ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ವಸ್ತು ಖರೀದಿ ಸಮಯ; ನಿಷ್ಪ್ರಯೋಜಕವಾಗುತ್ತಿದೆಯೇ ಕರ್ಫ್ಯೂ

ಅಪತ್ಕಾಲವಾದ ಬೆಳಿಗ್ಗೆ 6 ರಿಂದ 10?
Last Updated 30 ಏಪ್ರಿಲ್ 2021, 15:04 IST
ಅಕ್ಷರ ಗಾತ್ರ

ವಿಜಯಪುರ: ಕೊರೊನಾ ವೈರಸ್‌ ಹರಡುವಿಕೆಯ ಸರಪಳಿಯನ್ನು ತುಂಡರಿಸಲು ರಾಜ್ಯ ಸರ್ಕಾರ ಲಾಕ್‌ಡೌನ್ ಕರ್ಫ್ಯೂ ಜಾರಿಗೆ ತಂದಿದ್ದರೂ ಸಹ ಬೆಳಿಗ್ಗೆ 6ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ನೀಡಿರುವ ವಿನಾಯ್ತಿ ಸಮಯವೇ ಕೋವಿಡ್‌ ಹರಡುವ ಆಪತ್ಕಾಲವಾಗಿ ಪರಿಣಮಿಸಿದೆ.

ನಗರ, ಪಟ್ಟಣ ಮತ್ತು ಹಳ್ಳಿಗಳಲ್ಲಿ ಜನರು ಕೋವಿಡ್‌ ಬಗ್ಗೆ ಕೊಂಚವೂ ಆತಂಕವಿಲ್ಲದಂತೆ ಈ ಅವಧಿಯಲ್ಲಿ ಅಂಗಡಿ, ಮಳಿಗೆ, ಸಂತೆಯಲ್ಲಿ ನೆರೆಯುತ್ತಿದ್ದಾರೆ. ಸ್ವಲ್ಪವೂ ಅಂತರ ಕಾಪಾಡುತ್ತಿಲ್ಲ. ಕೆಲವರು ಮಾಸ್ಕ್‌ ತೊಟ್ಟಿದ್ದರೂ ಅದು ಮೂಗು, ಬಾಯಿಗೆ ರಕ್ಷಣೆ ನೀಡುವ ಬದಲು ಕೊರಳಲ್ಲಿ ನೇತಾಡುತ್ತಿರುತ್ತದೆ.

ಬೃಹತ್‌ ಕಂಪನಿಗಳ ಮಳಿಗೆಗಳ ಒಳಗೆ ಕೋವಿಡ್‌ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಲಾಗುತ್ತಿದೆ. ಒಮ್ಮೆಗೆ ನೂರಾರು ಜನರಿಗೆ ಮಳಿಗೆ ಒಳಗೆ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಂಗಡಿ, ಮಳಿಗೆಗಳ ಎದುರು ಕಾಟಾಚಾರಕ್ಕೆ ಎಂಬಂತೆ ಅಂತರ ಕಾಯ್ದುಕೊಳ್ಳುವ ವೃತ್ತ ಹಾಕಿದ್ದರೂ ಗ್ರಾಹಕರು ಒಂದಿನಿತು ಅಂತರ ಕಾಪಾಡದೇ ನೆರೆಯುತ್ತಿದ್ದಾರೆ.

ಮದುವೆಗಳಿಗೆ 50 ಜನರಿಗೆ ಮಾತ್ರ ಅವಕಾಶ ನೀಡಿದ್ದರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳು ಭಾಗವಹಿಸುತ್ತಿದ್ದಾರೆ. ಅಧಿಕಾರಿಗಳು ಭೇಟಿ ನೀಡುವ ಕಾಲದಲ್ಲಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಬೆರೆಳೆಣಿಕೆ ಕುರ್ಚಿ, ಜನರು ಇರುವಂತೆ ಎಚ್ಚರ ವಹಿಸಿ, ಅವರು ತೆರಳಿದ ಬಳಿಕ ಹೆಚ್ಚಿನ ಜನರು ಸೇರಿ ಸಂಭ್ರಮಿಸುತ್ತಿದ್ದಾರೆ.

ಬೈಕು, ಕಾರಲ್ಲಿ ಸಂಚರಿಸುವವರು ತಿಂದ ಗುಟ್ಕಾವನ್ನು ಹಿಂದೆ, ಮುಂದೆ ನೋಡದೇ ಎಲ್ಲೆಂದರಲ್ಲಿ ಉಗಿಯುತ್ತಾರೆ. ಇದು ಗಾಳಿಯಲ್ಲಿ ತೇಲಿ ಇನ್ನೊಬ್ಬರ ಮೇಲೆ ಬಿದ್ದು, ಕಾಯಿಲೆ ಅಂಟಿಸಿಕೊಳ್ಳುವ ಪರಿಸ್ಥಿತಿ ಇದೆ.

ವಾರಾಂತ್ಯ ಕರ್ಫ್ಯೂ ಸೇರಿದಂತೆ ಒಂದು ವಾರದಿಂದ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಸಹ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ತಗ್ಗುವ ಬದಲು ಏರಿಕೆಯಾಗುತ್ತಿರುವುದಕ್ಕೆ ಈ 6ರಿಂದ 10ರ ಅವಧಿಯೂ ಒಂದು ಕಾರಣ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇನ್ನಷ್ಟು ಬಿಗಿ ಕ್ರಮಕೈಗೊಳ್ಳದೇ ಹೋದರೆ 6ರಿಂದ 10ರ ಸಮಯ ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಲಿದೆ.

485 ಪ್ರಕರಣ: ಮೂರು ಸಾವು

ಜಿಲ್ಲೆಯಲ್ಲಿ ಶುಕ್ರವಾರ 485 ಕೋವಿಡ್‌ ಪ್ರಕರಣಗಳು ವರದಿಯಾಗಿದೆ. ಮೂರು ಜನ ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ವಿಜಯಪುರ ನಗರವೊಂದರಲ್ಲೇ 192 ಜನರಿಗೆ ಸೋಂಕು ತಗುಲಿದೆ. ವಿಜಯಪುರ ಗ್ರಾಮೀಣ 39, ಬಬಲೇಶ್ವರ 4, ತಿಕೋಟಾ 4, ಬಸವನ ಬಾಗೇವಾಡಿ 54, ಕೊಲ್ಹಾರ 1, ನಿಡಗುಂದಿ 3, ಇಂಡಿ 45, ಚಡಚಣ 6, ಮುದ್ದೇಬಿಹಾಳ 66, ತಾಳಿಕೋಟೆ 7, ಸಿಂದಗಿ 60 ಮತ್ತು ಇತರೆ ಜಿಲ್ಲೆಯ 4 ಜನರಿಗೆ ಕೋವಿಡ್‌ ಸೋಂಕು ದೃಢವಾಗಿದೆ.

ಬೆಳಿಗ್ಗೆ 10 ಬಳಿಕ ಬಸ್‌, ಆಟೊ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಇಡೀ ನಗರ ಜನ, ವಾಹನ ಇಲ್ಲದೇ ಬಿಕೋ ಎನ್ನುತ್ತಿತ್ತು. ಔಷಧ ಅಂಗಡಿ, ಪೆಟ್ರೋಲ್‌ ಬಂಕ್‌ಗಳು ಮಾತ್ರ ಬಾಗಿಲು ತೆರೆದಿದ್ದವು. ಉಳಿದಂತೆ ಎಲ್ಲ ಅಂಗಡಿ, ಮಳಿಗೆಗಳು ಬಂದ್‌ ಆಗಿದ್ದವು.

ನಗರದ ಪ್ರಮುಖ ವೃತ್ತ, ಬಡಾವಣೆಗಳನ್ನು ಸಂಪರ್ಕಿಸುವ ರಸ್ತೆಗಳಿಗೆ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ, ಜನ, ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ.

300 ವಾಹನ ಸೀಜ್‌:

ಕೋವಿಡ್‌ ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಜಿಲ್ಲೆಯಲ್ಲಿ ಶುಕ್ರವಾರ 300 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ಮಾಸ್ಕ್‌ ಧರಿಸಿದ 353 ಜನರಿಗೆ ₹ 48,050 ದಂಡ ವಿಧಿಸಲಾಗಿದೆ ಹಾಗೂ ಕೋವಿಡ್‌ ಮಾರ್ಗಸೂಚಿ ಪಾಲಿಸದವರ ವಿರುದ್ಧ ನಾಲ್ಕು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರೆಮ್‌ಡಿಸಿವಿರ್‌: ಮಾರಾಟಕ್ಕೆ ಯತ್ನಿಸಿದ ಐವರ ಬಂಧನ

ವಿಜಯಪುರ: ರೆಮ್‌ಡಿಸಿವಿರ್‌ ಇಂಜೆಕ್ಷನ್‌ ಅನ್ನು ಅಕ್ರಮವಾಗಿ ದುಪಟ್ಟು ಹಣಕ್ಕೆ ಮಾರಾಟ ಮಾಡಲು ಕೊಂಡೊಯ್ಯತ್ತಿದ್ದ ಐವರನ್ನು ಪೊಲೀಸರು ಗುರುವಾರ ರಾತ್ರಿ ನಗರದ ಮನಗೂಳಿ ಅಗಸಿ ಕ್ರಾಸ್ ಬಳಿ ಬಂಧಿಸಿದ್ದಾರೆ.

ವಿಜಯಪುರ ನಗರದ ಆನಂದ ಸೋಹನ್‌ ಲಾಲ್ ರುಣವಾಲ್, ಆದಿತ್ಯ ಅಣ್ಣಾರಾವ್ ಜೋಶಿ, ವಿಜಯ ಪ್ರಭಾಕರ್ ದೇಶಪಾಂಡೆ, ಶೃತಿ ಮಹೇಶ ಹಡಪದ, ಮಹ್ಮದ ಅಬ್ದುಲ್ ಆಲಂ ಮುಲ್ಲಾ ಬಂಧಿತ ಆರೋಪಿಗಳು.

ಬಂಧಿತರಿಂದ ₹ 3490 ಮೌಲ್ಯದ ಎರಡು ರೆಮ್‌ಡಿಸಿವಿರ್ ಇಂಜೆಕ್ಷನ್‌ ಬಾಟಲ್ ಹಾಗೂ ನಾಲ್ಕು ಮೊಬೈಲ್‌ ಫೋನ್‌ಗಳು ಸೇರಿದಂತೆ ₹22,980 ಮೌಲ್ಯದ ವಸ್ತುಗಳು ಗೋಳಗುಮ್ಮಟ ಠಾಣೆ ಪೊಲೀಸರು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT