ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕ ಯತ್ನಾಳ ವಿರುದ್ಧ ಕ್ರಮಕ್ಕೆ ಕೈಗೊಳ್ಳಿ: ಕಾಂಗ್ರೆಸ್

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತ ಮುಖಂಡರಿಂದ ಆಗ್ರಹ
Published : 21 ಸೆಪ್ಟೆಂಬರ್ 2024, 16:13 IST
Last Updated : 21 ಸೆಪ್ಟೆಂಬರ್ 2024, 16:13 IST
ಫಾಲೋ ಮಾಡಿ
Comments

ವಿಜಯಪುರ: ‘ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ, ಅವಾಚ್ಯ ಶಬ್ಧಗಳಿಂದ ನಿಂದನೆ, ಧಾರ್ಮಿಕ ಭಾವನೆಗೆ ದಕ್ಕೆ ಉಂಟು ಮಾಡುತ್ತಿರುವ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್‌ ಅನ್ನು ವಾಚಮಗೋಚರವಾಗಿ ಬೈಯುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಕ್ರಮಕೈಗೊಳ್ಳಬೇಕು. ಇಲ್ಲವಾದರೆ, ಮುಂದಾಗಬಹುದಾದ ಅನಾಹುತಗಳಿಗೆ ಯತ್ನಾಳ ಮತ್ತು ಪೊಲೀಸರೇ ಹೊಣೆಯಾಗಬೇಕಾಗುತ್ತದೆ’ ಎಂದು ಕಾಂಗ್ರೆಸ್‌ ಅಲ್ಪಸಂಖ್ಯಾತ ಮುಖಂಡರು ಎಚ್ಚರಿಕೆ ನೀಡಿದರು.

ನಗರದಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್‌, ಅಬ್ದುಲ್‌ ರಜಾಕ್‌ ಹೊರ್ತಿ, ಎಂ.ಸಿ.ಮುಲ್ಲಾ ಮತ್ತು ಫಯಾಜ್‌ ಕಲಾದಗಿ, ಯತ್ನಾಳ ವಿರುದ್ಧ ಏಕ ವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿದರು.

‘ವಿಜಯಪುರ ನಗರದಲ್ಲಿ ಹಿಂದು, ಮುಸ್ಲಿಂ ಸೇರಿದಂತೆ ಎಲ್ಲ ಧರ್ಮಿಯರು ಶಾಂತಿ, ಸೌಹಾರ್ದದಿಂದ ಬದುಕುತ್ತಿರುವುದು ಶಾಸಕ ಯತ್ನಾಳಗೆ ಸಹಿಸಲು ಸಾಧ್ಯವಾಗದೇ ಕೋಮು ಗಲಭೆ ನಡೆಸಲು ಹೊಂಚು ಹಾಕಿದ್ದಾರೆ. ಈ ಕಾರಣಕ್ಕೆ ಮುಸ್ಲಿಮರ ವಿರುದ್ಧ ಉದ್ರೇಕಕಾರಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ನಮಗೂ ಯತ್ನಾಳ ವಿರುದ್ಧ ಏಕ ವಚನದಲ್ಲಿ ಬೈಯಲು ಬರುತ್ತದೆ. ಹಂದಿ, ನಾಯಿ, ಲಫಂಗ ಎನ್ನಲು ಬರುತ್ತದೆ. ಒಬ್ಬ ಶಾಸಕರಾಗಿ ಬಳಸುವ ಭಾಷೆ ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ’ ಎಂದರು.

‘ಮುಸ್ಲಿಮರ ವಿರುದ್ಧ ಮುಂದಿನ ದಿನಗಳಲ್ಲಿ ಅನಗತ್ಯವಾಗಿ ಕೆಟ್ಟ ಭಾಷೆಯಿಂದ ಬೈಯ್ಯುವುದು, ಟೀಕಿಸುವುದು, ಸುಳ್ಳು ಆರೋಪ ಮಾಡುವುದು ಮಾಡಿದರೆ ಅದೇ ಸ್ಥಳದಲ್ಲಿ ಸೂಕ್ತ ಉತ್ತರ ನೀಡುತ್ತೇವೆ. ಕಾನೂನು ಹೋರಾಟವನ್ನು ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಟಿಪ್ಪು ಸುಲ್ತಾನ್‌ ಇತಿಹಾಸ ತಿಳಿಯದೇ ಟೀಕಿಸುವುದು, ಆರೋಪಿಸುವುದು ಸರಿಯಲ್ಲ. ದೇಶದ ಸ್ವಾತಂತ್ರಕ್ಕಾಗಿ ಟಿಪ್ಪು ತಮ್ಮ ಮಕ್ಕಳನ್ನೇ ಬ್ರಿಟೀಷರ ಬಳಿ ಒತ್ತೆ ಇಟ್ಟು ಹೋರಾಟ ನಡೆಸಿದ್ದಾರೆ. ಶೃಂಗೇರಿ ಶಾರದಾ ಪೀಠಕ್ಕೆ, ಕೊಲ್ಹೂರು ದೇವಸ್ಥಾನಕ್ಕೆ ಸಾಕಷ್ಟು ಸಹಾಯ, ಸಹಕಾರ ನೀಡಿದ್ದಾರೆ. ಅದನ್ನು ಅರಿಯದೇ ಲಕ್ಷಾಂತರ ಜನರನ್ನು ಕೊಂದಿದ್ದಾರೆ ಎಂದು ಆರೋಪಿಸುವುದು ಸರಿಯಲ್ಲ’ ಎಂದರು.

‘ಮುಸ್ಲಿಮರು ಸುಮ್ಮನೆ ಕೂತಿದ್ದಾರೆ ಎಂದು ತಿಳಿಯಬೇಡಿ, ನಾವು ಕೂಡ ಎಲ್ಲದ್ದಕ್ಕೂ ತಯಾರಿದ್ದೇವೆ. ಆದರೆ, ವಿಜಯಪುರ ಶಾಂತಿಯಿಂದ ಇರಬೇಕು ಎಂಬ ಒಂದೇ ಉದ್ದೇಶದಿಂದ ಸುಮ್ಮನಿದ್ದೇವೆ’ ಎಂದರು.

‘ನಮ್ಮನ್ನು ಪಾಕಿಸ್ತಾನಕ್ಕೆ, ಅಪಘಾನಿಸ್ತಾನಕ್ಕೆ ಕಳುಹಿಸುವ ಧೈರ್ಯ ನಿನಗೆ ಇದೆಯಾ? ಇದ್ದರೆ ಕಳುಹಿಸು, ಇಲ್ಲವಾದರೆ ನಿನ್ನನ್ನು ಖಬರಸ್ಥಾನಕ್ಕೆ ಕಳುಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ಮುಖಂಡರಾದ ಸೋಮನಾಥ ಕಳ್ಳಿಮನಿ, ಗಂಗಾಧರ ಸಂಬಣ್ಣಿ, ಉಪಮೇಯರ್ ದಿನೇಶ್‌ ಹಳ್ಳಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

‘ಯತ್ನಾಳಗೆ ಮಾಂಸದೂಟವೇ ಬೇಕು’

‘ಮುಸ್ಲಿಮರ ಬಳಿ ವ್ಯಾಪಾರ ವಹಿವಾಟು ನಡೆಸಬಾರದು ಅವರು ಮಾಂಸ ತಿನ್ನುತ್ತಾರೆ ಎಂದು ಶಾಸಕ ಯತ್ನಾಳ ಹೇಳಿಕೆ ನೀಡಿದ್ದಾರೆ. ಆದರೆ ಯತ್ನಾಳಗೆ ಪ್ರತಿದಿನ ಮಾಂಸದೂಟವೇ ಬೇಕು’ ಎಂದು ಕಾಂಗ್ರೆಸ್‌ ಅಲ್ಪಸಂಖ್ಯಾತ ಮುಖಂಡರು ಆರೋಪಿಸಿದರು.

‘ಪ್ರತಿದಿನ ಪಾಕಿಸ್ತಾನದ ಹೆಸರು ಹೇಳಿ ಮುಸ್ಲಿಮರಿಗೆ ಬೈಯ್ಯತ್ತಾರೆ. ಅದೇ ಪಾಕಿಸ್ತಾನದ ಬಾವುಟವನ್ನು ಸಿಂದಗಿ ವಿಜಯಪುರದಲ್ಲಿ ಹಾರಿಸಿದವರೇ ಯತ್ನಾಳ. ನಿಜವಾದ ದೇಶದ್ರೋಹಿ ಯತ್ನಾಳ. ಆ ಪ್ರಕರಣವನ್ನು ಸಿಬಿಐ ತನಿಖೆಯಾಗಬೇಕು ಸಜೆಯಾಗಬೇಕು’ ಎಂದು ಆಗ್ರಹಿಸಿದರು.

‘ಅಮಾಯಕ ಹಿಂದು ಮುಸ್ಲಿಮರನ್ನು ಪ್ರಚೋದಿಸುವ ದಾಂದಲೆ ನಡೆಸಿ ಜೈಲಿಗೆ ಕಳುಹಿಸುವ ಕಿಡಿಗೇಡಿ ಕೆಲಸ ಯತ್ನಾಳ ಮಾಡಿದರೂ ಕೂಡ ವಿಜಯಪುರದಲ್ಲಿ ಯಾರೊಬ್ಬರೂ ಪ್ರಚೋದನೆಗೆ ಒಳಗಾಗುತ್ತಿಲ್ಲ ಎಂಬುದು ಸಮಾಧಾನದ ಸಂಗತಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT