ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಷ್ಟಿಹೀನರ ಪಾಲಿಗೆ ‘ದೈವ’ ಡಾ. ಪ್ರಭುಗೌಡ

ಉಚಿತ ನೇತ್ರ ಚಿಕಿತ್ಸೆಗೆ ಪ್ರಸಿದ್ಧಿಯಾದ ‘ಅನುಗ್ರಹ’ ಆಸ್ಪತ್ರೆ
Last Updated 28 ಮೇ 2022, 12:56 IST
ಅಕ್ಷರ ಗಾತ್ರ

ವಿಜಯಪುರ: ‘ವೈದ್ಯೋ ನಾರಾಯಣೋ ಹರಿ‘ ಎಂಬ ಮಾತಿಗೆ ಅನ್ವರ್ಥ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಡಾ.ಪ್ರಭುಗೌಡ ಪಾಟೀಲ.

ವಿಜಯಪುರ ಮತ್ತು ಕಲಬುರಗಿಯಲ್ಲಿ ’ಅನುಗ್ರಹ‘ ಕಣ್ಣಿನ ಆಸ್ಪತ್ರೆ ತೆರೆದು ಎರಡು ದಶಕದಿಂದ ಸುಮಾರು 10 ಲಕ್ಷ ಹೊರ ರೋಗಿಗಳ ತಪಾಸಣೆ, 2 ಲಕ್ಷ ಜನರಿಗೆ ಉಚಿತ ತಪಾಸಣೆ ಹಾಗೂ 35 ಸಾವಿರ ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆಯನ್ನು ಇದುವರೆಗೆ ನೀಡಿರುವ ಪ್ರಭುಗೌಡರ ಸೇವೆ ಅನನ್ಯ.‌

2001ರಲ್ಲಿ ಕೇವಲ ನಾಲ್ಕು ಜನ ಸಿಬ್ಬಂದಿಯೊಂದಿಗೆ ವಿಜಯಪುರದಲ್ಲಿ ಪ್ರಾರಂಭವಾದ ಅವರ ಸೇವೆ ಇಡೀ ಉತ್ತರ ಕರ್ನಾಟಕಕ್ಕೆ ವ್ಯಾಪಿಸಿದೆ. ಪ್ರಪಂಚದ ಅತ್ಯುನ್ನತ ತಂತ್ರಜ್ಞಾನದ ಸೌಲಭ್ಯಗಳನ್ನು ಒದಗಿಸಿ, ನುರಿತ ನೇತ್ರ ತಜ್ಞರ ಸೇವೆಯೊಂದಿಗೆ ಪ್ರಸಿದ್ಧಿಯಾಗಿದ್ದಾರೆ.

ವಿಜಯಪುರ, ಬಾಗಲಕೋಟೆ, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಯಾರೊಬ್ಬರೂ ಹಣವಿಲ್ಲದ ಕಾರಣಕ್ಕೆ ದೃಷ್ಟಿ ಹೀನರಾಗಬಾರದು ಎಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಾ.ಪ್ರಭುಗೌಡ ಮತ್ತು ಡಾ. ಮಾಲಿನಿ ಲಿಂಗದಳ್ಳಿ ದಂಪತಿ ಅವರೊಟ್ಟಿಗೆ 20ಕ್ಕೂ ಹೆಚ್ಚು ನೇತ್ರ ತಜ್ಞರು, 100ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಡವರ ಹಾಗೂ ನಿರ್ಗತಿಕರ ಕಣ್ಣಿನ ಚಿಕಿತ್ಸೆಗಾಗಿ ಅವರು ’ಅನುಗ್ರಹ‌‘ ವಿಜನ್‌ ಫೌಂಡೇಷನ್‌ ಎಂಬ ಧರ್ಮಾರ್ಥ ಸೇವಾ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆ ಮೂಲಕ ಉಚಿತವಾಗಿ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಆಯೋಜಿಸುತ್ತಾ ಬರುತ್ತಿದ್ದಾರೆ.

ಕೊರೊನಾ ಸಮಯದಲ್ಲಿ ಕಣ್ಣಿನ ಸಮಸ್ಯೆಯುಳ್ಳ ಹಿರಿಯರು ದೂರದ ಜಿಲ್ಲಾ ಕೇಂದ್ರಗಳಿಗೆ ಬರಲು ಸಾಧ್ಯವಾಗದ ಸಂದರ್ಭದಲ್ಲಿ ಅವರಿಗೆ ಅನುಕೂಲವಾಗಲು ಹೋಬಳಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ 12 ದೃಷ್ಟಿ ಕೇಂದ್ರಗಳನ್ನು ಸ್ಥಾಪಿಸಿ, ಅವರ ಕಣ್ಣಿನ ಸಮಸ್ಯೆಗಳಿಗೆ ಆನ್‌ಲೈನ್‌ ಮೂಲಕವೇ ಪರೀಕ್ಸಿಸಿ ಚಿಕಿತ್ಸೆ ನೀಡಿರುವುದು ವಿಶೇಷ.

ಕೋವಿಡ್‌ ಸಂದರ್ಭದಲ್ಲಿ ‘ಇ–ಕಣ್ಣು’ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿ, ಆನ್‌ಲೈನ್‌ ಮೂಲಕವೇ ಟೆಲಿ ಕನ್ಸಲ್ಟೆನ್ಸ್‌ ಮೂಲಕ ದೇಶದಾದ್ಯಂತ ನೇತ್ರ ಸಮಸ್ಯೆಯುಳ್ಳುವರಿಗೆ ನೆರವಾದ ಹೆಗ್ಗಳಿಕೆ ಅವರದು.

ಕಳೆದ ಮೂರು ತಿಂಗಳಿಂದ ಪ್ರಭುಗೌಡ ಅವರ ಸಾರತ್ಯದಲ್ಲಿ ಅನುಗ್ರಹ ಆಸ್ಪತ್ರೆಯು ‘ನಮ್ಮ ನಡೆ ದೃಷ್ಟಿಯ ಕಡೆ’ ಎಂಬ ಕಾರ್ಯದಡಿಯಲ್ಲಿ ನೂರಕ್ಕೂ ಅಧಿಕ ಗ್ರಾಮಗಳಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಏರ್ಪಡಿಸಿ, 10 ಸಾವಿರ ಜನರ ಕಣ್ಣಿನ ತಪಾಸಣೆ ಮಾಡಿ ಚಿಕಿತ್ಸೆ ನೀಡಿದ್ದಾರೆ.

‘ಅನುಗ್ರಹ ನೇತ್ರ ಭಂಡಾರ’ ಸ್ಥಾಪಿಸಿ, ನೇತ್ರದಾನಿಗಳ ಕಣ್ಣುಗಳನ್ನು ಕಣ್ಣಿಲ್ಲದವರಿಗೆ ಕಸಿ ಮಾಡಿ ಅಳವಡಿಸುತ್ತಿರುವುದು ವಿಶೇಷ. ಇದುವರೆಗ 200ಕ್ಕೂ ಅಧಿಕ ಜನರಿಗೆ ಅಳವಡಿಸಿದ್ದಾರೆ. ಪ್ರತಿ ವರ್ಷ ನೇತ್ರದಾನ ಪಾಕ್ಷಿಕ ಆಚರಣೆ ಮಾಡುವ ಮೂಲಕ ಸಮಾಜದಲ್ಲಿ ನೇತ್ರದಾನದ ಅರಿವು ಮೂಡಿಸುತ್ತಿದ್ದಾರೆ. ಅಲ್ಲದೇ, ‘ಗ್ಲುಕೋಮಾ’ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಇದಲ್ಲದೇ ಶಿಕ್ಷಣ ಕ್ಷೇತ್ರದಲ್ಲೂ ನೂರಾರು ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಡಾ.ಪ್ರಭುಗೌಡ ಅವರ ಸೇವೆಯನ್ನು ಪರಿಗಣಿಸಿ ಚಿತ್ರದುರ್ಗ ಮುರುಘಾಮಠದಿಂದ ’ಶರಣ ದಂಪತಿ‘ ಪ್ರಶಸ್ತಿ, ವಿಜಯಪುರದ ಸಿದ್ದೇಶ್ವರ ಸಂಸ್ಥೆಯಿಂದ ’ಶ್ರೀ ಸಿದ್ದೇಶ್ವರ ರತ್ನ‘ ಪ್ರಶಸ್ತಿ, ವಿಜಯಪುರ ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವರು ಪ್ರಶಸ್ತಿ, ಗೌರವಗಳು ಇವರನ್ನು ಅರಸಿ ಬಂದಿವೆ.

***

ನೇತ್ರ ದೋಷದಿಂದ ಬಳಲುವರು ಅತೀವ ನಿರೀಕ್ಷೆ ಇಟ್ಟುಕೊಂಡು ನಮ್ಮಲ್ಲಿ ಬರುತ್ತಾರೆ. ಅವರಿಗೆ ಉಚಿತ, ಅತ್ಯಲ್ಪ ಶುಲ್ಕದಲ್ಲಿ ಅತ್ಯುತ್ತಮ ಸೇವೆ ನೀಡುವ ಕಾರ್ಯ ಮಾಡಲಾಗುತ್ತಿದೆ.
ಡಾ. ಪ್ರಭುಗೌಡ ಬಿ.ಎಲ್., ಅಧ್ಯಕ್ಷ, ಅನುಗ್ರಹ ಕಣ್ಣಿನ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT