ಸೋಮವಾರ, ಆಗಸ್ಟ್ 15, 2022
22 °C
ಅಲೆಮಾರಿಗಳು, ಪೌರಕಾರ್ಮಿಕರು, ಅಂಗವಿಕಲರಿಗೆ ನೆರವು

ವಿಜಯಪುರ: ಕೊರೊನಾ ಸಂಕಷ್ಟಕ್ಕೆ ‘ಟಂಕಸಾಲಿ’ ಸ್ಪಂದನೆ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್‌ ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಅಲೆಮಾರಿಗಳು, ಅಂಗವಿಕಲರು, ಪೌರಕಾರ್ಮಿಕರು, ಕೊಳೆಗೇರಿ ನಿವಾಸಿಗಳು, ಬಡ ಕೂಲಿಕಾರ್ಮಿಕರು, ತರಕಾರಿ ವ್ಯಾಪಾರಸ್ಥರಿಗೆ ಸ್ವಂತ ಖರ್ಚಿನಿಂದ ಆಹಾರ ಕಿಟ್‌ಗಳನ್ನು ನೀಡುವ ಮೂಲಕ ವಿಶ್ವಕರ್ಮ ಮಹಿಳಾ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ಟಂಕಸಾಲಿ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.

ಕೇವಲ ಆಹಾರ ಕಿಟ್‌ ವಿತರಿಸುವುದಕ್ಕೆ ಮಾತ್ರ ಸೀಮಿತವಾಗದ ಭಾರತಿ ಟಂಕಸಾಲಿ ಅವರು, ನಗರದಲ್ಲಿ ಕೋವಿಡ್‌ ಹರಡದಂತೆ ಮುಂಜಾಗೃತಿ ವಹಿಸುವಂತೆ ಜನಜಾಗೃತಿ ಮೂಡಿಸುವ ಕಾರ್ಯದಲ್ಲೂ ಮೂಂಚೂಣಿಯಲ್ಲಿದ್ದಾರೆ.

ನಗರದಲ್ಲಿ ಬೀಡು ಬಿಟ್ಟಿರುವ ರಾಜಸ್ತಾನದ ಒಂಟೆಗಳನ್ನು ಬಾಡಿಗೆಗೆ ಪಡೆದು, ಅವುಗಳ ಮೇಲೇರಿ ಕುಳಿತು ಓಣಿ, ಓಣಿಗಳನ್ನು ಸುತ್ತಾಡಿ ಕೊರೊನಾ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಜನರು ಅನಗತ್ಯವಾಗಿ ಮನೆಯಿಂದ ಬರದಂತೆ ವಿನಂತಿಸುವ ಜೊತೆಗೆ ಮಾಸ್ಕ್‌ ಧರಿಸುವಂತೆ, ಹ್ಯಾಂಡ್‌ ಸ್ಯಾನಿಟೈಸ್‌ ಬಳಸುವಂತೆ ಹಾಗೂ ಪರಸ್ಪರ ಅಂತರ ಕಾಪಾಡುವಂತೆ ಮನವಿ ಮಾಡುವ ಕಾಯಕದಲ್ಲೂ ತೊಡಗಿದ್ದಾರೆ.

ವಿಜಯಪುರ ನಗರದಲ್ಲಿ ಅಲೆದಾಡುವ ಭಿಕ್ಷುಕರು, ನಿರ್ಗತಿಕರು ಹಾಗೂ ಬಾಲಕಾರ್ಮಿಕರ ಅನಾಥಾಶ್ರಮದ ಅನಾಥ ಮಕ್ಕಳಿಗೆ ತಾವೇ ಸ್ವತಃ ಆಹಾರವನ್ನು ತಯಾರಿಸಿ, ತೆಗೆದುಕೊಂಡು ಹೋಗಿ ಊಟ, ಉಪಹಾರವನ್ನು ಉಣಬಡಿಸಿದ್ದಾರೆ.

ಕುಂದದ ಉತ್ಸಾಹ: 65 ವರ್ಷ ವಯಸ್ಸಿನ ಭಾರತಿ ಟಂಕಸಾಲಿ ಅವರು ತಮ್ಮ ಇಳಿ ವಯಸ್ಸನ್ನೂ ಲೆಕ್ಕಿಸದೇ ಜನಪರ ಕೆಲಸ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ, ಕರ್ನಾಟಕ ರಾಜ್ಯ ಸಣ್ಣ, ಅತಿ ಸಣ್ಣ ಸಮುದಾಯಗಳ ಒಕ್ಕೂಟದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ, ಕರ್ನಾಟಕ ರಕ್ಷಣಾ ವೇದಿಕೆ(ನಮ್ಮ ಬಣ) ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಹಾಗೂ ಜಯ ಕರ್ನಾಟಕ ಸಂಘಟನೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ವಿವಿಧ ಜನಪರ ಕೆಲಸ ಮತ್ತು ಹೋರಾಟಗಳಲ್ಲೂ ಮುಂಚೂಣಿಯಲ್ಲಿದ್ದಾರೆ.

ಮಹಿಳೆಯರಿಗೆ ನೆರವು: ಪತಿಯಿಂದ ಕಿರುಕುಳಕ್ಕೆ ಒಳಗಾದ ಮಹಿಳೆಯರ ಹಾಗೂ ವಿಧವೆಯರ ಸಮಸ್ಯೆಗಳಿಗೂ ಸ್ಪಂದಿಸುವ ಮೂಲಕ ಅವರಿಗೆ ಆತ್ಮಸ್ಥೈರ್ಯ ತುಂಬಿ ಸಮಾಜದಲ್ಲಿ ಗಟ್ಟಿಯಾಗಿ ನಿಲ್ಲಲು, ಸ್ವಯಂ ಉದ್ಯೋಗಿಗಳಾಗಿ ಬದುಕುಕಟ್ಟಿಕೊಳ್ಳಲು ಟಂಕಸಾಲಿ ನೆರವಾಗಿದ್ದಾರೆ. ಮಹಿಳೆಯರ ಅಭ್ಯುದಯಕ್ಕಾಗಿ ಶ್ರಮಿಸುವ ಮೂಲಕ ಪರಿವಾರಕ್ಕೆ ಹೆಮ್ಮೆ ತರುವ ಕಾಯಕ ಮಾಡುತ್ತಿದ್ದಾರೆ.

ಅಭಿವೃದ್ಧಿಗೆ ಆದ್ಯತೆ: ಸಮಾಜಸೇವೆ, ಸಂಘಟನಾ ಕಾರ್ಯಗಳ ಜೊತೆ, ಜೊತೆಗೆ ತಾವು ವಾಸವಾಗಿರುವ ಬಾಗಲಕೋಟೆ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಕಾಲೊನಿಗೆ ಸಿಸಿ ರಸ್ತೆ ನಿರ್ಮಾಣ, ಉದ್ಯಾನ ನಿರ್ಮಾಣ, ಬೀದಿ ದೀಪ ದುರಸ್ತಿ, ಚರಂಡಿಗಳ ಸ್ವಚ್ಛತೆ, ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸುವಲ್ಲೂ ಮುಖ್ಯ ಪಾತ್ರ ವಹಿಸಿದ್ದಾರೆ. ಅಪ್ಪು ಪಟ್ಟಣಶೆಟ್ಟಿ ಅವರು ಶಾಸಕರಾಗಿದ್ದಾಗ ಅವರ ಗಮನಕ್ಕೆ ತಂದು, ತಮ್ಮ ಬಡಾವಣೆಗೆ ಮೂಲಸೌಲಭ್ಯ ಒದಗಿಸುವಲ್ಲಿ ಶ್ರಮ ವಹಿಸಿದ್ದಾರೆ. 

***

ಕಷ್ಟದ ಮತ್ತು ಸುಖಃ ಎರಡೂ ಜೀವನದ ಅನುಭವ ನನಗಿದೆ. ಅನ್ನದ ಬೆಲೆ ಏನೂ ಎಂಬುದರ ಅರಿವಿದೆ. ಹೀಗಾಗಿ ಸಂಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ.
–ಭಾರತಿ ಟಂಕಸಾಲಿ, ಅಧ್ಯಕ್ಷೆ, ವಿಜಯಪುರ ಜಿಲ್ಲಾ ವಿಶ್ವಕರ್ಮ ಮಹಿಳಾ ಸಮಾಜ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು