ಮಂಗಳವಾರ, ಜೂನ್ 28, 2022
24 °C
ಭಿತ್ತಿಪತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಮುಖಂಡರು

ವಿದ್ಯುತ್ ದರ ಏರಿಕೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ರಾಜ್ಯ ಸರ್ಕಾರ ಏಪ್ರಿಲ್‌ 1 ರಿಂದಲೇ ಅನ್ವಯವಾಗುವಂತೆ ಪ್ರತಿ ಯುನಿಟ್‍ ವಿದ್ಯುತ್‌ ದರವನ್ನು ಸರಾಸರಿ 30 ಪೈಸೆಯಷ್ಟು ಹೆಚ್ಚಿಸಿರುವುದನ್ನು ಹಾಗೂ ನಿಗದಿತ ಠೇವಣಿ ಮೊತ್ತವನ್ನೂ ಏರಿಸಿರುವುದನ್ನು ಖಂಡಿಸಿ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಮುಖಂಡರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಎಸ್‍ಯುಸಿಐ(ಸಿ)ನ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನ್‍ ರೆಡ್ಡಿ, ಕೊರೊನಾ ಸಂಕಷ್ಟದಲ್ಲಿ ಬೆಲೆ ನಿಯಂತ್ರಿಸಿ ಜನರಿಗೆ ಸಹಾಯ ಮಾಡಬೇಕಾದ ಸರ್ಕಾರ, ವಿದ್ಯುತ್ ದರ ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಸೋಂಕು ಮತ್ತು ಲಾಕ್‌ಡೌನ್‌ನಿಂದಾಗಿ ಸಾಮಾನ್ಯ ಜನ ಉದ್ಯೋಗವಿಲ್ಲದೆ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಉತ್ಪಾದನೆ ಇಲ್ಲದೆ ಕಷ್ಟ-ನಷ್ಟಕ್ಕೀಡಾಗಿದ್ದಾರೆ ಎಂದು ಹೇಳಿದರು.

ಪೆಟ್ರೋಲ್ ಲೀಟರ್‌ಗೆ ₹ 100ರ ಗಡಿ ದಾಟಿದೆ. ಕಳೆದ ಒಂದೂವರೆ ವರ್ಷದಿಂದ ಈಚೆಗೆ ಸುಮಾರು ಒಂದು ಲೀಟರ್‌ಗೆ ₹30 ರಷ್ಟು ದರ ಜಾಸ್ತಿ ಆಗಿದೆ. 2014 ರಲ್ಲಿ ₹ 400 ಇದ್ದ ಅಡುಗೆ ಅನಿಲದ ಸಿಲಿಂಡರ್ ಬೆಲೆ ಈಗ ₹ 850 ಆಗಿದೆ ಎಂದು ದೂರಿದರು.

ಸಂಕಷ್ಟದ ಕಾಲದಲ್ಲಿ ನೆರವಿಗೆ ಬರಬೇಕಾಗಿದ್ದ ರಾಜ್ಯದ ಬಿಜೆಪಿ ಸರ್ಕಾರ ನಿರ್ದಯವಾಗಿ ವಿದ್ಯುತ್ ಶುಲ್ಕ ಹೆಚ್ಚಿಸಿ ಜನತೆಗೆ ದ್ರೋಹ ಬಗೆದಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ದರವನ್ನು ಇಳಿಸಿ ವಿದ್ಯುತ್ ಬಳಕೆಗೆ ಪ್ರೊತ್ಸಾಹ ನೀಡಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಾಗಿದೆ ಎಂದರು.

ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ಇಂದು ನಷ್ಟದಲ್ಲಿದ್ದರೆ ಇದರ ಹೊಣೆಯನ್ನು ರಾಜ್ಯ ಸರ್ಕಾರವೇ ವಹಿಸಬೇಕಾಗುತ್ತದೆ. ರಾಜ್ಯದ ಬಿಜೆಪಿ ಸರ್ಕಾರ ಯುನಿಟ್‍ಗೆ ಹೆಚ್ಚುವರಿ 50 ಪೈಸೆ ನೀಡಿ ಕೇಂದ್ರ ಸರ್ಕಾರದಿಂದ ವಿದ್ಯುತ್ ಖರೀದಿಸುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ₹ 5 ಸಾವಿರದಿಂದ ₹ 6 ಸಾವಿರ ಕೋಟಿ ಹೊರೆಯಾಗುತ್ತಿದೆ. ಈ ಪೋಲಾಗುತ್ತಿರುವ ಹಣವನ್ನು ಉಳಿಸಿದರೆ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳನ್ನು ನಷ್ಟದಿಂದ ಪಾರುಮಾಡಬಹುದು ಎಂದರು.

ಅದಾನಿ ಮೊದಲಾದ ಕಾರ್ಪೊರೇಟ್‌ ಕಂಪನಿಗಳು ಹಾಗೂ ಕೇಂದ್ರದ ಗ್ರಿಡ್‌ಗಳಿಂದ ರಾಜ್ಯ ಸರ್ಕಾರ 38,594 ಮಿಲಿಯನ್ ಯೂನಿಟ್‌ಗಳನ್ನು ಖರೀದಿಸುತ್ತಿದೆ. ಆದರೆ, ಬಳಕೆ ಮಾಡುತ್ತಿರುವುದು ಮಾತ್ರ ಕೇವಲ 19,921 ಮಿಲಿಯನ್ ಯೂನಿಟ್‌ಗಳು. ಇದಕ್ಕಾಗಿ ರಾಜ್ಯ ಸರ್ಕಾರ ₹ 4388 ಕೋಟಿ  ಪಾವತಿಸುತ್ತಿದೆ. ಒಟ್ಟಾರೆಯಾಗಿ ಲೆಕ್ಕ ಹಾಕಿದರೆ ಎಲ್ಲ ಮೂಲಗಳಿಂದ ಪಾವತಿಸಬೇಕಾದ ಮೊತ್ತಕ್ಕಿಂತ ₹ 5460 ಕೋಟಿ ಹೆಚ್ಚಿಗೆ ಪಾವತಿಸಲಾಗುತ್ತಿದೆ. ಕಷ್ಟದಲ್ಲಿರುವ ಜನರಿಂದ ಕಿತ್ತುಕೊಂಡು ಕಾರ್ಪೊರೇಟ್ ಕಂಪನಿಗಳನ್ನು ಉದ್ದಾರ ಮಾಡಲು ರಾಜ್ಯ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ಜಿಲ್ಲಾ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಎಚ್.ಟಿ., ಸಿದ್ಧಲಿಂಗ ಬಾಗೇವಾಡಿ, ಭರತಕುಮಾರ, ಕಾರ್ಯಕರ್ತರಾದ ಕಾವೇರಿ ರಜಪೂತ, ಶ್ರೀಕಾಂತ ಕೊಂಡಗೂಳಿ ಭಾಗವಹಿಸಿದ್ದರು.

ಆನ್‍ಲೈನ್ ಮೂಲಕ ನಡೆಸಿದ ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸಮಿತಿ ಸದಸ್ಯರಾದ ಬಾಳು ಜೇವೂರ, ಕಾರ್ಯಕರ್ತರಾದ ಕಾಶಿಬಾಯಿ ತಳವಾರ, ಸುನೀಲ ಸಿದ್ರಾಮಶೆಟ್ಟಿ, ಶಿವಬಾಳಮ್ಮ ಕೊಂಡಗೂಳಿ, ಶಿವರಂಜನಿ ಎಸ್.ಬಿ., ಗೀತಾ ಎಚ್., ರೈತರಾದ ತಿಪ್ಪರಾಯ ಹತ್ತರಕಿ, ಹೊನ್ನವ್ವ ಹತ್ತರಕಿ, ಜನ್ನು ರಾಠೋಡ, ಸುನಂದ ನಾಯಕ್, ನಜೀರ್ ಪಟೇಲ್, ಯುವಕರಾದ ದೀಪಕ ಗುಣಕಿಮಠ, ನೀಲು ಪಾಟೀಲ ಭಾಗವಹಿಸಿದ್ದರು.

***

ಜನರನ್ನು ಸಂಕಷ್ಟಕ್ಕೆ ದೂಡಿ, ಖಾಸಗಿ ವಿದ್ಯುತ್ ತಯಾರಿಕಾ ಕಂಪನಿಗಳಿಗೆ ಲಾಭ ಮಾಡಿಕೊಡುವ ದರ ಏರಿಕೆ ನೀತಿಗಳ ವಿರುದ್ಧ ಜನತೆ ಒಗ್ಗಟ್ಟಾಗಿ ಸಿಡಿದೇಳಬೇಕು
ಬಿ. ಭಗವಾನ್‍ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ
ಎಸ್‍ಯುಸಿಐ(ಸಿ), ವಿಜಯಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು