂದರು.

‘ಅಡವಿ ಸಂಗಾಪುರ ಗ್ರಾಮದ ಇನ್ನೂ ಇಬ್ಬರು ಯುವಕರು ಕುವೈತ್‌ನಲ್ಲೇ ಸಿಲುಕಿಕೊಂಡಿದ್ದಾರೆ. ಅವರ ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ. ಮುಂಬೈನ ಏಜೆನ್ಸಿ ವಿರುದ್ಧ ದೂರು ದಾಖಲಿಸಲಾಗುವುದು’ ಎಂದು ತಿಳಿಸಿದರು.

‘ವಿದೇಶಗಳಲ್ಲಿ ಉತ್ತಮ ಕೆಲಸ, ಅಧಿಕ ಸಂಬಳದ ಆಸೆಗೆ ಜಿಲ್ಲೆಯ ಯುವ ಜನತೆ ಮೋಸ ಹೋಗಬಾರದು. ಸರಿಯಾಗಿ ತಿಳಿದುಕೊಳ್ಳಬೇಕು’ ಎಂದರು.  

ಗ್ರಾಮದ ಮುಖಂಡರಾದ ಶ್ರೀಶೈಲ ಕೋಟ್ಯಾಳ, ಮಲ್ಲು ಕನ್ನೂರ, ಬಸವರಾಜ ಕುರುಹಿನಶೆಟ್ಟಿ, ಚಿನ್ನಪ್ಪ ಜಂಗಮಶೆಟ್ಟಿ, ಸಿದ್ರಾಮ ಜಂಗಮಶೆಟ್ಟಿ, ವಿಜಯ ಜೋಷಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT