ಭಾನುವಾರ, ಅಕ್ಟೋಬರ್ 24, 2021
23 °C

ಎಲೆ ಮೇಲೆ ಕಲೆ; ಶಿಕ್ಷಕ ಪ್ರಕಾಶ ಹೋಳಿನ ಕೈಚಳಕಕ್ಕೆ ಮೆಚ್ಚುಗೆ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕಲೆಗಳಲ್ಲೇ ಅತ್ಯಂತ ಸೂಕ್ಷ್ಮ ಎಂದರೆ ಅದು ಲೀಫ್‌ ಕಟಿಂಗ್‌ ಆರ್ಟ್‌ (ಎಲೆ ಮೇಲೆ ಕಲೆ). ಇಂತಹ ಸೂಕ್ಷ್ಮ ಕಲೆಯನ್ನು ಕರಗತ ಮಾಡಿಕೊಂಡಿರುವ ಇಂಡಿ ತಾಲ್ಲೂಕಿನ ಹಿರೇಮಸಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಕಲಾ ಶಿಕ್ಷಕ ಪ್ರಕಾಶ ಹೋಳಿನ ಅಪರೂಪದ ಚಿತ್ರಕಲಾವಿದರಾಗಿ ಹೊರಹೊಮ್ಮಿದ್ದಾರೆ.

ಅರಳಿ ಎಲೆಗಳಲ್ಲಿ ರಾಷ್ಟ್ರನಾಯಕರು, ಸಾಹಿತಿಗಳು, ಕಲಾವಿದರ ಆಕೃತಿಯನ್ನು ರೂಪಿಸುವ ವಿಶಿಷ್ಟ ಕಲೆಯನ್ನು ಮೈಗೂಡಿಸಿಕೊಂಡಿರುವ ಇವರು ಇದುವರೆಗೆ ಸುಮಾರು 200ಕ್ಕೂ ಅಧಿಕ ಚಿತ್ರಗಳನ್ನು ರಚಿಸಿದ್ದಾರೆ. ಅಷ್ಟೇ ಅಲ್ಲ, ತಾವು ರಚಿಸಿದ ಚಿತ್ರಗಳಿಗೆ ಫೋಟೊ ಪ್ರೇಮ್‌ ಅಳವಡಿಸಿ, ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಆರಂಭದಲ್ಲಿ ಅರಳಿ ಎಲೆ ಮೇಲೆ ವ್ಯಕ್ತಿಗಳ ಭಾವಚಿತ್ರವನ್ನು ಚಿತ್ರಿಸಿ, ಬಳಿಕ ಬ್ಲೇಡ್‌ ಮತ್ತು ಕಟಿಂಗ್‌ ಬಳಸಿ ಸೂಕ್ಷ್ಮವಾಗಿ ಅರಳಿ ಎಲೆಯನ್ನು ಕತ್ತರಿಸುತ್ತಾರೆ. ಕೇವಲ ಅರ್ಧ ತಾಸಿನಲ್ಲಿ ಅರಳಿ ಎಲೆಯ ಮೇಲೆ ವ್ಯಕ್ತಿಗಳ ಚಿತ್ರವನ್ನು ರೂಪಿಸುವ ಇವರ ಅದ್ಭುತ ಕಲೆ ನೋಡುಗರನ್ನು ಬೆರಗುಗೊಳಿಸದೇ ಇರದು. 

ಲೀಫ್‌ ಕಟ್ಟಿಂಗ್‌ ಆರ್ಟ್‌ನಲ್ಲಿ ಸಿದ್ಧಹಸ್ತರಾದ ಹೋಳಿನ ಅವರು, ಕೇವಲ ವಿದ್ಯಾರ್ಥಿಗಳಿಗೆ ಚಿತ್ರಕಲೆ ಪಾಠ ಹೇಳಿಕೊಡುವುದು ಮಾತ್ರವಲ್ಲ, ಶಾಲಾ ಕಟ್ಟಡದ ಗೋಡೆಗಳ ಮೇಲೆ ಬಗೆಬಗೆಯ ಚಿತ್ರಗಳನ್ನು ರೂಪಿಸುವ ಮೂಲಕ ಶಾಲಾ ಗೋಡೆಯನ್ನೇ ವೇದಿಕೆ ಮಾಡಿಕೊಂಡಿದ್ದಾರೆ.

ವಿಜಯಪುರ ತಾಲ್ಲೂಕಿನ ಹೊನ್ನುಟಗಿ ಗ್ರಾಮದವರಾದ ಹೋಳಿನ ಅವರಿಗೆ ಚಿಕ್ಕಂದಿನಿಂದಲೇ ಚಿತ್ರಕಲೆ ಅಂದರೆ ಅಚ್ಚುಮೆಚ್ಚು. ಎಸ್‌ಎಸ್‌ಎಲ್‌ಸಿ ಬಳಿಕ ಡಿಎಂಸಿ ಚಿತ್ರಕಲಾ ಕೋರ್ಸ್‌ ಹಾಗೂ ಡಿಪ್ಲೊಮಾ ಪದವಿಯನ್ನು ಸಿಂದಗಿಯ ಶ್ರೀ ಶಾಂತೇಶ್ವರ ಲಲಿತ ಕಲಾ ವಿದ್ಯಾಲಯದಲ್ಲಿ ಪಡೆದರು.

ಸರ್ಕಾರಿ ಚಿತ್ರಕಲಾ ಶಿಕ್ಷಕರಾಗಿ ನೇಮಕವಾದ ಹೋಳಿನ ಅವರು, ಪ್ರಥಮದಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಳಲೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸಿದರು. 2016ರಲ್ಲಿ ಹಿರೇಮಸಳಿ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದಾರೆ. 

ಶಾಲೆಯೆ ಗೋಡೆಯ ಮೇಲೆ ಪ್ರಾಣಿ, ಪಕ್ಷಿಗಳು, ರಾಷ್ಟ್ರ ನಾಯಕರು, ಭೂಪಟ, ಐತಿಹಾಸಿಕ ಸ್ಥಳಗಳ ಚಿತ್ರಗಳು, ಆಲಮಟ್ಟಿ ಜಲಾಶಯದ ಚಿತ್ರ, ವಿಜ್ಞಾನ ಮಾದರಿ ಚಿತ್ರಗಳನ್ನು ಚಿತ್ರಿಸಿದ್ದಾರೆ. ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಸಿಂದಗಿ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಲ್ಲಿ ಶೈಕ್ಷಣಿಕ ಚಟುವಟಿಕೆಗಗಳಿಗೆ ಪೂರಕವಾದ ವರ್ಲಿ ಚಿತ್ರಗಳನ್ನು ಬಿಡಿಸುವ ಮೂಲಕ ಕಾರ್ಯಾಲಯಗಳ ಆವರಣವನ್ನು ಚಂದಗೊಳಿಸಿದ್ದಾರೆ. 

ಇವರ ಮಾರ್ಗದರ್ಶನ ಮತ್ತು ಪ್ರೇರಣೆಯೆ ಮೇರೆಗೆ ಶಾಲೆಯ ವಿದ್ಯಾರ್ಥಿಗಳು ಸತತವಾಗಿ ಕ್ಲಸ್ಟರ್‌ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿಜೇತರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಪ್ರಸಿದ್ಧ ಚಿತ್ರಕಲಾವಿದರ ಬಗ್ಗೆ ತಮ್ಮ ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯವನ್ನೂ ಮಾಡುತ್ತಿದ್ದಾ‌ರೆ.

ರಾಜ್ಯಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಯಲ್ಲಿ ಭಾಗವಹಿಸಿ ಅಭಿನಂದನೆಗೆ ಪಾತ್ರವಾಗಿದ್ದಾರೆ. ಜಿಲ್ಲಾ ಮಟ್ಟದ ಸಿರಿಗನ್ನಡ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ, ಸಿಂದಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌  ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಹಯೋಗದಲ್ಲಿ ನಡೆದ ಶಿಕ್ಷಕರ ದಿನೋತ್ಸವದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು