ಭಾನುವಾರ, ನವೆಂಬರ್ 28, 2021
21 °C
ಮುದ್ದೇಬಿಹಾಳ: ಅಕಾಲಿಕ ಮಳೆಯಿಂದ ಬೆಳೆ ಹಾನಿ

ಕೃಷಿ ವಿಜ್ಞಾನಿಗಳಿಂದ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುದ್ದೇಬಿಹಾಳ: ತಾಲ್ಲೂಕಿನಾದ್ಯಂತ ಈಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಪ್ರಮುಖ ಬೆಳೆ ತೊಗರಿ ಸೇರಿದಂತೆ ವಿವಿಧ ಬೆಳೆಗಳಿಗೆ ತೀವ್ರ ಹಾನಿಯಾಗಿದ್ದು, ಈ ಬಗ್ಗೆ ಪರಿಶೀಲಿಸಿ ಸರ್ಕಾರಕ್ಕೆ ವಾಸ್ತವ ವರದಿ ನೀಡುವಂತೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ  ಮಾಡಿಕೊಂಡ ಮನವಿಯಂತೆ ಬುಧವಾರ ವಿಜಯಪುರದಿಂದ ಬಂದಿದ್ದ ಕೃಷಿ ವಿಜ್ಞಾನಿಗಳು ತಾಲ್ಲೂಕಿನ ಜಮೀನುಗಳಿಗೆ ಭೇಟಿ ನೀಡಿ ಬೆಳೆಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ತೊಗರಿ ಹೊಲಗಳಿಗೆ ಭೇಟಿ ನೀಡಿದ ತಂಡ ಬೆಳೆದು ಕಟಾವಿಗೆ ಬಂದ ಆಳೆತ್ತರದ ತೊಗರಿ ಬೆಳೆ ಮಳೆಗೆ ಸಿಕ್ಕು ನಾಶವಾಗಿರುವ ಬಗ್ಗೆ, ಮಿಶ್ರ ಬೆಳಗಳಿಗೆ ಆಗಿರುವ ಸಮಸ್ಯೆ, ತೊಗರಿ ಕಾಳುಗಳು ಸಿಪ್ಪೆ ಒಡೆದುಕೊಂಡು ನೆಲಕ್ಕೆ ಬಿದ್ದಿರುವುದು ಸೇರಿ ಹಲವು ಅಂಶಗಳನ್ನು ಪರಿಶೀಲಿಸಿ ದಾಖಲಿಸಿಕೊಂಡರು.

ಕೆಲವೆಡೆ ಶಾಸಕರಾದಿಯಾಗಿ ವಿಜ್ಞಾನಿಗಳು, ಕೃಷಿ ಅಧಿಕಾರಿಗಳು ತೊಗರಿ ಕಾಳನ್ನು ಬಾಯಲ್ಲಿ ಹಾಕಿಕೊಂಡು ಅದರ ಗುಣಮಟ್ಟ ಮತ್ತು ಫಲವತ್ತತೆ ತಿಳಿದುಕೊಂಡರು.

ನಂತರ ಬಸರಕೋಡ ಗ್ರಾಮದ ಬಳಿ ಮಳೆಯಿಂದ ಹಾಳಾಗಿರುವ ದ್ರಾಕ್ಷಿ ತೋಟಗಳಿಗೆ ಭೇಟಿ ನೀಡಿದ ತಂಡ ದ್ರಾಕ್ಷಿ ಫಲ ಕೊಡುವುದಕ್ಕೂ ಮೊದಲೇ ದ್ರಾಕ್ಷಿಯ ಗೊಂಚಲುಗಳಲ್ಲಿ ನೀರು ನಿಂತು, ಕಾಳು ರಸ ತುಂಬಿಕೊಳ್ಳದೆ ನೆಲಕ್ಕೆ ಉದುರಿ ಹಾಳಾಗುತ್ತಿರುವುದನ್ನು ಪ್ರತ್ಯಕ್ಷವಾಗಿ ಕಂಡರು. ಸುಂಕು ರೋಗಕ್ಕೆ ದ್ರಾಕ್ಷಿ ನಾಶವಾಗತೊಡಗಿದ್ದನ್ನು ದಾಖಲಿಸಿಕೊಂಡರು.

ತೊಗರಿ ಬೆಳೆಯ ಮಾದರಿಯಲ್ಲೇ ವಾಣಿಜ್ಯ ಬೆಳೆಗಳಾದ ಹತ್ತಿ, ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಮುಂತಾದ ಬೆಳೆಗಳು ಅನಿರೀಕ್ಷಿತ, ಅಕಾಲಿಕ ಮಳೆಯಿಂದಾಗಿ ಹಾನಿಗೀಡಾಗಿವೆ. ಈ ಬಗ್ಗೆ ವಿಜ್ಞಾನಿಗಳು ಪರಿಶೀಲಿಸಿ ನಿಖರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಶಾಸಕರು ಸೂಚಿಸಿದರು.

ಬೆಳೆಹಾನಿ ಪರಿಶೀಲನೆ ತಂಡದಲ್ಲಿ ಕೃಷಿ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಅಶೋಕ ಸಜ್ಜನ, ಸಸ್ಯರೋಗ ಶಾಸ್ತ್ರಜ್ಞ ಡಾ.ಎಸ್.ಎಂ.ವಸ್ತ್ರದ, ತಳಿ ಶಾಸ್ತ್ರಜ್ಞ ಡಾ.ಎಂ.ಡಿ.ಪಾಟೀಲ, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ್, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ, ಗಣ್ಯರಾದ ಸೋಮನಗೌಡ ಬಿರಾದಾರ, ಮಲಕೇಂದ್ರಗೌಡ ಪಾಟೀಲ, ಬಸವರಾಜ ಗುಳಬಾಳ, ಜಗದೀಶ ಪಂಪಣ್ಣವರ್, ಅಪ್ಪಣ್ಣ ಧನ್ನೂರ ಮತ್ತಿತರರು ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು