ಶನಿವಾರ, ಅಕ್ಟೋಬರ್ 23, 2021
21 °C
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾಯ್ದೆಗಳ ರದ್ದುಗೊಳಿಸಲು ಆಗ್ರಹ

ಸೆ.27ರಂದು ವಿಜಯಪುರ ಬಂದ್‌ಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾಯ್ದೆಗಳ ರದ್ದುಗೊಳಿಸಲು ಆಗ್ರಹಿಸಿ  ಸೆಪ್ಟೆಂಬರ್ 27 ರಂದು ಭಾರತ್‌ ಬಂದ್ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಜನರು ಸ್ವಯಂ ಪ್ರೇರಿತವಾಗಿ ಅಂದು ವಿಜಯಪುರ ಬಂದ್ ಮಾಡುವಂತೆ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮನವಿ ಮಾಡಿಕೊಂಡರು. 

ನಗರದ ಎಪಿಎಂಸಿ ಯಾರ್ಡ್‌ನ ನೀಲಕಂಠೇಶ್ವರ ಮಂಗಲ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲೆಯ ವ್ಯಾಪಾರಸ್ಥರು, ವಾಹನ ಚಾಲಕರು ಹಾಗೂ ಜನಪರ ಸಂಘ ಸಂಸ್ಥೆಯ ಮುಖಂಡರೊಂದಿಗೆ ನಡೆದ ಭಾರತ್‌ ಬಂದ್‌ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ದೆಹಲಿಯಲ್ಲಿ 10 ತಿಂಗಳಿಂದ ಕರಾಳ ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಹೋರಾಟ ನಡೆಸುತ್ತಿದೆ. ಆ ಹೋರಾಟದಲ್ಲಿ ಸುಮಾರು 600ಕ್ಕೂ ಹೆಚ್ಚು ಜನ ರೈತರು ಹುತಾತ್ಮರಾಗಿದ್ದಾರೆ. ಆದರೆ, ಸರ್ಕಾರ ಈ ಹೋರಾಟವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪರ್ಯಾಯವಾಗಿ ರೈತರಿಗೆ ಕಾಯ್ದೆಯ ಬಗ್ಗೆ ಸುಳ್ಳು ಹೇಳಿ ರೈತ ಸಮುದಾಯಕ್ಕೆ ಹೋರಾಟದ ದಾರಿ ತಪ್ಪಿಸುವಂತಹ ಕುತಂತ್ರಿ ಬುದ್ದಿ ತೋರಿಸುತ್ತದೆ. ಇದರಿಂದ ಬೇಸತ್ತು ಸರಕಾರದ ಮೇಲೆ ಒತ್ತಡ ತರಲು ಭಾರತ್‌ ಬಂದ್‌ ನಡೆಸಲಾಗುತ್ತಿದೆ ಎಂದರು. 

ಎಪಿಎಂಸಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ರೈತ ಮುಖಂಡ ಅರವಿಂದ ಕುಲಕರ್ಣಿ,  ಜಯಾನಂದ ತಾಳಿಕೋಟಿ, ಲಾಲಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆಯ ವ್ಯಾಪಾರಸ್ಥರ ಅಧ್ಯಕ್ಷ ವಿ.ಡಿ.ಕರ್ಪೂರಮಠ, ತರಕಾರಿ ವ್ಯಾಪಾರಸ್ಥರ ಸಂಘದ ಮುಂಖಂಡ ಸಲೀಂ ಸಗರ, ಫಾರೂಖ್‌ ಬಾಗವಾನ್, ಆಟೋ ಯೂನಿಯನ್ ಮುಖಂಡರಾದ ನೂರ್‌ಅಹ್ಮರ್‌, ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಎಂ. ಸಿ. ಮುಲ್ಲಾ, ಫಯಾಜ್ ಕಲಾದಗಿ, ಸ್ಲಂ ಅಬಿವೃದ್ಧಿ ಸಮಿತಿ ಮುಖಂಡ ಅಕ್ರಂ ಮಾಶ್ಯಾಳಕರ, ದಸ್ತಗೀರ ಉಕ್ಕಲಿ, ಜನವಾದಿ ಮಹಿಳಾ ಸಂಘಟನೆ ಮುಂಖಂಡರಾದ ಸುರೇಖಾ ರಜಪೂತ, ಬ್ಯಾಂಕ್‌ ಯೂನಿಯನ್ ನಿವೃತ್ತ ಮುಖಂಡರಾದ ಸಿ.ಎ.ಗಂಟೆಪ್ಪಗೋಳ, ಟಿಪ್ಪು ಕ್ರಾಂತಿ ಸೇನೆ ಮುಖಂಡರಾದ ರಿಜ್ವಾನ್ ಮುಲ್ಲ, ನಿರ್ಮಲಾ ಹೊಸಮನಿ, ದಲಿತಪರ ಸಂಘಟನೆಯ ಮುಖಂಡ ಶ್ರೀನಾಥ ಪೂಜಾರಿ, ಕಾರ್ಮಿಕ ಸಂಘಟನೆ ಮುಖಂಡ ಲಕ್ಷ್ಮಣ ಹಂದ್ರಾಳ, ಮಲ್ಲಿಕಾರ್ಜುನ ಎಚ್. ಟಿ, ರೈತ ಮುಖಂಡ ಬಿ.ಭಗವಾನ್ ರೆಡ್ಡಿ, ಅರವಿಂದ ಕುಲಕರ್ಣಿ, ಶಕ್ತಿಕುಮಾರ, ಬಾಳು ಜೇವೂರ, ಪ್ರಗತಿಪರ ಸಂಘಟನೆಗಳ ವೇದಿಕೆಯ ಮುಖಂಡ ಸಿದ್ದಲಿಂಗ ಬಾಗೇವಾಡಿ ಹಾಗೂ ನಿವೇಶನ ರಹಿತರ ಸಂಘಟನೆ ಮುಖಂಡರಾದ ಪೀರಾ ಜಮಾದಾರ, ಡಾ. ಗುರಿಕಾರ ಅವರು ಅಂದು ವ್ಯಾಪಾರ ವಹಿವಾಟು ಹಾಗೂ ದಿನನಿತ್ಯದ ಕೆಲಸ ಕಾರ್ಯಗಳು ಸ್ಥಗಿತಗೊಳಿಸಿ ವಿಜಯಪುರ ಬಂದ್ ಮಾಡುವುದಾಗಿ ಬೆಂಬಲ ಸೂಚಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು