ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಎಂ.ಬಿ.ಪಾಟೀಲ ಔರಂಗಜೇಬ: ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯ 

Published 26 ಡಿಸೆಂಬರ್ 2023, 15:04 IST
Last Updated 26 ಡಿಸೆಂಬರ್ 2023, 15:04 IST
ಅಕ್ಷರ ಗಾತ್ರ

ಮುದ್ದೇಬಿಹಾಳ(ವಿಜಯಪುರ ಜಿಲ್ಲೆ): ‘ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಮಗನಿಗೆ ಕರ್ನಾಟಕ ಬಿಜೆಪಿಯನ್ನು ಬೆಂಗಳೂರಿನ ಸಬ್‌ರಿಜಿಸ್ಟ್ರಾರ್ ಆಫೀಸನಲ್ಲಿ ಬರೆದುಕೊಟ್ಟು ಬಿಟ್ಟಿದ್ದಾರೆ’ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಯಡಿಯೂರಪ್ಪ ವಿರುದ್ಧದ ವಾಗ್ದಾಳಿ ಮುಂದುವರಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಸಿದ್ಧೇಶ್ವರ ಔಷಧಿ ಮಳಿಗೆ ಉದ್ಘಾಟನಾ ಸಮಾರಂಭದ ನಂತದ ಮಾಧ್ಯಮದವರು, ‘ ಬಿಜೆಪಿಯಲ್ಲಿ ಯತ್ನಾಳ ಅವರನ್ನು ಕಡೆಗಣಿಸಲಾಗಿದೆಯೇ’ ಎಂಬ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು. 

ಸಚಿವ ಎಂ.ಬಿ.ಪಾಟೀಲ ತಮ್ಮನ್ನು ಮೂರನೇ ಟಿಪ್ಪು ಸುಲ್ತಾನ್ ಎಂದು ಜರಿದಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ‘ಅವರೇ ಔರಂಗಜೇಬ್ ಆಗಿದ್ದಾರೆ’ ಎಂದು ಹೇಳಿದರು.

‘ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲ ನೀಡಿದ ಹೇಳಿಕೆಯನ್ನು ಈ ಮೊದಲು ಖಂಡಿಸಿದ್ದೇನೆ. ಶಿವಾನಂದ ಪಾಟೀಲರು ಇಡೀ ರಾಜ್ಯದ ರೈತರ ಕ್ಷಮೆ ಕೇಳಬೇಕು. ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ಕೊಡುತ್ತಿರುವುದು ದುರಂತ. ₹5 ಲಕ್ಷ ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹಿಂದೆ ಹೇಳಿದ್ದರು. ಅದಕ್ಕೆ ನಾನೇ ಶಿವಾನಂದ ಪಾಟೀಲರಿಗೆ ₹5 ಕೋಟಿ ಕೊಡುತ್ತೇನೆ ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಹೇಳಿದ್ದೇನೆ. ಇಂತಹ ಸಚಿವರನ್ನು ಇಟ್ಟುಕೊಂಡು ಸರ್ಕಾ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಇದಕ್ಕೆ ಉತ್ತರ ಹೇಳಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಇದಕ್ಕೆ ಉತ್ತರ ಹೇಳಬೇಕು’ ಎಂದು ಹೇಳಿದರು.

ಕಳೆದ ಹನ್ನೊಂದು ಅಧಿವೇಶನದಲ್ಲಿ ಆಗಿರದೇ ಇರುವಷ್ಟು ಚರ್ಚೆ ಈ ಬಾರಿ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಆಗಿದೆ. ಕೆಲವು ಹೊಸ ತಾಲ್ಲೂಕುಗಳ ಘೋಷಣೆ ಮಾಡಿದ್ದಾರೆ. 69 ಶಾಸಕರು ಉ.ಕ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಸಿಎಂ ಎರಡುವರೆ ತಾಸು ಉತ್ತರ ನೀಡಿದ್ದಾರೆ ಎಂದು ಉತ್ತರಿಸಿದರು.

ವಿರೋಧ ಹಾಗೂ ಆಡಳಿತ ಪಕ್ಷದ ಜೋಡೆತ್ತುಗಳು ಅಡ್ಜಸ್ಟಮೆಂಟ್ ರಾಜಕಾರಣ ಮಾಡುತ್ತಿದ್ದಾರೆ. ನನ್ನದು ನೀನು ತೆಗೆಯಬೇಡ, ನಿನ್ನದು ನಾನು ತೆಗೆಯುವುದಿಲ್ಲ ಎಂದು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕುರಿತು ಟೀಕಿಸಿದರು.

ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ,ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್,ಗಣ್ಯ ವರ್ತಕ ಬಿ.ಸಿ.ಮೋಟಗಿ,ಕೊಟ್ಟೂರಬಸ್ಸು ಬಿದರಕುಂದಿ ಇದ್ದರು.


ನಕಲಿ ವೈದ್ಯರ ವಿರುದ್ಧ ಕ್ರಮ: ಆಯುಷ್ ಪದ್ಧತಿಯಲ್ಲಿ ಹಳ್ಳಿಗಳಲ್ಲಿ ಸೇವೆ ಮಾಡುವ ಪಾರಂಪರಿಕ ವೈದ್ಯರಿಗೆ ಸೇವೆ ಮಾಡಲು ಅಧಿಕಾರಿಗಳು ಬಿಡುತ್ತಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ಕೆಲವರು ಮನವಿ ಸಲ್ಲಿಸಿದಾಗ ಉತ್ತರಿಸಿದ ಶಾಸಕ ಯತ್ನಾಳ, ನಕಲಿ ವೈದ್ಯರು, ಭ್ರೂಣ ಹತ್ಯೆ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಅಧಿವೇಶನದಲ್ಲಿ ಒತ್ತಾಯಿಸಲಾಗಿದೆ. ಈ ಬಗ್ಗೆ ನಿಮ್ಮ ಬೇಡಿಕೆಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT