ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

32 ಎಕರೆಯಲ್ಲಿ 14 ಕ್ವಿಂಟಲ್ ಇಳುವರಿ

ಗುತ್ತಿಗೆ ಕೃಷಿ ಮಾಡಿ ಕೈಸುಟ್ಟುಕೊಂಡ ರೈತ ಕುಟುಂಬ; ನೆರವಿಗೆ ಬರುವಂತೆ ಸರ್ಕಾರಕ್ಕೆ ಆಗ್ರಹ
Last Updated 13 ಜನವರಿ 2021, 2:29 IST
ಅಕ್ಷರ ಗಾತ್ರ

ವಾಡಿ: ಮುಂಗಾರು ಬೆಳೆಯ ವೈಫಲ್ಯದಿಂದ ಬರೀ ರೈತರಷ್ಟೇ ಅಲ್ಲದೇ ಗೇಣಿ ರೈತರಿಗೂ ಸಂಕಷ್ಟ ತಂದೊಡ್ಡಿದೆ.

ಬೇರೋಬ್ಬರ ಜಮೀನನ್ನು ಬಾಡಿಗೆ ಪಡೆದು ಬೇಸಾಯ ಮಾಡುವ ಲೀಜ್ ರೈತರಿಗೆ ಮುಂಗಾರು ಬೆಳೆಗಳ ವೈಫಲ್ಯ ಇನ್ನಿಲ್ಲದಷ್ಟು ಸಂಕಷ್ಟ ತಂದೊಡ್ಡಿದೆ. ಸ್ವಂತ ಜಮೀನು ಇಲ್ಲದಿದ್ದರೂ ಬಾಡಿಗೆ ಆಧಾರದಲ್ಲಿ ಜಮೀನು ಪಡೆದು ಬೆವರು ಹರಿಸಿ ಬದುಕು ಕಟ್ಟಿಕೊಳ್ಳುವ ಲೀಸ್ ರೈತರ ಆಸೆಗೆ ತಣ್ಣೀರು ಬಿದ್ದಿದೆ. ಜಮೀನಿಗೆ ಸುರಿದ ಹಣ, ಶ್ರಮ ಎಲ್ಲವೂ ವ್ಯರ್ಥವಾಗಿ ಸಾಲ ಹೆಗಲೇರಿದೆ ಎಂದು ರೈತರು ಹಲಬುತ್ತಿದ್ದಾರೆ.

ಬದುಕು ಭದ್ರಪಡಿಸಿಕೊಳ್ಳಲು ಲೀಜ್ ಕೃಷಿ ಮೊರೆ ಹೋದ ಹಲಕರ್ಟಿ ಗ್ರಾಮದ ರೈತ ರಹಿಮಾನ್ ಅಜಿಮೋದ್ದಿನ್ ಹಳ್ಳಿ ಕುಟುಂಬ ಈಗ ಸಾಲದ ಸುಳಿಗೆ ಸಿಲುಕಿ ಪರದಾಡುತ್ತಿದೆ. ಒಟ್ಟು 32 ಎಕರೆ ಜಮೀನಿನಲ್ಲಿ ಕೇವಲ 14 ಕ್ವಿಂಟಲ್ ಮಾತ್ರ ಇಳುವರಿ ಬಂದಿದೆ.

ತಮ್ಮ ಪಾಲಿನ 6 ಎಕರೆ ಜಮೀನಿನ ಜೊತೆಗೆ ಉಳಿದ ಇಬ್ಬರು ರೈತರಿಂದ 10 ಎಕರೆ ಹಾಗೂ 16 ಎಕರೆ ಜಮೀನು ವಾರ್ಷಿಕ ಬಾಡಿಗೆ ರೂಪದಲ್ಲಿ ಭೋಗ್ಯಕ್ಕೆ ಪಡೆದು ತೊಗರಿ ಬಿತ್ತಿದ್ದರು. 10 ಎಕರೆಗೆ ₹1.40 ಲಕ್ಷ ಹಾಗೂ 16 ಎಕರೆಗೆ ₹1.30 ಲಕ್ಷ ವಾರ್ಷಿಕ ಬಾಡಿಗೆ ನೀಡಿ ಉಳುಮೆಗೆ ಮುಂದಾಗಿದ್ದರು.

ಜಮೀನಿನ ಹದ, ಬಿತ್ತನೆ ಬೀಜ, ಬಿತ್ತನೆ ಕೂಲಿ, ರಸಗೊಬ್ಬರ, ಟ್ರ್ಯಾಕ್ಟರ್ ಕೂಲಿ, ಕೀಟನಾಶಕ ಸಿಂಪಡಣೆಗಾಗಿ ಲಕ್ಷಾಂತರ ರೂಪಾಯಿ ಸುರಿದಿದ್ದಾರೆ. ಇದರ ಮಧ್ಯೆ ಉತ್ತಮವಾಗಿ ನಾಟಿಕೊಳ್ಳದ ಹತ್ತಿ ಬೆಳೆ ಹರಗಿದ್ದಾರೆ. ಉತ್ತಮ ಇಳುವರಿಯ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆಗಳಿಗೆ ನಿರಂತರವಾಗಿ ಹಣ ಸುರಿದಿದ್ದಾರೆ. ಆದರೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಹೊಡೆತಕ್ಕೆ ಸಿಲುಕಿ ತೊಗರಿ ಇಳುವರಿಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ.

‘ಪ್ರತಿ ಎಕರೆಗೆ ಕನಿಷ್ಠ 20 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿದ್ದೇನೆ. ಜೊತೆಗೆ ಕುಟುಂಬದ 4 ಜನ ಸದಸ್ಯರು ವರ್ಷ ಪೂರ್ತಿ ದುಡಿದಿದ್ದೇವೆ. ತಕ್ಕಮಟ್ಟಿಗೆ ಇಳುವರಿ ಬಂದಿದ್ದರೆ ತೃಪ್ತಿ ಪಟ್ಟುಕೊಳ್ಳುತ್ತಿದ್ದೇವು. ಆದರೆ ಎಲ್ಲವೂ ನಷ್ಟ ಆಗಿದೆ. ಸಾಲ ಮಾಡಿ ಭೂಮಿಗೆ ಸುರಿದ ಹಣ ವ್ಯರ್ಥವಾಗಿದೆ. ಸರ್ಕಾರವೇ ನಮ್ಮ ಕೈಹಿಡಿಯಬೇಕು’ ಎಂದು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ನಾಲವಾರ ವಲಯದ ಬಹುತೇಕ ಸಣ್ಣ ಮತ್ತು ಅತಿಸಣ್ಣ ರೈತರು ಹಾಗೂ ಭೂಹೀನ ಕೃಷಿ ಕಾರ್ಮಿಕರು ಉತ್ತಮ ಬೆಳೆಯ ನಿರೀಕ್ಷೆಯೊಂದಿಗೆ ದುಬಾರಿ ಹಣ ನೀಡಿ ಜಮೀನುಗಳನ್ನು ಲೀಸ್ ಪಡೆದು ಉಳುಮೆ ಮಾಡಿ ಕೈಸುಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT