ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಕೆಪಿ ಸಂತ್ರಸ್ತರಿಗೆ ಪರಿಹಾರ ವಿತರಣೆ ತಾರತಮ್ಯ

‘ಗೃಹ ಲಕ್ಷ್ಮಿ’ ಸಮಾವೇಶದಲ್ಲಿ ಎಂ. ಬಿ. ಪಾಟೀಲ ಆರೋಪ
Last Updated 24 ಮಾರ್ಚ್ 2023, 14:04 IST
ಅಕ್ಷರ ಗಾತ್ರ

ವಿಜಯಪುರ: ಯು.ಕೆ.ಪಿ ಮೂರನೇ ಹಂತದ ಭೂಸ್ವಾಧೀನ ಪರಿಹಾರ ತಾರತಮ್ಯದಿಂದ ಕೂಡಿದೆ. ಜಿಲ್ಲೆಯ ರೈತರು ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಆರೋಪಿಸಿದರು.

ಬಬಲೇಶ್ವರ ತಾಲ್ಲೂಕಿನ ದೇವರಗೆಣ್ಣೂರಿನಲ್ಲಿ ‘ಗೃಹ ಲಕ್ಷ್ಮಿ’ ಸಮಾವೇಶದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಪ್ರತಿಪಕ್ಷದಲ್ಲಿದ್ದಾಗ ಸಚಿವರಾದ ಗೋವಿಂದ ಕಾರಜೋಳ ಮತ್ತು ಮುರಗೇಶ ನಿರಾಣಿ ರೈತರಿಗೆ ₹ 40 ಲಕ್ಷ ಮತ್ತು ₹ 50 ಲಕ್ಷ ಪರಿಹಾರ ನೀಡಲು ಒತ್ತಾಯಿಸಿದ್ದರು. ಆದರೆ, ತಮ್ಮ ಈ ಅಧಿಕಾರ ಅವಧಿಯಲ್ಲಿ ತಾವೇ ಹೇಳಿದಷ್ಟು ಪರಿಹಾರ ಯಾಕೆ ನೀಡಲಿಲ್ಲ? ಎಂದು ಅವರು ಪ್ರಶ್ನಿಸಿದರು.

ಬೀಳಗಿ ಭಾಗದ ರೈತರಿಗೆ ಘೋಷಿಸಲಾಗಿರುವ ಭೂಸ್ವಾಧೀನ ಪರಿಹಾರದ ವಿರುದ್ಧ ಅಲ್ಲಿನ ರೈತರು ನ್ಯಾಯಾಲಯದ ಮೊರೆ ಹೋಗಬಹುದಾಗಿದೆ. ಆದರೆ, ವಿಜಯಪುರ ಜಿಲ್ಲೆಯ ರೈತರಿಗೆ ಕನ್ಸೆಂಟ್ ಹೆಸರಿನಲ್ಲಿ ಅನ್ಯಾಯ ಮಾಡಲಾಗಿದ್ದು, ಇಲ್ಲಿನ ರೈತರು ಕನ್ಸೆಂಟ್‍ಗೆ ಒಪ್ಪಿದರೆ ನ್ಯಾಯಾಲಯದ ಮೊರೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಈ ಭಾಗದ ರೈತರು ಅದನ್ನು ಒಪ್ಪಿದರೆ ಮೋಸ ಹೋದಂತೆ ಎಂದು ಹೇಳಿದರು.

ಈ ತಾರತಮ್ಯದ ಕುರಿತು ನಾನು ಬಹಿರಂಗ ಸಭೆಯಲ್ಲಿ ಸಿಎಂ ಗಮನಕ್ಕೆ ತಂದಿದ್ದೇನೆ. ಅವರು ಈ ತಾರತಮ್ಯ ಸರಿ ಮಾಡದಿದ್ದರೆ, ನಮ್ಮ ಸರ್ಕಾರ ಅಧಿಕಾರಿಕ್ಕೆ ಬಂದ ಮೇಲೆ ತಾರತಮ್ಯ ಸರಿಪಡಿಸುತ್ತೇವೆ ಎಂದರು.

ಗೂಂಡಾಗಿರಿ ವರ್ಕೌಟ್ ಆಗದ ಹಿನ್ನೆಲೆಯಲ್ಲಿ ಆಪ್ತರ ಸಲಹೆ ಮೇರೆಗೆ ವಿರೋಧಿಗಳು ಹೊಸ ಸೋಗು ಹಾಕಿದ್ದಾರೆ. ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಹ್ಯಾಟ್ರಿಕ್ ಸೋಲುಂಡಿರುವ ಅವರು 30 ಸಲ ನಿಂತರೂ ಸೋಲುತ್ತಾರೆ. ಪಾರ್ಟಿ ಫಂಡ್ ಸಲುವಾಗಿ ಚುನಾವಣೆಗೆ ನಿಲ್ಲುವವರನ್ನು ನನ್ನನ್ನು ವಿರೋಧಿಸುವ ಕೆಲವರು ಹಣಕಾಸಿನ ನೆರವು ನೀಡುತ್ತಾರೆ. 2018ರಲ್ಲಿ ಪ್ರಧಾನಿ ಮೋದಿ, ಅಮಿತ ಶಾ ಅವರಂಥ ನಾಯಕರು ಬಂದು ಭರ್ಜರಿ ಪ್ರಚಾರ ಮಾಡಿದರೂ ನಾನು 30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ತಮ್ಮ ಆರ್ಶೀವಾದದಿಂದ ಈ ಭಾರಿ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ. ತಾವೆಲ್ಲರೂ ವಿರೋಧಿಯ ಠೇವಣಿ ಜಪ್ತಿ ಮಾಡಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ವಿರೋಧಿಗಳಿಗೆ ಮತ ಹಾಕಿದರೆ ಓಣಿಗೊಂದು ಮದ್ಯ ಅಂಗಡಿ, ಪೊಲೀಸ್‌ ಠಾಣೆ ತೆರೆಯುತ್ತಾರೆ. ನಿಮ್ಮ ಸಂಸಾರ ಹಾಳು ಮಾಡಲು ಪೋಲೀಸ್ ಠಾಣೆಗಳಿಗೆ ಅಲೆದಾಡುವಂತೆ ಮಾಡುತ್ತಾರೆ. 4 ವರ್ಷ ಜನರ ಶೋಷಣೆ ಮಾಡಿರುವ ಅವರು ಈಗ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಇಂಥ ಕಣ್ಣೀರ ಹಾಕುವ ಗಂಡಸರನ್ನು ನಂಬಬಾರದು. ನಮ್ಮ ಸರ್ಕಾರ ಬಂದ ಮೇಲೆ ಬಬಲೇಶ್ವರ ಮತಕ್ಷೇತ್ರಾದ್ಯಂತ ಕಿರಾಣಿ ಅಂಗಡಿ ಸೇರಿದಂತೆ ನಾನಾ ಕಡೆ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುತ್ತೇವೆ ಎಂದು ಹೇಳಿದರು.

ಆಶಾ ಎಂ. ಪಾಟೀಲ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರಕಾರಗಳ ಜನ ವಿರೋಧಿ ನೀತಿಗಳಿಂದಾಗಿ ಸಾರ್ವಜನಿಕರು ಬೇಸತ್ತಿದ್ದಾರೆ. ಎಲ್ಲರಿಗೂ ಈಗ ಕಾಂಗ್ರೆಸ್ ಆಶಾಕಿರಣವಾಗಿ ಕಾಣಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬಸನಗೌಡ ಎಂ. ಪಾಟೀಲ, ರೇಣುಕಾ ಎಸ್. ಪಾಟೀಲ, ಈರನಗೌಡ ಬಿರಾದಾರ, ವಿದ್ಯಾರಾಣಿ ತುಂಗಳ, ಕಲ್ಪನಾ ಪಾಟೀಲ, ಬಸವರಾಜ ದೇಸಾಯಿ, ಜ್ಯೋತಿ ಬಸವರಾಜ ದೇಸಾಯಿ, ಕುಮಾರ ದೇಸಾಯಿ, ಭಾಗೀರಥಿ ತೇಲಿ, ಜಂಗಮಶೆಟ್ಟಿ, ವಿ.ಎಸ್.ಪಾಟೀಲ, ಎಚ್.ಎಸ್.ಕೋರಡ್ಡಿ, ಲಕ್ಷ್ಮಣ ತೇಲಿ, ಎಚ್.ಎಸ್.ಬಿರಾದಾರ, ವಿ.ಎಚ್.ಬಿದರಿ, ಶೋಭಾ ಬಿದರಿ, ಪ್ರಶಾಂತ ದೇಸಾಯಿ ಇದ್ದರು.

***

ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ, ರೈತರ ಆದಾಯಕ್ಕಿಂತ ನಿರ್ವಹಣೆ ವೆಚ್ಚ ಹೆಚ್ಚಳವಾಗಿರುವುದೇ ಇವರ ಅಚ್ಚೆ ದಿನ್ ಕೊಡಿಗೆಯಾಗಿದೆ

– ಎಂ. ಬಿ. ಪಾಟೀಲ, ಅಧ್ಯಕ್ಷ, ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT