ಶುಕ್ರವಾರ, ಜೂನ್ 25, 2021
21 °C
ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷದಿಂದ ಆನ್‌ಲೈನ್‌ ಪ್ರತಿಭಟನೆ

ಸರ್ಕಾರಗಳ ವೈಫಲ್ಯದಿಂದ ಕೋವಿಡ್ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್ ಎರಡನೇ ಅಲೆ ನಿಯಂತ್ರಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ಎಸ್.ಯು.ಸಿ.ಐ ಕಮ್ಯೂನಿಸ್ಟ್ ಪಕ್ಷದಿಂದ ಮಂಗಳವಾರ ಆನ್‌ಲೈನ್‌ ಪ್ರತಿಭಟನೆ ನಡೆಸಲಾಯಿತು.
 
ಕಳೆದ ವರ್ಷವೇ ಕೋವಿಡ್ ಎರಡನೆ ಅಲೆಯ ತೀವ್ರತೆ ಬಗ್ಗೆ ತಜ್ಞರು ಸರ್ಕಾರವನ್ನು ಎಚ್ಚರಿಸಿದ್ದರು. ಆದರೆ, ಸರ್ಕಾರ ತನ್ನ ಜವಾಬ್ದಾರಿ ಮತ್ತು ಕರ್ತವ್ಯ ನಿರ್ಲಕ್ಷಿಸಿ ಜನರ ಮಾರಣ ಹೋಮ ನಡೆಸುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿಂದು ಸಂಭವಿಸುತ್ತಿರುವ ಸಾವುಗಳು ಕೇವಲ ಕೋವಿಡ್ ಸಾವುಗಳಲ್ಲ, ಅವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದುಂಟಾದ ಪ್ರಾಯೋಜಿತ ಕೊಲೆಗಳಾಗಿವೆ ಎಂದು ದೂರಿದರು.

ತಜ್ಞರ ಮುನ್ನೆಚ್ಚರಿಕೆಯಿಂದ ಸರ್ಕಾರಗಳು ಎಚ್ಚೆತ್ತು ವೆಂಟಿಲೇಟರ್, ಆಕ್ಸಿಜನ್, ವ್ಯಾಕ್ಸಿನ್‌ ತಯಾರಿಯಲ್ಲಿಟ್ಟುಕೊಂಡಿದ್ದರೆ ಜನ ಈ ರೀತಿ ಸಾಯುವ ಪರಿಸ್ಥಿತಿಯುಂಟಾಗುತ್ತಿರಲಿಲ್ಲ ಎಂದರು.

ಕೋವಿಡ್‌ ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಬದಲು ಈ ದೇಶದ ಪ್ರಧಾನಿ ಐದು ರಾಜ್ಯಗಳ ಚುನಾವಣೆಯಲ್ಲಿ ತೊಡಗಿದ್ದರು. ಇತ್ತ ರಾಜ್ಯ ಸರ್ಕಾರವೂ ಉಪಚುನಾವಣೆಗಳಲ್ಲಿ ಮುಳುಗಿರುವುದರಿಂದಾಗಿ ಈ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಂಡಿತು. ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಜನತೆ ವೋಟಿನ ರೂಪದಲ್ಲಿ ಕಂಡರೆ ಹೊರತು ಮನುಷ್ಯರ ರೂಪದಲ್ಲಿ ಕಾಣಲೇ ಇಲ್ಲ ಎಂದು ಆರೋಪಿಸಿದರು.

ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಲ್ಲೂ ಆಕ್ಸಿಜನ್, ವೆಂಟಿಲೇಟರ್, ಬೆಡ್, ವ್ಯಾಕ್ಸಿನ್‌ಗಳನ್ನು ಒದಗಿಸಬೇಕು. ಈ ರೋಗದಿಂದ ಗ್ರಾಮೀಣ ಪ್ರದೇಶದಲ್ಲಿ ಪ್ರತಿನಿತ್ಯ ಸಾವುಗಳು ಸಾಮಾನ್ಯವಾಗಿವೆ. ಹಾಗಾಗಿ ಈ ಗ್ರಾಮೀಣ ಜನರತ್ತಲೂ ಜಿಲ್ಲಾಡಳಿತ ಗಮನ ವಹಿಸಬೇಕು ಎಂದು ಆಗ್ರಹಿಸಿದರು.

ಲಾಕ್‌ಡೌನ್‌ನಿಂದಾಗಿ ಬೀದಿಗೆ ಬಿದ್ದ ಎಲ್ಲ ದುಡಿಯುವ ವರ್ಗದ ಜನತೆಗೆ ಆಂಧ್ರ ಮತ್ತು ಕೇರಳ ರಾಜ್ಯಗಳ ಮಾದರಿಯಂತೆ ಆರ್ಥಿಕ ಸಹಾಯ ಒದಗಿಸಬೇಕು ಹಾಗೂ ಕೋವಿಡ್ ಪೀಡಿತ ಎಲ್ಲ ಬಡ ಕುಟುಂಬಗಳಿಗೂ ಸೂಕ್ತ ಪರಿಹಾರವನ್ನು ಒದಗಿಸಿ ಅವರನ್ನು ಮೇಲೆತ್ತಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

ನರೇಗಾ ಯೋಜನೆಯಡಿ ಎಲ್ಲ ಗ್ರಾಮೀಣ ಜನರಿಗೂ ಉದ್ಯೋಗ ಕಲ್ಪಿಸಬೇಕು ಹಾಗು ಉದ್ಯೋಗದ ದಿನಗಳನ್ನು ಇನ್ನು ಮುಂದೆ 300 ದಿನಗಳಿಗೆ ವಿಸ್ತರಿಸಿ, ಕೂಲಿಯನ್ನೂ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಲಾಕ್ ಡೌನ್ ನಿಂದಾಗಿ ತೋಟಗಾರಿಕಾ ಮತ್ತು ತರಕಾರಿ ಬೆಳೆದ ರೈತರುಗಳು ಅಪಾರ ಆರ್ಥಿಕನಷ್ಟಕ್ಕೆ ಸಿಲುಕಿದ್ದು, ಈ ರೈತರಿಗೂ ಪರಿಹಾರ ಕಲ್ಪಿಸಬೇಕು ಎಂದು ಒತ್ತಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರೆಡ್ಡಿ, ಜಿಲ್ಲಾ ಸಮಿತಿಯ ಸದಸ್ಯರಾದ ಮಲ್ಲಿಕಾರ್ಜುನ, ಬಾಳು ಜೇವೂರ, ಸಿದ್ಧಲಿಂಗ ಬಾಗೇವಾಡಿ, ಭರತಕುಮಾರ, ಶರತ್, ಶ್ರೀಕಾಂತ, ಶಿವಬಾಳಮ್ಮ, ಸುನೀಲ, ಗೀತಾ, ಕಮಲಾ ತೇಲಿ ಕಾಶಿಬಾಯಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು