ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಕೋವಿಡ್‌ ಇಳಿಮುಖ; ಈವರೆಗೆ 200 ಜನ ಸಾವು

ಕೋವಿಡ್‌ ಎರಡನೇ ಅಲೆ ಅಪ್ಪಳಿಸುವ ಆತಂಕ; ತಡೆಗೆ ಜಿಲ್ಲಾಡಳಿತ ಕ್ರಮ
Last Updated 27 ನವೆಂಬರ್ 2020, 15:03 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ 200 ಜನರ ಸಾವಿಗೆ ಕಾರಣವಾಗುವ ಮೂಲಕ ತೀವ್ರ ಕಳೆದ ಏಳೆಂಟು ತಿಂಗಳಿಂದ ತೀವ್ರ ಆತಂಕ ಸೃಷ್ಟಿಸಿದ್ದ ಕೊರೊನಾ ವೈರಾಣು ಹರಡುವಿಕೆ ದಿನದಿಂದ ದಿನಕ್ಕೆ ಇಳಿಮುಖವಾಗತೊಡಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಜೊತೆಗೆ, ಕೋವಿಡ್‌ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಆರೋಗ್ಯ ಇಲಾಖೆಯು ಇದುವರೆಗೆ ಜಿಲ್ಲೆಯ 1,81,218 ಜನರ ಗಂಟಲುದ್ರವ ಸಂಗ್ರಹ ಮಾಡಿದ್ದು, ಅದರಲ್ಲಿ 1,64,336 ಜನರ ವರದಿ ನೆಗೆಟಿವ್ ಹಾಗೂ 13,702 ಜನರಿಗೆ ಕೋವಿಡ್‌ ಪಾಸಿಟಿವ್ ಎಂಬುದು ದೃಢವಾಗಿದೆ.

ವಿಜಯಪುರ ತಾಲ್ಲೂಕಿನ ಅತಿ ಹೆಚ್ಚು ಅಂದರೆ, 5,310 ಜನರಲ್ಲಿ ಕೋವಿಡ್‌ ಪಾಸಿಟಿವ್‌ ವರದಿಯಾಗಿದೆ. ದೇವರ ಹಿಪ್ಪರಗಿ ತಾಲ್ಲೂಕಿನಲ್ಲಿ ಅತೀ ಕಡಿಮೆ ಅಂದರೆ, ಕೇವಲ 132ಜನರಲ್ಲಿ ಇದುವರೆಗೆ ಕೋವಿಡ್‌ ದೃಡಪಟ್ಟಿದೆ.

ಎರಡನೇ ಅಲೆ ಭೀತಿ:

ದಿನದಿಂದ ದಿನಕ್ಕೆ ಕೋವಿಡ್‌ ಹರಡುವಿಕೆ ಇಳಿಮುಖವಾಗುತ್ತಿರುವ ಸಂತಸದ ಕ್ಷಣದ ನಡುವೆಯೇ ಚಳಿಗಾಲ ಆರಂಭವಾಗಿರುವುದರಿಂದ ಕೋವಿಡ್‌ ಎರಡನೇ ಅಲೆ ಜಿಲ್ಲೆಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಕಡಿಮೆಯಾಗುತ್ತಿರುವುದು ನಿಜ. ಆದರೆ, ಈಗಾಗಲೇ ಗುಜರಾತ್‌, ನವದೆಹಲಿ, ಮಧ್ಯಪ್ರದೇಶದಲ್ಲಿ ಎರಡನೇ ಅಲೆ ಕಾಣಿಸಿಕೊಂಡಿದೆ. ಹೀಗಾಗಿ ನಮ್ಮಲ್ಲೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ತಡೆಗೆ ಕ್ರಮ:

ಎರಡನೇ ಅಲೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲು ಹೆಚ್ಚು ಆದ್ಯತೆ ನೀಡಲಾಗುವುದು. ದಂಡ ವಿಧಿಸಲು ಪೊಲೀಸ್‌, ಆರೋಗ್ಯ ಇಲಾಖೆ, ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

ಸಾರ್ವಜನಿಕರೂ ಅಷ್ಟೇ ಯಾವುದೇ ಕಾರಣಕ್ಕೂ ಮೈಮರೆಯಬಾರದು. ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು, ಹ್ಯಾಂಡ್‌ ಸ್ಯಾನಿಟೈಸ್‌ ಬಳಸಬೇಕು, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಹೆಚ್ಚು ಜನ ಒಂದು ಕಡೆ ಗುಂಪುಗೂಡುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

ಲಸಿಕೆ: 12,618 ಜನರಿಗೆ ಪ್ರಥಮ ಆದ್ಯತೆ

ವಿಜಯಪುರ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಕೋವಿಡ್‌ ಲಸಿಕೆ ಪಡೆಯಲುಸರ್ಕಾರಿ, ಖಾಸಗಿ ಆರೋಗ್ಯ ಇಲಾಖೆಯ ಸೇವೆಯಲ್ಲಿರುವ ಒಟ್ಟು 12,618 ಜನರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

1,250 ವೈದ್ಯರು, 1776 ನರ್ಸ್‌, ಸೂಪರ್‌ವೈಸರ್, 470 ಕ್ಲರಿಕಲ್‌ ಸ್ಟಾಪ್‌, ಆಡಳಿತ ಸಿಬ್ಬಂದಿ, 861 ಪ್ಯಾರಾ ಮೆಡಿಕಲ್‌ ಸ್ಟಾಪ್‌, 1673 ಸಪೋರ್ಟ್‌ ಸ್ಟಾಪ್‌, 3976 ವಿದ್ಯಾರ್ಥಿಗಳು, 1887 ಗ್ರಾಮೀಣ ಕಾರ್ಯಕರ್ತರು, 755 ಫೀಲ್ಡ್‌ ಲೆವೆಲ್‌ ಹೆಲ್ತ್‌ ವರ್ಕರ್ ಸೇರಿದ್ದಾರೆ ಎಂದರು.

ಲಸಿಕೆ ಸಂಗ್ರಹಕ್ಕೆ ಸಜ್ಜು

ವಿಜಯಪುರ: ಕೋವಿಡ್-19 ಲಸಿಕೆ ಸಂಗ್ರಹ ಕುರಿತಂತೆ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆಯಲ್ಲಿ ಇರುವ ಶೀತಲೀಕಣ ಕೇಂದ್ರಗಳ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಪಶು ಸಂಗೋಪನಾ ಇಲಾಖೆಯಲ್ಲಿ ಒಟ್ಟು 100 ಐಸ್ ಲೈನ್ಡ್ ರೆಫ್ರೀಜರೇಟರ್ (ಐಎಲ್‍ಆರ್ 60 ಲೀಟರ್‌), 83 ಡೀಪ್ ಫ್ರೀಜರ್, 1180 ವ್ಯಾಕ್ಸಿನ್ ಕ್ಯಾರಿಯರ್, 36 ಕೋಲ್ಡ್ ಬಾಕ್ಸ್ (ಸಣ್ಣ), 72 ದೊಡ್ಡ ಕೋಲ್ಡ್ ಬಾಕ್ಸ್, 9136 ಐಸ್ ಪ್ಯಾಕ್‍ಗಳು ಮತ್ತು 3 ವಾಕ್ ಇನ್ ಕೂಲರ್ ಇರುವುದಾಗಿ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆರಂಭದಲ್ಲಿ ಚೀನಾದಲ್ಲಿ ಕೋವಿಡ್‌ ಕಾಣಿಸಿಕೊಂಡಾಗ ನಮ್ಮಲ್ಲಿಗೆ ಬರಲ್ಲ ಎಂದು ಭಾವಿಸಿದ್ದೆವು. ಆದರೆ, ನಮ್ಮ ಮನೆ ಬಾಗಿಲಿಗೆ ಬಂದಿತು. ಈಗಲೂ ಸಹ ಎರಡನೇ ಅಲೆ ಬಗ್ಗೆ ಎಚ್ಚರ ವಹಿಸಬೇಕು
ಪಿ.ಸುನೀಲ್‌ ಕುಮಾರ್‌
ಜಿಲ್ಲಾಧಿಕಾರಿ, ವಿಜಯಪುರ

****

ತಾಲ್ಲೂಕು: ಪಾಸಿಟಿವ್‌ ಪ್ರಕರಣ

ವಿಜಯಪುರ;5310

ಬಬಲೇಶ್ವರ;189

ತಾಳಿಕೋಟೆ;207

ಬಸವನ ಬಾಗೇವಾಡಿ;1,387

ಕೊಲ್ಹಾರ;463

ನಿಡಗುಂದಿ;217

ಇಂಡಿ;1263

ಚಡಚಣ;161

ಮುದ್ದೇಬಿಹಾಳ;1,917

ತಾಳಿಕೋಟೆ;560

ಸಿಂದಗಿ;1,478

ದೇವರ ಹಿಪ್ಪರಗಿ;132

ಇತರೆ;418

ಒಟ್ಟು;13,702

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT