ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣಿನ ಸಸಿಯೊಂದಿಗೆ ಪುತ್ರಿ ಮದುವೆಗೆ ಆಹ್ವಾನ

ಪ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡರ ವಿಶಿಷ್ಟ ಪರಿಸರ ಪ್ರೇಮ
Last Updated 26 ನವೆಂಬರ್ 2022, 15:32 IST
ಅಕ್ಷರ ಗಾತ್ರ

ಕೊಲ್ಹಾರ: ರಾಜ್ಯದಲ್ಲೇ ಆಪರೂಪವೆನಿಸಿದ ಕಾಶ್ಮೀರಿ ಸೇಬು ಹಾಗೂ ಇತರೆ ಅಪರೂಪದ ಹಣ್ಣುಗಳನ್ನು ಬೆಳೆದು ಎಲ್ಲರ ಮೆಚ್ಚುಗೆ ಪಾತ್ರರಾಗಿರುವ ಪಟ್ಟಣದ ಪ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡ ಅವರು ತಮ್ಮ ಪುತ್ರಿ ಶಾಂತಾ ಅವರ ಮದುವೆಗಾಗಿ ತಮ್ಮ ಬಂಧುಬಳಗ ಹಾಗೂ ಆಪ್ತೇಷ್ಟರಿಗೆ ಆಮಂತ್ರಿಸಲು ಲಗ್ನಪತ್ರಿಕೆಯೊಂದಿಗೆ ಒಂದೊಂದು ಹಣ್ಣಿನ ಸಸಿಗಳನ್ನು ನೀಡುವ ಮೂಲಕ ತಮ್ಮ ಕುಟುಂಬದ ಕಾರ್ಯಕ್ರಮದಲ್ಲೂ ಪರಿಸರ ಪ್ರೇಮ ಮೆರೆದಿದ್ದಾರೆ.

ಶಾಸಕ ಎಂ.ಬಿ.ಪಾಟೀಲರ ಕನಸಿನ ಯೋಜನೆ ‘ಕೋಟಿ ವೃಕ್ಷ ಅಭಿಯಾನ’ದಿಂದ ಪ್ರೇರಣೆಗೊಂಡು ಜನರಲ್ಲಿ ಪರಿಸರ ಜಾಗೃತಿ ಜೊತೆಗೆ ಆರೋಗ್ಯಕರ ಹಣ್ಣಿನ ಬೆಳೆಗಳ ಕುರಿತು ಜನ ಜಾಗೃತಿ ಮೂಡಿಸುತ್ತಿದ್ದಾರೆ.

ಸಿದ್ದಪ್ಪ ಅವರು ತಮ್ಮ ಮನೆಗೂ ‘ಪರಿಸರ ಪರಿವಾರ’ ಎಂದು ಹೆಸರಿಟ್ಟು ತಮ್ಮ ಪುತ್ರಿ, ಪುತ್ರನಿಗೂ ಕೃಷಿ ಶಿಕ್ಷಣ ನೀಡಿದ್ದಾರೆ.

ಡಿಸೆಂಬರ್‌ 9 ರಂದು ಹಮ್ಮಿಕೊಂಡಿರುವ ತಮ್ಮ ಪುತ್ರಿಯ ಮದುವೆಗೆ ಬಂಧುಬಳಗ ಹಾಗೂ ಆಪ್ತೇಷ್ಟರನ್ನು ಆಹ್ವಾನಿಸಲು ಲಗ್ನಪತ್ರಿಕೆಯೊಂದಿಗೆ ಒಂದೊಂದು ಹಣ್ಣಿನ ಸಸಿಗಳನ್ನು ಸಹ ನೀಡುತ್ತಿದ್ದಾರೆ. ಇದಕ್ಕಾಗಿ ತಮ್ಮ ‘ಬಾಲಗೊಂಡ ಹೈಟೆಕ್ ನರ್ಸರಿ ಮತ್ತು ಫಾರ್ಮ್’ನಲ್ಲಿ ಒಂದು ಸಾವಿರ ವಿವಿಧ ಹಣ್ಣಿನ ಸಸಿಗಳನ್ನು ವಿಶೇಷವಾಗಿ ಬೆಳೆಸಿದ್ದಾರೆ.

ಈ ಹಿಂದೆ ತಮ್ಮ ಪುತ್ರಿಯ ಮದುವೆ ನಿಶ್ಚಿತಾರ್ಥದಲ್ಲೂ ಬಂದವರೆಲ್ಲರಿಗೂ ಹಣ್ಣಿನ ಸಸಿಗಳನ್ನೇ ನೀಡಿ ವಿಶಿಷ್ಟವಾಗಿ ಗೌರವಿಸಿ, ಸತ್ಕರಿಸಿದ್ದರು.

‘ರೈತರು ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡು ಆರೋಗ್ಯದ ಹಿತದೃಷ್ಟಿಯಿಂದ ಹಣ್ಣುಗಳ ಬೆಳೆಗೆ ಹೆಚ್ಚು ಒತ್ತು ನೀಡುವುದು ಸೂಕ್ತ. ಈ ನಿಟ್ಟಿನಲ್ಲಿ ಸಸಿಗಳ ವಿತರಣೆ ಮಾಡುತ್ತಿದ್ದೇನೆ. ಎಲ್ಲರೂ ತಮ್ಮ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸಸಿಗಳ ವಿತರಣೆ ಮಾಡುವುದರಿಂದ ಎಲ್ಲೆಡೆ ಪರಿಸರ ಕಾಳಜಿ ಜೊತೆಗೆ ಆರೋಗ್ಯದ ಜಾಗೃತಿಯೂ ಮೂಡುತ್ತದೆ’ ಎನ್ನುವುದು ಬಾಲಗೊಂಡ ಅವರಅಭಿಪ್ರಾಯ.

‘ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿರುವ ಸಿದ್ದಪ್ಪ ಅವರು ಮಗಳ ಮದುವೆ ಆಮಂತ್ರಣದೊಂದಿಗೆ ಹಣ್ಣಿನ ಸಸಿಗಳನ್ನು ನೀಡುತ್ತಿರುವುದು ಮಾದರಿ ಕಾರ್ಯ. ಈ ಹಿಂದೆ ಅವರ ತೋಟಕ್ಕೆ ಭೇಟಿ ನೀಡಿದ್ದೆ. ಬಾಲಗೊಂಡ ಅವರಂತೆ ಎಲ್ಲರೂ ತಮ್ಮ ಪ್ರತಿಯೊಂದು ಸಭೆ, ಸಮಾರಂಭಗಳಲ್ಲಿ ಸಸಿಗಳನ್ನು ವಿತರಿಸುವ ಕೆಲಸ ಮಾಡಿದರೆ ಪ್ರತಿಯೊಬ್ಬರಲ್ಲಿ ಪರಿಸರ ಜಾಗೃತಿ ಮೂಡುತ್ತದೆ’ ಎನ್ನುತ್ತಾರೆ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT