ಮಂಗಳವಾರ, ಏಪ್ರಿಲ್ 13, 2021
23 °C
ಚವಡಿಹಾಳ ಗ್ರಾಮ ಪಂಚಾಯ್ತಿ ಸಮಗ್ರ ಅಭಿವೃದ್ಧಿಗೆ ಆದ್ಯತೆ

ಪಾರೆ ಮುಡಿಗೆ ‘ಅತ್ಯುತ್ತಮ ಪಿಡಿಒ’ ರಾಜ್ಯ ಪ್ರಶಸ್ತಿ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

ವಿಜಯಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ(ಎನ್‌ಆರ್‌ಇಜಿ)ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಇಂಡಿ ತಾಲ್ಲೂಕಿನ ಚವಡಿಹಾಳ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಸಿ.ಜಿ.ಪಾರೆ ಅವರಿಗೆ 2020–21ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಪಿಡಿಒ ಪ್ರಶಸ್ತಿ ಲಭಿಸಿದೆ.

ಹುಬ್ಬಳ್ಳಿಯ ಡೆನಿಸನ್ಸ್‌ ಹೋಟೆಲ್‌ನಲ್ಲಿ ಏಪ್ರಿಲ್‌ 9 ರಂದು ನಡೆಯುವ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಚವಡಿಹಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಮಾಡಿರುವ ಹತ್ತಾರು ಜನೋಪಯೋಗಿ ಕಾರ್ಯಗಳನ್ನು ಪರಿಗಣಿಸಿ ಸಿ.ಜಿ.ಪಾರೆ ಅವರ ಹೆಸರನ್ನು ರಾಜ್ಯಮಟ್ಟದ ಪ್ರಶಸ್ತಿಗೆ ಜಿಲ್ಲಾ ಪಂಚಾಯ್ತಿಯಿಂದ ಶಿಫಾರಸು ಮಾಡಲಾಗಿತ್ತು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪಾರೆ ಅವರು ಚವಡಿಹಾಳ ಗ್ರಾಮದ ಪಿಡಿಒ ಆಗಿ ಬಂದ ಬಳಿಕ 2018–19 ಹಾಗೂ 2019–20ನೇ ಸಾಲಿನಲ್ಲಿ ಅಂದರೆ, ಎರಡು ಬಾರಿ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಪಾತ್ರವಾಗಿರುವುದು ವಿಶೇಷ. ಅಲ್ಲದೇ, 2018–20ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಪಿಡಿಒ ಪ್ರಶಸ್ತಿಯನ್ನು ಪಾರೆ ತಮ್ಮದಾಗಿಸಿಕೊಂಡಿದ್ದಾರೆ.

ಎನ್ಆರ್‌ಎಂ(ನೈಸರ್ಗಿಕ ಸಂಪನ್ಮೂಲ ವೃದ್ಧಿ ಕಾರ್ಯಕ್ರಮ) ಅಡಿಯಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೆರೆ, ಹಳ್ಳ, ನಾಲೆ,  ಚೆಕ್‌ಡ್ಯಾಂ ಹೂಳೆತ್ತಿಸುವ ಮೂಲಕ ಹಾಗೂ ಕೃಷಿ ಹೊಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸುವ ಮೂಲಕ ಪಾರೆ ಅವರು ಅಂತರ್ಜಲ ವೃದ್ಧಿಗೆ ಆದ್ಯತೆ ನೀಡಿದ್ದಾರೆ.

ಚವಡಿಹಾಳ, ಚೋರಗಿ, ಬಸವನಗರ ವಸ್ತಿ ಮತ್ತು ಬಿರಾದಾರ ವಸ್ತಿಯ ಸರ್ಕಾರಿ ಶಾಲೆಗಳಿಗೆ ₹ 40 ಲಕ್ಷ ವೆಚ್ಚದಲ್ಲಿ ಕಂಪೌಂಡ್‌ ನಿರ್ಮಿಸಿಕೊಟ್ಟಿದ್ದಾರೆ. ಚವಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸುವಲ್ಲಿ ಪಿಡಿಒ ಪಾರೆ ಅವರ ಪಾತ್ರ ಹೆಚ್ಚಿನದು. ₹5 ಲಕ್ಷ ವೆಚ್ಚದಲ್ಲಿ ಶಾಲಾ ಆವರಣದಲ್ಲಿ ಉದ್ಯಾನ ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೇ, ಕೈತೋಟವನ್ನು ನಿರ್ಮಿಸಿಕೊಟ್ಟಿದ್ದಾರೆ.

ಚವಡಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸುಸಜ್ಜಿತ ಬ್ಯಾಸ್ಕೆಟ್‌ ಬಾಲ್‌ ಕ್ರೀಡಾಂಗಣ, ಚೋರಗಿ, ಚವಡಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಬಿಸಿಯೂಟ ಯೋಜನೆಗೆ ಅನುಕೂಲವಾಗುವಂತೆ ಸುಸಜ್ಜಿತ ಅಡುಗೆ ಕೋಣೆ ನಿರ್ಮಿಸಿಕೊಟ್ಟಿದ್ದಾರೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಚವಡಿಹಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆಮನೆ ಕಸ ಸಂಗ್ರಹಕ್ಕೆ ಆದ್ಯತೆ ನೀಡಿರುವುದು ವಿಶೇಷ. ಪ್ರತಿ ದಿನ ಪೌರಕಾರ್ಮಿಕರು ಮನೆಮನೆಗೆ ವಾಹನದ ಮೂಲಕ ತೆರಳಿ, ತ್ಯಾಜ್ಯ ಸಂಗ್ರಹಿಸಿದ ಬಳಿಕ ಅದನ್ನು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ, ಎರೆಹುಳು ಗೊಬ್ಬರ ತಯಾರಿಕೆಗೆ ಆದ್ಯತೆ ನೀಡಿದ್ದಾರೆ. ಅಲ್ಲದೇ, ₹12 ಲಕ್ಷ ಮೊತ್ತದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸುವ ಮೂಲಕ ಇತರೆ ಗ್ರಾಮ ಪಂಚಾಯ್ತಿಗಳಿಗೆ ಮಾದರಿಯಾಗಿದ್ದಾರೆ.

ರೈತರ ಹೊಲಗಳಲ್ಲಿ ಬದು ನಿರ್ಮಾಣ, ಇಂಗುಗುಂಡಿ ನಿರ್ಮಾಣ, ದನ–ಕುರಿಗಳ ಶೆಡ್‌ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಚವಡಿಹಾಳ ಗ್ರಾಮ ಪಂಚಾಯ್ತಿಯನ್ನು ಸಂಪೂರ್ಣ ಡಿಜಿಟಲಿಕರಣ ಮಾಡಿರುವುದು ಪಿಡಿಒ ಪಾರೆ ಅವರ ಮತ್ತೊಂದು ಹೆಗ್ಗಳಿಕೆ. ಇದೀಗ ₹ 18.22 ಲಕ್ಷ ಮೊತ್ತದಲ್ಲಿ ಡಿಜಿಟಲ್‌ ಗ್ರಂಥಾಲಯ ನಿರ್ಮಾಣ ಯೋಜನೆ ಕೈಗೊಂಡಿದ್ದಾರೆ. 

ರಾಜೀವ್‌ ಗಾಂಧಿ ಸೇವಾ ಕೇಂದ್ರವನ್ನು ಆರಂಭಿಸುವ ಮೂಲಕ ಗ್ರಾಮೀಣ ಜನರಿಗೆ ಕಂದಾಯ, ಗ್ರಾಮೀಣಾಭಿವೃದ್ಧಿ, ಇನ್ನಿತರ ಕೆಲಸ–ಕಾರ್ಯಗಳು ಒಂದೇ ಕಡೆ ಸಿಗುವಂತೆ ಮಾಡಿರುವುದು ವಿಶೇಷ.

ಇಡೀ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸಿದ್ದಾರೆ. ಪ್ರತಿ ಮನೆಗಳಿಗೂ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವಲ್ಲಿ ಮುಖ್ಯ ಮಾತ್ರ ವಹಿಸಿದ್ದಾರೆ. 

ನಿರುದ್ಯೋಗಿ ಯುವತಿ–ಯುವಕರಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಗ್ರಾಮದಲ್ಲಿ ಹೊಲಿಗೆ ತರಬೇತಿ ಕೇಂದ್ರವನ್ನು ಆರಂಭಿಸಿದ್ದಾರೆ. ಈಗಾಗಲೇ ಈ ಕೇಂದ್ರದಿಂದ 25 ಜನ ತರಬೇತಿ ಪಡೆದುಕೊಂಡಿದ್ದಾರೆ.

ರಾಷ್ಟ್ರೀಯ ಜೀವನೋಪಾಯ ಕಾರ್ಯಕ್ರಮದಡಿ(ಎನ್‌ಆರ್‌ಎಲ್‌ಎಂ) ಮಹಿಳಾ ಸ್ವಸಹಾಯ ಸಂಘಕ್ಕೆ ಶೆಡ್‌ ನಿರ್ಮಾಣ ಮಾಡಿಸಿಕೊಟ್ಟಿದ್ದಾರೆ.

ಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಗ್ರಾಮಸ್ಥರ ಒಡಗೂಡಿ ಇಡೀ ಗ್ರಾಮವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿರುವ ಪಿಡಿಒ ಪಾರೆ ಅವರ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಅತ್ಯುತ್ತಮ ಪಿಡಿಒ ಪ್ರಶಸ್ತಿ ನೀಡಿರುವುದು ಜಿಲ್ಲೆಗೆ ಹೆಮ್ಮೆಯಾಗಿದೆ.

*****

'ಜಿಲ್ಲಾ ಪಂಚಾಯ್ತಿ ಸಿಇಒ, ಗ್ರಾಮ ಪಂಚಾಯ್ತಿ ಅಧ್ಯಕ್ಷ, ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಚವಡಿಹಾಳ ಗ್ರಾಮದ ಅಭಿವೃದ್ಧಿ ಸಾಧ್ಯವಾಗಿದೆ. ಈ ಪ್ರಶಸ್ತಿ ನನಗೆ ಮಾತ್ರವಲ್ಲ ಎಲ್ಲರಿಗೂ ಸಮರ್ಪಿತ'

–ಸಿ.ಜಿ.ಪಾರೆ, ಪಿಡಿಒ

ಚವಡಿಹಾಳ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು