ವಿಜಯಪುರ: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಎದುರಾಗಿದ್ದು, ಸಂಪೂರ್ಣ ಬರಗಾಲ ಆವರಿಸಿರುವುದರಿಂದ ಅಖಂಡ ಜಿಲ್ಲೆಯಲ್ಲಿ ಬರಗಾಲ ಜಿಲ್ಲೆವೆಂದು ಘೋಷಿಸಿ ಸರ್ಕಾರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕ ಮಂಗಳವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಂಗಾರು ಹಂಗಾಮು ಅರ್ಧ ಕಳೆಯುತ್ತಾ ಬಂದರೂ ಈವರೆಗೂ ಸಮರ್ಪಕ ಮಳೆಯಾಗಿಲ್ಲ. ಜಿಲ್ಲೆಯಲ್ಲಿ ಸಂಪೂರ್ಣ ಬರಗಾಲ ಆವರಿಸಿದೆ. ಕಳೆದ 15 ದಿನಗಳ ಹಿಂದೆ ಕೆಲವೊಂದು ಭಾಗದಲ್ಲಿ ಮಾತ್ರ ಸಲ್ಪಸ್ವಲ್ಪ ಮಳೆ ಆಗಿದ್ದು ಬಿಟ್ಟರೆ ಬಹುತೇಕ ತಾಲ್ಲೂಕುಗಳಲ್ಲಿ ಸಮರ್ಪಕ ಮಳೆಯಾಗಿಲ್ಲ. ಈಗ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಮೀಕ್ಷೆ ವರದಿ ಕಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 13 ತಾಲ್ಲೂಕುಗಳ ಪೈಕಿ ಕೇವಲ 5 ತಾಲ್ಲೂಕುಗಳಲ್ಲಿ ಮಳೆ ಕೊರತೆ ಗುರುತಿಸಲಾಗಿದ್ದು, ಇದೊಂದು ಅವೈಜ್ಞಾನಿಕ ವರದಿಯಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯ ಮುದ್ದೇಬಿಹಾಳ, ಚಡಚಣ, ದೇವರಹಿಪ್ಪರಗಿ, ತೀವ್ರ ಮಳೆ ಕೊರತೆ ಇರುವ ತಾಲ್ಲೂಕುಗಳೆಂದು ಬಬಲೇಶ್ವರ, ನಿಡಗುಂದಿ ತೀವ್ರ ಮಳೆ ಕೊರತೆ ತಾಲ್ಲೂಕುಗಳೆಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸರ್ಕಾರಕ್ಕೆ ತಪ್ಪು ವರದಿ ಸಲ್ಲಿಸಿದೆ. ವಾಸ್ತವದಲ್ಲಿ ಜಿಲ್ಲೆಯ ಯಾವುದೇ ತಾಲ್ಲೂಕುಗಳಲ್ಲಿ ಸಮರ್ಪಕ ಮಳೆಯಾಗಿಲ್ಲ. ಸರಿಯಾಗಿ ಸಮೀಕ್ಷೆ ನಡೆಸದೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಇನ್ನುಳಿದ 8 ತಾಲ್ಲೂಕುಗಳನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರದವರು ವಿವಿಧ ರೈತ ಸಂಘಟನೆಗಳ ಮುಖಂಡರೊಂದಿಗೆ 13 ತಾಲ್ಲೂಕುಗಳಲ್ಲಿ ಸಮೀಕ್ಷೆ ನಡೆಸಲಿ. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಉಳಿದ ತಾಲ್ಲೂಕುಗಳನ್ನು ನಿರ್ಲಕ್ಷ ಮಾಡಿರುವುದು ಖಂಡನೀಯ. ಕೆ.ಎಸ್.ಎಸ್.ಎಂ.ಸಿ.ಯವರು ಕಚೇರಿಯಲ್ಲಿಯೇ ಕುಳಿತು ಸರ್ವೇ ಕಾರ್ಯ ಮಾಡಿದರೆ ರೈತರಿಗೆ ಅನ್ಯಾಯವಾಗುತ್ತದೆ. ಕೂಡಲೇ ಎಲ್ಲ ತಾಲ್ಲೂಕುಗಳಿಗೆ ಅಧಿಕಾರಿಗಳು ಭೇಟಿ ನೀಡಿ ಖುದ್ದಾಗಿ ಪರಿಶೀಲಿಸಲಿ ಎಂದು ಒತ್ತಾಯಿಸಿದರು.
ಸರ್ಕಾರ ಈ ವರದಿಯನ್ನು ಪರಿಗಣಿಸದೆ ಪುನಃ 13 ತಾಲ್ಲೂಕುಗಳನ್ನು ರೈತ ಮುಖಂಡರೊಂದಿಗೆ ಸರ್ವೆ ಕಾರ್ಯ ನಡೆಸಬೇಕು. ಒಟ್ಟು 13 ತಾಲ್ಲೂಕುಗಳನ್ನು ತೀವ್ರ ಮಳೆ ಕೊರತೆ ತಾಲ್ಲೂಕುಗಳೆಂದು ಪರಿಗಣಿಸಿ ಸಂಪೂರ್ಣ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಹಾನಿಗೊಳಗಾದ ಮುಂಗಾರು ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪಾಂಡು ಪ್ಯಾಟಿ, ಪ್ರಲ್ಹಾದ ನಾಗರಾಳ, ಹೊನಕೇರಪ್ಪ ತೆಲಗಿ, ಲಾಲಸಾಬ ಹಳ್ಳೂರ, ಸುಭಾಷಗೌಡ ಬಿಸಿರೊಟ್ಟಿ, ಬನ್ನೆಪ್ಪ ಜೋಗಿ, ರ್ಯಾವಪ್ಪಗೌಡ, ರಾಮಣ್ಣ ಮಾಶ್ಯಾಳ, ಶೆಟ್ಟೆಪ್ಪ ಲಮಾಣಿ, ಸಿದ್ಲಿಂಗಪ್ಪ ಬಿರಾದಾರ, ಸಿದ್ದಪ್ಪ ಮುತ್ತತ್ತಿ, ಗುರಲಿಂಗಪ್ಪ ಪಡಸಲಗಿ, ಚಂದ್ರಾಮ ಹಿಪ್ಪಲಿ, ಬಾಲಪ್ಪಗೌಡ ಲಿಂಗದಳ್ಳಿ, ಸಂಗನಗೌಡ ಕೊಳೂರ, ಬಸನಗೌಡ ಹೊಸಳ್ಳಿ, ನಿಂಗನಗೌಡ ಬಿರಾದಾರ, ರಾಮನಗೌಡ ಬಿರಾದಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.