ವಿಜಯಪುರ: ನಗರದ ಸೌಂದರ್ಯವನ್ನು ಹೆಚ್ಚಿಸಬೇಕಾಗಿದ್ದ ಹಳೆಯ ಕಲ್ಲಿನ ಖಣಿಗಳು, ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದ ಮೃತ್ಯುಕೂಪಗಳಾಗಿ ಮಾರ್ಪಟ್ಟಿವೆ.
ನಗರದ ಪ್ರಮುಖ ಸ್ಥಳಗಳಲ್ಲಿರುವ ಪ್ರಪಾತದಂತಿರುವ ತೆರೆದ ಬೃಹತ್ ಕಲ್ಲಿನ ಖಣಿಗಳು ಸುತ್ತಲಿನ ಬಡಾವಣೆ ಜನರು ಜೀವ ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ನಗರದ ಗಾಂಧಿನಗರ ಬಡಾವಣೆ, ಆಶ್ರಮ ರಸ್ತೆಯಲ್ಲಿರುವ ಖಣಿ, ನಗರದ ರಿಂಗ್‌ರೋಡ್ ರಸ್ತೆಯಲ್ಲಿರುವ ಕಲ್ಲಿನ ಖಣಿ ಹಾಗೂ ಗ್ಯಾಂಗ್ ಬಾವಡಿ ಹತ್ತಿರವಿರುವ ಕಲ್ಲಿನ ಖಣಿಗಳು ಸದ್ಯ ಅಪಾಯ ಆಹ್ವಾನಿಸುವ ಕಂದಕಗಳಾಗಿವೆ.
ಸದಾ ಜನಜಂಗುಳಿ ಹೊಂದಿರುವ ಪ್ರದೇಶಗಳಲ್ಲಿ ಕಲ್ಲಿನ ಖಣಿಗಳಿದ್ದರೂ, ಅನೇಕ ದಶಕಗಳಿಂದ ಈ ಕಲ್ಲಿನ ಖಣಿಗಳ ಸುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ವಿಪರ್ಯಾಸ. ನಿತ್ಯ ಸಾವಿರಾರು ವಾಹನಗಳು ಖಣಿಗಳ ಪಕ್ಕದ ರಸ್ತೆಯಲ್ಲಿಯೇ ಸಂಚರಿಸುತ್ತವೆ. ಅನೇಕ ಕುಟುಂಬಗಳು ಖಣಿಯ ಸುತ್ತಮುತ್ತ ವಾಸಿಸುತ್ತಿದ್ದರೂ, ಅಧಿಕಾರಿಗಳು ಇತ್ತ ಕಣ್ಣು ಹಾಯಿಸುತ್ತಿಲ್ಲ.
ಎಕರೆಗಟ್ಟಲೆ ಭೂಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಕಲ್ಲಿನ ಖಣಿಗಳು, ಸುಮಾರು 40 ರಿಂದ 50 ಅಡಿ ಆಳ ಹೊಂದಿವೆ. ಈ ಹಿಂದೆ ಕಲ್ಲು ಗಣಿಗಾರಿಕೆ ಮಾಡಿ ಬಿಡಲಾಗಿದ್ದು, ನಂತರದಲ್ಲಿ ಅವುಗಳನ್ನು ಮುಚ್ಚುವ ಅಥವಾ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ಕೆಲಸವನ್ನು ದಶಕಗಳು ಕಳೆದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮಾಡಿಲ್ಲ. ದಶಕಗಳಿಂದ ಇಲ್ಲಿನ ಜನರು ಜೀವ ಭಯದಲ್ಲಿಯೇ ಓಡಾಡುತ್ತಿದ್ದಾರೆ.
ಖಣಿಗಳಲ್ಲಿ ಚರಂಡಿ ನೀರು, ಮಳೆ ನೀರು ತುಂಬಿಕೊಂಡಿದ್ದು, ಪಾಚಿ ಹಾಗೂ ಜಾಲಿ ಗಿಡಗಳಿಂದ ತುಂಬಿದೆ. ಜಾನುವಾರುಗಳು ಆಹಾರ ಅರಸಿ ಹೋಗಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಕಲ್ಲಿನ ಖಣಿಯ ಸುತ್ತ ಯಾವುದೇ ಸುರಕ್ಷತಾ ಕ್ರಮಗಳಿಲ್ಲದ ಕಾರಣ ಕೆಲ ತಿಂಗಳ ಹಿಂದೆ ಇಬ್ಬರು ವ್ಯಕ್ತಿಗಳು ಗಾಂಧಿನಗರದಲ್ಲಿ ಕಲ್ಲಿನ ಖಣಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ.
‘ಸಾರ್ವಜನಿಕರ ಹಿತದೃಷ್ಟಿಯಿಂದ ಕಲ್ಲಿನ ಖಣಿಗಳ ಸುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅನೇಕ ಸಂಘಟನೆಗಳು, ಸಂಘ–ಸಂಸ್ಥೆಗಳು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿಗಳನ್ನು ನೀಡಿದ್ದರೂ ಉಪಯೋಗವಾಗಲಿಲ್ಲ. ಕಲ್ಲಿನ ಖಣಿಯಲ್ಲಿ ಜಾನುವಾರು ಬಿದ್ದಿರುವ ಘಟನೆಗಳು ಸಂಭವಿಸಿದ್ದರೂ ಪಾಲಿಕೆ ಎಚ್ಚೆತ್ತುಕೊಂಡಿಲ್ಲ’ ಎನ್ನುತ್ತಾರೆ ಎಸ್‌ಯುಸಿಐ ಜಿಲ್ಲಾ ಘಟಕದ ಅಧ್ಯಕ್ಷ ಅತಾವುಲ್ಲಾ ದ್ರಾಕ್ಷಿ.
ಸುತ್ತ ತಡೆಗೋಡೆ ನಿರ್ಮಿಸಿ:
ನಗರದಲ್ಲಿರುವ ಕಲ್ಲಿನ ಖಣಿಗಳ ಸುತ್ತಲು ತಡೆಗೋಡೆ ಇಲ್ಲದೇ ಇರುವ ಕಾರಣ ಅನೇಕರು ಅನಧಿಕೃತವಾಗಿ ಖಣಿಗೆ ಹತ್ತಿಕೊಂಡು ಅಂಗಡಿ ಮುಂಗಟ್ಟುಗಳು, ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಸಾರ್ವಜನಿಕರಿಗೆ ತ್ಯಾಜ್ಯ ಎಸೆಯುವ ಬ್ಲ್ಯಾಕ್ ಪಾಯಿಂಟ್‌ಗಳಾಗಿ ಮಾರ್ಪಟ್ಟಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ.
ಇನ್ನೂ ನಗರದ ರಿಂಗ್‌ರೋಡ್ ಹಾಗೂ ಆಶ್ರಮ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿದ್ದು, ರಸ್ತೆಗಳು ಖಣಿಗಳಿಗೆ ಹತ್ತಿಕೊಂಡಿದೆ. ಖಣಿಯ ಹತ್ತಿರ ಮಣ್ಣು ಹಾಕಲಾಗಿದ್ದು, ಈವರೆಗೆ ಯಾವುದೇ ತಡೆಗೋಡೆ ನಿರ್ಮಿಸಿಲ್ಲ.
ರಸ್ತೆ ಅಭಿವೃದ್ಧಿ ಕಾಮಗಾರಿ ಕಲ್ಲಿನ ಖಣಿಯ ಪಕ್ಕದಲ್ಲಿ ನಡೆಯುತ್ತಿದ್ದರೂ ಮುಂಜಾಗ್ರತಾ ಕ್ರಮವಾಗಿ ಈವರೆಗೂ ಕಾಂಪೌಂಡ್ ನಿರ್ಮಿಸಿಲ್ಲ. ರಸ್ತೆ ಮೇಲೆ ಸಂಚರಿಸುವ ವಾಹನ ಸವಾರರ ಹಿತದೃಷ್ಟಿಯಿಂದ ಅಧಿಕಾರಿಗಳು ಕಲ್ಲಿನ ಖಣಿಗೆ ಮೊದಲು ಕಾಂಪೌಂಡ್ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಕಲ್ಲಿನ ಖಣಿಯ ಸುತ್ತ ಅನಧಿಕೃತವಾಗಿ ನಿರ್ಮಾಣವಾಗಿರುವ ಅಂಗಡಿ ಮುಂಗಟ್ಟುಗಳು, ಮನೆಗಳನ್ನು ತೆರೆವುಗೊಳಿಸಬೇಕು. ನಂತರ ಕಲ್ಲಿನ ಖಣಿಯ ಸುತ್ತಲೂ ತಡೆಗೋಡೆ ನಿರ್ಮಿಸಿ ಮುಂದಿನ ಅನಾಹುತಗಳನ್ನು ತಡೆಯಬೇಕು ಎನ್ನುತ್ತಾರೆ ನಗರ ನಿವಾಸಿಗಳು.
ಕಲ್ಲಿನ ಖಣಿಗಳ ಅವ್ಯವಸ್ಥೆ ಕುರಿತು ಪತ್ರಿಕ್ರಿಯೆಗಾಗಿ ಮಹಾನಗರ ಪಾಲಿಕೆ ಆಯುಕ್ತರಿಗೆ ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯಿಸಲಿಲ್ಲ.
ವಿಜಯಪುರ ನಗರದಲ್ಲಿರುವ ಹಳೆಯ ಕಲ್ಲಿನ ಖಣಿಗಳು ಹೆಚ್ಚು ಭೂಪ್ರದೇಶದಲ್ಲಿ ವಿಸ್ತರಿಸಿಕೊಂಡಿದ್ದು ಅವುಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಪ್ರವಾಸಿ ತಾಣಗಳನ್ನಾಗಿ ಮಾರ್ಪಡಿಸಬೇಕು.
–ಎಂ.ಬಿ ಶಶಿಧರ ನಗರ ನಿವಾಸಿ
ಕಲ್ಲಿನ ಖಣಿಯಲ್ಲಿ ತ್ಯಾಜ್ಯ ನೀರು ಸಂಗ್ರಹ ಪಾಚಿ ಹಾಗೂ ಜಾಲಿ ಗಿಡಗಳು ಬೆಳೆದಿದ್ದು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಪಾಲಿಕೆಯಿಂದ ಸ್ವಚ್ಛಗೊಳಿಸುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ವಹಿಸಬೇಕು.
–ಸುರೇಖಾ. ಕಲ್ಲಿನ ಖಣಿ ಹತ್ತಿರದ ಬಡಾವಣೆ ನಿವಾಸಿ
ನಗರದಲ್ಲಿರುವ ಕಲ್ಲಿನ ಖಣಿಗಳ ಸುತ್ತಲೂ ತಡೆಗೋಡೆ ನಿರ್ಮಿಸಬೇಕು. ಪಾಲಿಕೆ ಶೀಘ್ರ ಎಚ್ಚೆತ್ತುಕೊಂಡು ಮುಂದಾಗುವ ಅವಘಡಗಳನ್ನು ತಪ್ಪಿಸಬೇಕು.
–ಪ್ರವೀಣ ತಿಬೇಲಿ ನಿವಾಸಿ
ಅವಘಡಕ್ಕೂ ಮುನ್ನ ಎಚ್ಚೆತ್ತುಕೊಳ್ಳಲು ಒತ್ತಾಯ
ವಿಜಯಪುರ ಮಹಾನಗರ ಪಾಲಿಕೆ ಅಧಿಕಾರಿಗಳು ನಗರದಲ್ಲಿರುವ ಕಲ್ಲಿನ ಖಣಿಗಳ ಸುತ್ತಲೂ ಯಾವುದೇ ಅವಘಡ ಸಂಭವಿಸುವ ಮುನ್ನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಕಳೆದ ಕೆಲ ತಿಂಗಳ ಹಿಂದೆ ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದಾಗಿ ನಗರದ ಹೊರವಲಯದಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದರು. ಮಕ್ಕಳ ಸಾವಿಗೆ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಮಕ್ಕಳ ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದರು. ಜೀವಹಾನಿಗಾಗಿ ಕಾದಿರುವ ನಗರದ ಕಲ್ಲಿನ ಖಣಿಗಳ ಸುತ್ತಲೂ ಸುರಕ್ಷತಾ ಕ್ರಮವಾಗಿ ತಡೆಗೋಡೆ ನಿರ್ಮಿಸಬೇಕು ಆ ಮೂಲಕ ಮುಂಬರುವ ಅವಘಡಗಳನ್ನು ತಪ್ಪಿಸಬೇಕು. ಮಹಾನಗರ ಪಾಲಿಕೆ ಹೀಗೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಮುಂದಾಗುವ ಅನಾಹುತಗಳಿಗೆ ಪಾಲಿಕೆಯ ನಿರ್ಲಕ್ಷ್ಯವೇ ಕಾರಣವಾಗಲಿದೆ ಎನ್ನುತ್ತಾರೆ ಸ್ಥಳಿಯರು.
‘ಕಲ್ಲಿನ ಖಣಿಗಳು ಅಭಿವೃದ್ಧಿಯಾಗಲಿ’
ವಿಜಯಪುರ ನಗರದಲ್ಲಿರುವ ಕಲ್ಲಿನ ಖಣಿಗಳನ್ನು ಕಳೆದ ಅನೇಕ ವರ್ಷಗಳಿಂದ ನಿರ್ಲಕ್ಷಕ್ಕೆ ಒಳಗಾಗಿವೆ. ಈ ಕಲ್ಲಿನ ಖಣಿಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಅಭಿವೃದ್ಧಿ ಪಡಿಸಬೇಕಿದೆ. ಸದಾ ನೀರು ತುಂಬಿಕೊಂಡಿರುವ ಖಣಿಗಳಿಗೆ ಹೊಸತನ ನೀಡುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಬೇಕಿದೆ ಎನ್ನುತ್ತಾರೆ ಸಾರ್ವಜನಿಕರು. ನಗರದ ಆಶ್ರಮ ರಸ್ತೆಯಲ್ಲಿರುವ ಕಲ್ಲಿನ ಖಣಿಗಳಿಗೆ ಚಳಿಗಾಲದ ಸಮಯದಲ್ಲಿ ದೇಸಿ–ವಿದೇಶಿ ಹಕ್ಕಿಗಳು ಆಗಮಿಸುತ್ತವೆ. ಸದಾ ಬರಗಾಲದಿಂದ ತತ್ತರಿಸಿ ಪಕ್ಷಿ ಸಂಕುಲ ಗಣನೀಯವಾಗಿ ಕಡಿಮೆಯಾಗಿರುವ ವಿಜಯಪುರ ಜಿಲ್ಲೆಯಲ್ಲಿ ಪಕ್ಷಿಗಳು ಆಗಮಿಸುತ್ತಿರುವುದು ಪಕ್ಷಿಪ್ರೇಮಿಗಳಿಗೆ ಸಂತಸ ಮೂಡಿಸಿದೆ. ಈ ತಾಣ ಅಭಿವೃದ್ಧಿಗೊಂಡರೆ ಜೀವ ವೈವಿಧ್ಯ ಉಳಿಸಿದಂತಾಗುತ್ತದೆ. ರಾಜ್ಯದ ಪಕ್ಷಿಪ್ರೇಮಿಗಳು ಹಾಗೂ ಪ್ರವಾಸಿಗರನ್ನೂ ಆಕರ್ಷಿಸಿದಂತಾಗುತ್ತದೆ ಎನ್ನುತ್ತಾರೆ ಪಕ್ಷಿಪ್ರೇಮಿ ಡಾ.ರಮೇಶ ರಾಠೋಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.