ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಂಕಷ್ಟಕ್ಕೆ ಸ್ಪಂದಿಸದ ಕಾಂಗ್ರೆಸ್‌: ರವೀಂದ್ರ ಲೋಣಿ ಆರೋಪ

Last Updated 14 ಜುಲೈ 2021, 15:34 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ಸಂದರ್ಭದಲ್ಲಿ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಿದ ಕಾಂಗ್ರೆಸ್ ಮುಖಂಡರು ಅನಗತ್ಯವಾಗಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಸಹ ವಕ್ತಾರ, ಮಹಾನಗರ ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಯಾವೊಬ್ಬರಿಗೂ ಬೆಡ್‌, ಆಕ್ಸಿಜನ್‌, ಆಸ್ಪತ್ರೆ, ಆಹಾರ ಕಿಟ್‌, ಆಸ್ಪತ್ರೆ ಖರ್ಚು, ವೆಚ್ಚ ಭರಿಸದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಇದೀಗ ಕೇವಲ ಬಿಜೆಪಿ ಸರ್ಕಾರದ ವಿರುದ್ಧ ಹತಾಶೆಯಿಂದ ಕೂಡಿದ ಆರೋಪದಲ್ಲಿ ತೊಡಗಿದ್ದಾರೆ ಎಂದರು.

ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಬಿಜೆಪಿ ಮುಖಂಡರು, ಕಾರ್ಯಕರ್ತರು ತೊಂದರೆಗೆ ಒಳಗಾದ ಕೋವಿಡ್‌ ಪೀಡಿತರಿಗೆ ಆಸ್ಪತ್ರೆ ಸೌಲಭ್ಯ ಒದಗಿಸುವ ಜೊತೆಗೆ ಬೆಡ್‌, ಆಕ್ಸಿಜನ್‌, ವೆಂಟಿಲೇಟರ್‌, ರೆಮ್‌ಡಿಸಿವಿರ್‌, ರಕ್ತದಾನ ಶಿಬಿರ ಮಾಡುವ ಜೊತೆಗೆ ಆಹಾರ ಕಿಟ್‌ ಒದಗಿಸಿ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಕೋವಿಡ್‌ ಸಂದರ್ಭದಲ್ಲಿ ಮನೆಬಿಟ್ಟು ಹೊರಬಾರದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಮನೆಯಲ್ಲೇ ಅಡಗಿಕೊಂಡಿದ್ದರು. ಆದರೆ, ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಜನರ ಸಂಕಷ್ಟಕ್ಕೆ ಮಿಡಿದಿದ್ದಾರೆ ಎಂದರು.

ಸಂಸದ ರಮೇಶ ಜಿಗಜಿಣಗಿ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಜಿಲ್ಲೆಯ ಬಿಜೆಪಿ ಶಾಸಕರು ಜನ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಜಿಲ್ಲಾ, ತಾಲ್ಲೂಕು, ನಗರ, ಪಟ್ಟಣ, ಹಳ್ಳಿಗಳಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ, ಕೋವಿಡ್‌ ಸಂಕಷ್ಟ ಪರಿಹಾರಕ್ಕೆ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.

ವಿಜಯಪುರ ಜಿಲ್ಲೆಗೆ ಸಾವಿರಾರು ಕೋಟಿ ಮೊತ್ತದ ಯೋಜನೆಗಳಾದ ವಿಮಾನ ನಿಲ್ದಾಣ, ರೈಲ್ವೆ ಯೋಜನೆ, ಕೂಡಗಿ ಎನ್‌ಟಿಪಿಸಿ,ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಜಾರಿಗೆ ತಂದಿರುವ ಸಂಸದ ಜಿಗಜಿಣಗಿ ಅವರು ಎಲ್ಲಿಯೂ ತಮ್ಮ ಕಾರ್ಯಗಳನ್ನು ಹೇಳಿಕೊಳ್ಳುತ್ತಿಲ್ಲ. ಆದರೆ, ವಿರೋಧ ಪಕ್ಷದವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳು ಹಾಗೂ 1035 ಜನವಸತಿ ಪ್ರದೇಶಗಳಿಗೆ ನಳದ ಮೂಲಕ ಮನೆ,ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ₹2385 ಕೋಟಿ ಮೊತ್ತದ ಜಲಜೀವನ್‌ ಮಿಷನ್‌ ಯೋಜನೆಯನ್ನು ಸಂಸದರು ಜಾರಿಗೆ ತಂದಿದ್ದಾರೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಮತ್ತು ಜಿಲ್ಲೆಯ ಸಚಿವರು, ಸಂಸದರು ಮತ್ತು ಶಾಸಕರ ಕೊಡುಗೆ ಏನೆಂಬುದನ್ನುಸಂದರ್ಭ ಬಂದಾಗ ಕಾಂಗ್ರೆಸ್‌ ಮುಖಂಡರಿಗೆ ದಾಖಲೆ ಸಮೇತ ತಿಳಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅವಸಾನದ ಅಂಚಿನಲ್ಲಿದೆ. ನಾಯಕತ್ವಕ್ಕಾಗಿ ಕಚ್ಚಾಟ ನಡೆದಿದೆ ಎಂದರು.

ಬಿಜೆಪಿ ನಾಗಠಾಣ ಮಂಡಳ ಅಧ್ಯಕ್ಷ ಈಶ್ವರ ಶಿವೂರು,ಕಾರ್ಯದರ್ಶಿ ರವಿ ಮುಕರ್ತಿಹಾಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

*
ಜಿಲ್ಲೆಯ ಕೆರೆ ತುಂಬುವ ಯೋಜನೆಗಳು ಆರಂಭವಾಗಿದ್ದೇ ಬಿಜೆಪಿ ಅವಧಿಯಲ್ಲಿ ಆದರೆ, ಈಗ ಕಾಂಗ್ರೆಸ್‌ ಮುಖಂಡರು ಯೋಜನೆ ಲಾಭ ಪಡೆಯಲು ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದಾರೆ.
–ರವೀಂದ್ರ ಲೋಣಿ, ಬಿಜೆಪಿ ಜಿಲ್ಲಾ ಘಟಕದ ಸಹ ವಕ್ತಾರ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT