ಗುರುವಾರ , ಜೂನ್ 24, 2021
28 °C
ವಿಳ್ಯಾದೆಲೆ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದ ಕೊರೊನಾ

ಬೇಡಿಕೆ ಕುಸಿತ; ಒಣಗಿ ಬೀಳುತ್ತಿರುವ ವಿಳ್ಯಾದೆಲೆ

ಬಸವರಾಜ್ ಎಸ್. ಉಳ್ಳಾಗಡ್ಡಿ Updated:

ಅಕ್ಷರ ಗಾತ್ರ : | |

Prajavani

ಕೊಲ್ಹಾರ: ವಿಳ್ಯಾದೆಲೆಗೆ ಕೊರೊನಾ ಪರಿಣಾಮ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತವಾಗಿ ಧಾರಣೆಯೂ ಇಲ್ಲದಂತಾಗಿದೆ.

ಎಲೆಬಳ್ಳಿ ಕೃಷಿಯನ್ನೇ ಅವಲಂಭಿಸಿರುವ ತಾಲ್ಲೂಕಿನ ನೂರಾರು ರೈತರು, ಕೃಷಿ ಕೂಲಿಕಾರ್ಮಿಕರು ಹಾಗೂ ವ್ಯಾಪಾರಿಗಳ ಬದುಕನ್ನು ಕೊರೊನಾ ಲಾಕಡೌನ್ ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

ಕೊಲ್ಹಾರ ತಾಲ್ಲೂಕಿನ ಕೂಡಗಿ, ತಳೇವಾಡ, ಕಲಗುರ್ಕಿ, ಮಸೂತಿ, ಮಲಘಾಣ, ಆಸಂಗಿ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಅಂದಾಜು 300 ಎಕರೆಯಷ್ಟು ಪ್ರದೇಶದಲ್ಲಿ ಎಳೆಬಳ್ಳಿ ಕೃಷಿ ಮಾಡಲಾಗಿದೆ.

ಎಲೆಬಳ್ಳಿ ವರ್ಷಪೂರ್ತಿ ಪ್ರತಿ 15-20 ದಿನಗಳಿಗೊಮ್ಮೆ ಕಟಾವಿಗೆ ಬರುವ ದೀರ್ಘಾವಧಿ ಬೆಳೆ. ಒಂದು ಎಕರೆಯಷ್ಟು ಎಲೆಬಳ್ಳಿ ಬೆಳೆದ ರೈತ ವರ್ಷಕ್ಕೆ ಸುಮಾರು 3 ಲಕ್ಷ ಆದಾಯ ಗಳಿಸುತ್ತಾನೆ. ಕೊರೊನಾದಿಂದಾಗಿ ಕಳೆದ ಹಲವು ತಿಂಗಳಿಂದ ಮಾರುಕಟ್ಟೆಯಲ್ಲಿ ಎಲೆಗಳ ಖರೀದಾರರಿಲ್ಲದೇ ಬೇಡಿಕೆ ಕುಸಿದಿದೆ.

ರೈತರು ಎಲೆಗಳ ಕೊಯ್ಲು ಮಾಡದೇ ಬಳ್ಳಿಯಲ್ಲೇ ಬಿಡುತ್ತಿದ್ದು, ಎಲೆಗಳು ಒಣಗಿ ಉದುರುತ್ತಿವೆ. ಎಲೆ ವ್ಯಾಪಾರಕ್ಕೆ ಮಾರುಕಟ್ಟೆ ಸಮಸ್ಯೆಯಾಗಿದೆ.

ಈ ಭಾಗದ ರೈತರು ತಾವು ಬೆಳೆದ ಎಲೆಗಳನ್ನು ರಾಜ್ಯದ ಬೆಳಗಾವಿ ಮತ್ತು ಮಹಾರಾಷ್ಟ್ರದ ಬೀಡ್, ಲಾತೂರು ಹಾಗೂ ಮಧ್ಯಪ್ರದೇಶದ ಮಾರುಕಟ್ಟೆಗಳಿಗೆ ಕಳುಹಿಸುತ್ತಾರೆ. ಕಳೆದ ವರ್ಷ ದೀರ್ಘಾವಧಿ ಲಾಕಡೌನ್ ನಿಂದಾಗಿ ಎಲೆ ವ್ಯಾಪಾರ ಕುಸಿತದಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದರು. ಆದರೆ, ಕೊರೊನಾ ಎರಡನೇ ವರ್ಷವೂ ಮುಂದುವರೆದಿದ್ದು, ವಿಳ್ಯಾದೆಲೆ ಬೆಳೆಗಾರರನ್ನು ಇನ್ನಷ್ಟು ಹೈರಾಣಾಗಿಸಿದೆ.

‘ಬೇಸಿಗೆಯಲ್ಲಿ ವಿಳ್ಯಾದೆಲೆಗೆ ಬೇಡಿಕೆ ಹೆಚ್ಚು. ಕಳೆದ ವರ್ಷ ಲಾಕ್‌ಡೌನ್‌ನಿಂದ ಖರೀದಿದಾರರು ಎಲೆ ಖರೀದಿಸಲು ಮುಂದೆ ಬರಲಿಲ್ಲ. ಹಾಗಾಗಿ ನಾಲ್ಕೈದು ತಿಂಗಳು ಎಲೆ ಕೊಯ್ಲು ಮಾಡದೇ ಲಕ್ಷಾಂತರ ನಷ್ಟ ಅನುಭವಿಸಿದ್ದೇವೆ. ಈ ವರ್ಷವೂ ಅದೇ ಪರಿಸ್ಥಿತಿ ಎದುರಿಸುವಂತಾಗಿದೆ. ಆದರೆ, ಸರ್ಕಾರ ಮಾತ್ರ ವಿಳ್ಯಾದೆಲೆ ರೈತರ ನೆರವಿಗೆ ಬರುತ್ತಿಲ್ಲ. ಹಾಗಾಗಿ ಎಲೆಬಳ್ಳಿ ಕೃಷಿಯನ್ನೇ ಕೈ ಬಿಡಬೇಕೆಂದು ನಿರ್ಧರಿಸಿದ್ದೇನೆ’ ಎಂದು ಕೂಡಗಿಯ ಎಲೆಬಳ್ಳಿ ಬೆಳಗಾರ ಚಂದ್ರಶೇಖರ ಜುಗತಿ ‘ಪ್ರಜಾವಾಣಿ’ ಬಳಿ ತಮ್ಮ ನೋವು ತೋಡಿಕೊಂಡರು.

‘ಇನ್ನೂ ಖರೀದಿಸಿರುವ ಎಲೆ ಬುಟ್ಟಿಗಳು ಅಂಗಡಿಯಲ್ಲೇ ಕೊಳೆಯುತ್ತಿವೆ. ಎಲೆ ಮಾರಾಟವಾಗದ ಕಾರಣ ಮಾರುಕಟ್ಟೆಯಲ್ಲಿ ಖರೀದಿದಾರರು ಎಲೆಗಳನ್ನು ಖರೀದಿಸುತ್ತಿಲ್ಲ. ಇದರಿಂದ ಎಲೆ ವ್ಯಾಪಾರ ಇಳಿಮುಖವಾಗಿದ್ದು, ರೈತರಿಂದ ಎಲೆಗಳನ್ನು ಖರೀದಿಸಲಾಗುತ್ತಿಲ್ಲ’ ಎಂದು ಎಲೆ ವ್ಯಾಪಾರಿ ನೂರ್ ಖಾನ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು