ಶನಿವಾರ, ಅಕ್ಟೋಬರ್ 23, 2021
22 °C

ಬಬಲೇಶ್ವರ ತಾಲ್ಲೂಕು ರೈತರ ನಿಯೋಗದಿಂದ ಕಂದಾಯ ಸಚಿವರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯವನ್ನು 524.256ಮೀ ಎತ್ತರಿಸಿದ ಬಳಿಕ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ಬಬಲೇಶ್ವರ ತಾಲ್ಲೂಕಿನ ಜಮೀನಿನ ಮಾರ್ಗಸೂಚಿ ಬೆಲೆಯನ್ನು ಪರಿಷ್ಕರಣೆ ಮಾಡಬೇಕು ಎಂದು ತಾಲ್ಲೂಕಿನ ರೈತರ ನಿಯೋಗ ಸೋಮವಾರ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ ಅವರಿಗೆ ಮನವಿ ಸಲ್ಲಿಸಿದರು.

ಆಲಮಟ್ಟಿ ಆಣೆಕಟ್ಟು 524.256ಮೀ ಎತ್ತರಿಸಿ ನೀರು ನಿಲ್ಲಿಸಿದಾಗ ಅಂದಾಜು 75 ಸಾವಿರ ಎಕರೆ ಪ್ರದೇಶದಷ್ಟು ಜಮೀನು ಮುಳುಗಡೆಯಾಗಲಿದ್ದು, ಬಬಲೇಶ್ವರ ತಾಲ್ಲೂಕಿನ 14 ಗ್ರಾಮಗಳು ಮುಳುಗಡೆಯಾಗಲಿವೆ. ಈ ಹಿಂದೆ 2015-16ರಲ್ಲಿ ಮಾರ್ಗಸೂಚಿ ಬೆಲೆಯನ್ನು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಗ್ರಾಮಗಳಿಗೆ ನಿಗದಿಪಡಿಸಿರುತ್ತಾರೆ. ಆದರೆ, ಜಮಖಂಡಿ ಮತ್ತು ಬೀಳಗಿ ತಾಲ್ಲೂಕಿನ ಮಾರ್ಗಸೂಚಿ ಪರಿಷ್ಕರಣೆ ಮಾಡಿರುತ್ತಾರೆ. ಅದರಂತೆ ಬಬಲೇಶ್ವರ ತಾಲ್ಲೂಕಿನ 14 ಗ್ರಾಮಗಳ ಜಮೀನುಗಳಿಗೂ ಏರರೂಪ ದರ ನಿಗದಿ ಮಾಡುವಂತೆ ಕಂದಾಯ ಸಚಿವರಿಗೆ ಒತ್ತಾಯಿಸಿದರು.

ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಅವರು, ಮಾರ್ಗಸೂಚಿಯ ಬೆಲೆ ಮತ್ತು ಮುಳುಗಡೆಯಾಗಲಿರುವ ಭೂಪ್ರದೇಶಗಳ ವಿವರಗಳನ್ನು ಕಂದಾಯ ಸಚಿವರಿಗೆ ತಿಳಿಸಿ,  ರೈತರ ಬೇಡಿಕೆ ನ್ಯಾಯಯುತವಾಗಿದ್ದು, ಮುಳುಗಡೆಯಾಗುವ ಇತರೆ ತಾಲ್ಲೂಕುಗಳಿಗೆ ತಾರತಮ್ಯವಾಗದಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಕಂದಾಯ ಸಚಿವ ಆರ್.ಅಶೋಕ ಅವರು ಸಂತ್ರಸ್ತರ ಮನವಿಯನ್ನು ಸರ್ಕಾರ ಕೂಲಂಕಷವಾಗಿ ಪರಿಶೀಲನೆ ಮಾಡಿ ರೈತರಿಗೆ ಅನುಕೂಲವಾಗುವಂತೆ ಕ್ರಮಜರುಗಿಸುವುದಾಗಿ ಭರವಸೆ ನೀಡಿದರು.

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಉಪಾಧ್ಯಕ್ಷ ಎಚ್.ಆರ್.ಬಿರಾದಾರ, ಜಿ.ಪಂ. ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಮಾಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಎಚ್.ಎಸ್.ಕೋರಡ್ಡಿ, ರಾಜ್ಯ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷ ರಾಜೇಂದ್ರ ದೇಸಾಯಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಸಿದ್ದಣ್ಣ ದೇಸಾಯಿ, ರಾಮಣ್ಣ ಶೇಬಾನಿ, ವೆಂಕಣ್ಣ ಬಿದರಿ ಹಾಗೂ ಮುಖಂಡರಾದ ಪ್ರಭುಸ್ವಾಮಿ ಹಿರೇಮಠ, ಡಾ.ಎಂ.ಎಚ್.ಪಾಟೀಲ ಸೇರಿದಂತೆ ಜೈನಾಪುರ, ದೇವರಗೆಣ್ಣೂರ, ಶಿರಬೂರ, ಹೊಸೂರ, ಜಂಬಗಿ, ಕಣಬೂರ, ಲಿಂಗದಳ್ಳಿ ಹಾಗೂ ಇತರೆ ಗ್ರಾಮಸ್ಥರು ಉಪಸ್ಥಿತರಿದ್ದರು. 

****

ಎಸ್‌.ಆರ್‌.ಪಿ ಭೇಟಿ ಮಾಡಿದ ನಿಯೋಗ

ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಹಂಗರಗಿ, ಬೆಳ್ಳುಬ್ಬಿ, ಜೈನಾಪೂರ, ಮಂಗಳೂರ, ತಾಜಾಪೂರ, ದೇವರ ಗೆಣ್ಣೂರ, ಲಿಂಗದಳ್ಳಿ, ಸುತಗುಂಡಿ, ಹೊಸೂರ, ಚಿಕ್ಕಗಲಗಲಿ, ಜಂಬಗಿ, ಬಬಲಾದಿ, ಶಿರಬೂರ, ಕಣಬೂರ ಗ್ರಾಮದ ಗ್ರಾಮಸ್ಥರ ನಿಯೋಗ ಬೆಂಗಳೂರಿನಲ್ಲಿ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಅವರನ್ನು ಭೇಟಿ ಮಾಡಿದರು.

ಆಲಮಟ್ಟಿ ಜಲಾಶಯ ಹಿನ್ನೀರಿನಲ್ಲಿ ಮುಳುಗಡೆ ಆಗಲಿರುವ 14 ಗ್ರಾಮಗಳ ಸಂತ್ರಸ್ತರ ಭೂಮಿಯ ಮಾರ್ಗಸೂಚಿ ಬೆಲೆಯನ್ನು ಬೀಳಗಿ ತಾಲ್ಲೂಕಿನ ಗ್ರಾಮಗಳಿಗೆ ಅನ್ವಯಿಸಿದಂತೆ ಈ ಗ್ರಾಮಗಳ ಜಮೀನುಗಳಿಗೂ ಬೆಲೆ ನಿರ್ಧರಣ ಮಾಡಿ ಪರಿಹಾರ ಘೋಷಿಸುವಂತೆ ವಿನಂತಿಸಿದರು.

ಸಂತ್ರಸ್ತರ ಮನವಿ ಸ್ವೀಕರಿಸಿ ಮಾತನಾಡಿದ ಎಸ್‌.ಆರ್‌.ಪಾಟೀಲ, ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರು ಮತ್ತು ಕಂದಾಯ ಸಚಿವರ ಗಮನಕ್ಕೆ ತಂದು ಏಕರೂಪ ದರ ನಿಗದಿಗೊಳಿಸಿ, ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.‌

ಸಿಎಂಗೆ ವಿಜುಗೌಡ ಮನವಿ:

ಬಬಲೇಶ್ವರ ತಾಲ್ಲೂಕಿನ ಮುಳುಗಡೆ ಸಂತ್ರಸ್ತರ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಏಕರೂಪದ ಬೆಲೆ ನಿಗದಿ ಮಾಡಬೇಕು ಹಾಗೂ ಕೇಂದ್ರ ಸರ್ಕಾರದ ಹೊಸ ಭೂ ಸ್ವಾಧಿನ ಕಾಯ್ದೆ ಪ್ರಕಾರ ಪರಿಹಾರದ ನಿಗದಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜಯಗೌಡ ಪಾಟೀಲ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತು ಕಂದಾಯ ಸಚಿವ ಆರ್‌.ಅಶೋಕ್‌ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು