ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿಯಲ್ಲಿ ಕಾಂಗ್ರೆಸ್‌ ಬೃಹತ್‌ ರೋಡ್ ಷೋ

ಕೋವಿಡ್‌ ಪರಿಹಾರ ನೀಡದ ಸರ್ಕಾರಕ್ಕೆ ಪಾಠ ಕಲಿಸಿ: ಡಿಕೆಶಿ
Last Updated 23 ಅಕ್ಟೋಬರ್ 2021, 15:47 IST
ಅಕ್ಷರ ಗಾತ್ರ

ಸಿಂದಗಿ(ವಿಜಯಪುರ): ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಶನಿವಾರ ಪಟ್ಟಣದಲ್ಲಿ ಬೃಹತ್‌ ರೋಡ್ ಷೋ ನಡೆಸಿ ಮತಯಾಚನೆ ಮಾಡಿದರು.

ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡ ರೋಡ್ ಷೋ ಡಾ.ಅಂಬೇಡ್ಕರ್ ವೃತ್ತ, ಟಿಪ್ಪು ಸುಲ್ತಾನ್‌ ವೃತ್ತ, ವಿವೇಕಾನಂದ ವೃತ್ತವನ್ನೊಳಗೊಂಡು ಪ್ರಮುಖ ಬೀದಿಗಳಲ್ಲಿ ಸಾಗಿ ಬಂದಿತು.
ರೋಡ್ ಷೋ ದಲ್ಲಿ ಕುದುರೆ ಕುಣಿತ ವಿಶೇಷವಾಗಿತ್ತು.

ತೆರೆದ ಜೀಪಿನಲ್ಲಿ ಡಿ.ಕೆ.ಶಿವಕುಮಾರ ಜೊತೆಗೆ ಅಭ್ಯರ್ಥಿ ಅಶೋಕ ಮನಗೂಳಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ , ಧೃವನಾರಾಯಣ, ಸಿಂದಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಮುಂತಾದವರು ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಮನಗೂಳಿ 25 ಸಾವಿರ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್‌ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬೀದಿ ವ್ಯಾಪಾರಿಗಳು, ಕೂಲಿಕಾರ್ಮಿಕರು, ಕೋವಿಡ್‌ನಿಂದ ಜೀವ ಕಳೆದುಕೊಂಡವರಿಗೆ ಪರಿಹಾರ ನೀಡುವುದಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಘೋಷಣೆ ಮಾಡಿದವು. ನಿಮಗೆ ಪರಿಹಾರ ತಲುಪಿತಾ ಎಂದು ಪ್ರಶ್ನಿಸಿದರು.

ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಅಕೌಂಟ್‌ಗೆ ₹ 15 ಲಕ್ಷ ಹಾಕುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಹಣವನ್ನು ನಿಮ್ಮ ಅಕೌಂಟ್‌ಗೆ ಹಾಕಿದರಾ? ಎಂದು ಪ್ರಶ್ನಿಸಿದರು.

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದರು. ಆದರೆ, ಇರುವ ಉದ್ಯೋಗವನ್ನು ಮೋದಿ ಕಸಿದುಕೊಂಡರು ಎಂದು ಆರೋಪಿಸಿದರು.

ಕೋವಿಡ್‌ನಿಂದ ಸಾವಿಗೀಡಾದವರ ಕುಟುಂಬಕ್ಕೆ ಕೊನೇ ಪಕ್ಷ ಸಚಿವರು ಸಾಂತ್ವಾನ ಹೇಳುವ ಕೆಲಸವನ್ನೂ ಮಾಡಲಿಲ್ಲ. ಇಂಥವರಿಗೆ ವೋಟ್‌ ಹಾಕಬೇಡಿ ಎಂದು ಮನವಿ ಮಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಬಿಜೆಪಿಯವರು ಅಧಿಕಾರಕ್ಕೆ ಬಂದ ಬಳಿಕ ಜನಸಾಮಾನ್ಯರಿಗೆ ಮೋಸ, ವಂಚನೆ ಮಾಡಿದ್ದಾರೆ. ಜನರ ಜೀವನ ದುಸ್ತರ ಮಾಡಿದ್ದಾರೆ ಎಂದು ಆರೋಪಿಸಿದರು.‌

ರೈತರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ್ದಾರೆ. ಯುವಕರ ಉದ್ಯೋಗ ಕಸಿದುಕೊಂಡು, ಭವಿಷ್ಯ ಹಾಳು ಮಾಡಿದ್ದಾರೆ ಎಂದು ದೂರಿದರು.‌

ಸಿಂದಗಿ, ಹಾನಗಲ್‌ ಉಪ ಚುನಾವಣೆ ಮೂಲಕವೇ ಬಿಜೆಪಿ ಸರ್ಕಾರದ ಅವನತಿ ಆರಂಭವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT