ಮಂಗಳವಾರ, ಮೇ 11, 2021
28 °C
ಮುಷ್ಕರ ಅಂತ್ಯ; ಕೆಲಸಕ್ಕೆ ಹಾಜರು; ಪ್ರಯಾಣಿಕರ ಕೊರತೆ

ಸಾರಿಗೆ ಸಿಬ್ಬಂದಿಗೆ ಕೋವಿಡ್‌ ವರದಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ 15 ದಿನಗಳ ಕಾಲ ಮುಷ್ಕರ ನಡೆಸಿದ ಸಾರಿಗೆ ನೌಕರರು ಹೈಕೋರ್ಟ್‌ ಸೂಚನೆ ಮೇರೆಗೆ ಗುರುವಾರದಿಂದ ಪೂರ್ಣ ಪ್ರಮಾಣದಲ್ಲಿ ಕೆಲಸಕ್ಕೆ ಹಾಜರಾದರು.

ಕೋವಿಡ್‌ ನೆಗೆಟಿವ್‌ ವರದಿ ಇದ್ದರೆ ಮಾತ್ರ ಕೆಲಸಕ್ಕೆ ಹಾಜರಾಗಲು ಸಾರಿಗೆ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ ಕಾರಣ ಬಹುತೇಕ ಚಾಲಕ, ನಿರ್ವಾಹಕರು ಆಸ್ಪತ್ರೆಗೆ ತೆರಳಿ ಕೋವಿಡ್‌ ಪರೀಕ್ಷೆಗೆ ಒಳಗಾದರು.

‘ಮುಷ್ಕರದ ಅವಧಿಯಲ್ಲಿ ಸಾರಿಗೆ ಸಿಬ್ಬಂದಿ ವಿವಿಧೆಡೆ ಅಡ್ಡಾಡಿ ಬಂದಿದ್ದಾರೆ. ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿ ಹರಡಿದೆ. ಹೀಗಾಗಿ ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬ ಸಾರಿಗೆ ನೌಕರರು ಕೋವಿಡ್‌ ನೆಗೆಟಿವ್‌ ವರದಿಯನ್ನು ಹಾಜರು ಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ’ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯ ಒಳಗೆ ವಿವಿಧ ತಾಲ್ಲೂಕು, ಗ್ರಾಮೀಣ ಪ್ರದೇಶಗಳಿಗೆ ಬುಧವಾರದಿಂದಲೇ ಬಸ್‌ಗಳು ಸಂಚಾರ ಆರಂಭಿಸಿವೆ. ಆದರೆ, ಅಂತರ್‌ ಜಿಲ್ಲಾ ಮತ್ತು ಅಂತರ್‌ ರಾಜ್ಯಗಳಿಗೆ ಪ್ರಯಾಣಿಕರನ್ನು ಆಧರಿಸಿ ಬಸ್‌ಗಳು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಯಾಗಿರುವುದರಿಂದ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ಹೀಗಾಗಿ ವಿಜಯಪುರದಿಂದ ಕಲಬುರ್ಗಿ, ಹೊಸಪೇಟೆ, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಉಡುಪಿ, ಮಂಗಳೂರು, ಗೋವಾ, ಮಹಾರಾಷ್ಟ್ರಗಳಿಗೆ ಪ್ರಯಾಣಿಕರನ್ನು ಆಧರಿಸಿ ಬಸ್‌ಗಳನ್ನು ಓಡಿಸಲಾಗುತ್ತಿದೆ ಎಂದರು.

ಬಸ್‌ಗಳಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಪಾಲಿಸಲಾಗುತ್ತಿದೆ. ಎರಡು ಸೀಟ್‌ನಲ್ಲಿ ಒಬ್ಬರಿಗೆ ಹಾಗೂ ಮೂರು ಸೀಟ್‌ನಲ್ಲಿ ಇಬ್ಬರಿಗೆ ಕೂರಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

₹10.50 ಕೋಟಿ ನಷ್ಠ:

ಸಾರಿಗೆ ನೌಕರರ ಮುಷ್ಕರದಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ₹10.50 ಕೋಟಿ ಆದಾಯ ನಷ್ಠವಾಗಿದೆ. ಕೇವಲ ₹2.18 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು