ಬುಧವಾರ, ಜೂನ್ 23, 2021
28 °C

ಕೋವಿಡ್‌ ಗೆದ್ದವರ ಕಥೆಗಳು | ಕೊರೊನಾ ಸೋಲಿಸಿದ 87 ರ ಧೀರೆ

ಶಾಂತೂ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ: ‘ನನಗೀಗ 87 ವರ್ಷ. ಮಧುಮೇಹ, ರಕ್ತದೊತ್ತಡ, ಅಸ್ತಮಾದಂಥ ರೋಗಗಳಿಲ್ಲ. ಆದರೂ ನನಗೂ ಕೋವಿಡ್‌ ಕಾಡಿಸಿತು. ಆದರೆ, ಅದಕ್ಕೆ ಹೆದರಲಿಲ್ಲ’ ಎನ್ನುತ್ತಾರೆ ಕೋವಿಡ್‌ನಿಂದ ಗುಣಮುಖರಾದ ಸುಂಗಠಾಣ ಗ್ರಾಮದ ವಯೋವೃದ್ಧೆ ಶಿವಮ್ಮ ಯಾಳಗಿ.

‘ನನಗೆ ಒಮ್ಮೆಲೆ ಕೆಮ್ಮು, ನೆಗಡಿ ಕಾಣಿಸಿಕೊಂಡಾಗ ಸಿಂದಗಿಯ ಖಾಸಗಿ ಆಸ್ಪತ್ರೆಗೆ ಹೋದೆ. ಕೊರೊನಾ ಸೋಂಕು ದೃಢಪಟ್ಟಿತ್ತು. ಕೋವಿಡ್ ಸೆಂಟರ್ ಗೆ ಬರುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳು ತಿಳಿಸಿದರು. ಆದರೆ, ಮನೆಯಲ್ಲಿಯೇ ಸಾಯ್ತಿನಿ ಆಸ್ಪತ್ರೆಗೆ ದಾಖಲಾಗುವುದಿಲ್ಲ ಎಂದೆ. ಅದಕ್ಕೆ ಒಪ್ಪಿಗೆಯೂ ದೊರಕಿತು’ ಎಂದರು.

‘ಮನೆಯಿಂದ ಹೊರ ಬರದ ರೀತಿಯಲ್ಲಿ ಕಟಿಗಿ, ಮುಳ್ಳು ಕಟ್ಟಿದರು. ಆರೈಕೆ ಮಾಡುವ ಮಗನಿಗೂ ಸೋಂಕು ಬಂದಿದ್ದರಿಂದ ಅವನನ್ನು ಕೋವಿಡ್ ಸೆಂಟರ್ ಗೆ ಸೇರಿಸಿದರು. ಆಗ ನನ್ನ ಆರೈಕೆಗೆ ಬಂದವನೇ ನನ್ನ ಮಗಳ ಮಗ. 14 ದಿನಗಳ ಕಾಲ ನನ್ನನ್ನು ಮೊಮ್ಮಗ ಮಗುವಿನಂತೆ ಆರೈಕೆ ಮಾಡಿದ. ಜನರಾಡುವ ಮಾತುಗಳಿಗೆ ಕಿವಿಗೊಡಲಿಲ್ಲ. ಸಕಾರಾತ್ಮಕ ಭಾವನೆ, ಗಟ್ಟಿತನವೇ ಕೊರೊನಾ ಸೋಲಿಸುವ ಅಸ್ತ್ರವಾಯಿತು’ ಎಂದರು.

‘ಕುಡಿಯುವ ನೀರು ತರಲು ರಾತ್ರಿ ಹೊರಗೆ ಹೋಗುವುದಕ್ಕೂ ಅಡ್ಡಿಪಡಿಸಿದಾಗ ಮನಸ್ಸಿಗೆ ನೋವು ತರಿಸಿತು. ಬೇರೆ ಊರಲ್ಲಿ ನೌಕರಿ ಮಾಡುವ ನನ್ನ ಮಗ ತಹಶೀಲ್ದಾರ್‌ ಸಾಹೇಬರಿಗೆ ಮಾತನಾಡಿದಾಗ ಮೊಮ್ಮಗ ರಾತ್ರಿ ನೀರು ತರಲು ಸಾಧ್ಯವಾಯಿತು. ಮೊಮ್ಮಗನ ಗೆಳೆಯರು ತರಕಾರಿ, ದಿನಸಿ ತಂದು ಕೊಡುತ್ತಿದ್ದರು. 14 ದಿನಗಳ ಕಾಲ ಮನೆಯಿಂದ ಹೊರಗೆ ಒಂದು ಹೆಜ್ಜೆಯೂ ಇಟ್ಟಿಲ್ಲ. ಮನೆಯಲ್ಲಿ ಶೌಚಾಲಯವಿಲ್ಲದ ಕಾರಣ ಮನೆಯ ಹಿಂದಿರುವ ಹೊಲದ ಬಯಲಿಗೆ ಬಹಿರ್ದೆಸೆಗೆ ಹೋಗುತ್ತಿದ್ದೆ’ ಎಂದರು.

‘ಯಂಕಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ನೀಡಿದ ಗುಳಿಗೆಗಳನ್ನು ತೆಗೆದುಕೊಂಡು ಗುಣಮುಖನಾಗಿರುವೆ’ ಎಂದು ಹೇಳಿದರು.

‘ನನ್ನಂಥ ವಯೋಮಾನದವರೂ ಕೂಡ ಕೊರೊನಾ ವಿರುದ್ಧ ಜಯಿಸಬಹುದು ಎಂಬುದು ಸೋಂಕಿತರಲ್ಲಿ ಕೊರೊನಾ ಸೋಂಕನ್ನು ಎದುರಿಸುವ ಮನೋಭಾವ ಬಂದರೆ ಅಷ್ಟೇ ಸಾಕು ಯಾವ ತೊಂದರೆ ಅನುಭವಿಸದೇ ಗುಣಮುಖರಾಗಲು ಸಾಧ್ಯ’ ಎಂದು ಅನುಭವದ ಮಾತುಗಳನ್ನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು