ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಅನುಕಂಪ ಬೇಡ, ಅವಕಾಶ ಕೊಡಿ

ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಸಲಹೆ
Last Updated 3 ಡಿಸೆಂಬರ್ 2022, 12:45 IST
ಅಕ್ಷರ ಗಾತ್ರ

ವಿಜಯಪುರ: ಅಂಗವಿಕಲರು ಅಸಾಹಯಕರಲ್ಲ, ಸದೃಢರಿಗಿಂತಲೂ ವಿಶಿಷ್ಟ ಸಾಧನೆ ಮಾಡಬಲ್ಲರು. ಅವರಿಗೆ ಬೇಕಿರುವುದು ಅನುಕಂಪ ಅಲ್ಲ, ಅವಕಾಶ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಕಂದಗಲ್‌ ಹನಮಂತರಾಯ ರಂಗಮಂದಿರದಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅಂಗವಿಕಲಗಾಗಿಯೇ ಸರ್ಕಾರ ಅನೇಕ ಸೌಲಭ್ಯ ಒದಗಿಸುತ್ತಿದ್ದು, ಸದ್ಭಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಕೆ. ಚವ್ಹಾಣ ಮಾತನಾಡಿ, ಅಂಗವಿಕಲ ವಿದ್ಯಾರ್ಥಿಗಳು ಧೈರ್ಯಗುಂದದೆ ಎಲ್ಲವನ್ನು ಆತ್ಮಸ್ಥೈರ್ಯದಿಂದ ಎದುರಿಸುವ ಪರಿಪಾಠ ಮೈಗೂಡಿಸಿಕೊಳ್ಳಬೇಕು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ದಿಸೆಯಲ್ಲಿ ಗುರಿ ಇರಬೇಕು ಎಂದರು.

ಮತದಾನ ಜಾಗೃತಿ:

ಜಿಲ್ಲಾ ಪಂಚಾಯಿತಿ ಯೋಜನಾ ಉಪ ನಿರ್ದೇಶಕ ಎ.ಬಿ.ಅಲ್ಲಾಪೂರ ಮಾತನಾಡಿ, ಅಂಗವಿಕಲರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ದೈವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ 2022-23ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ಅಂಗವಿಕಲರ ಕ್ರೀಡಾಕೂಟದಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸಮಾಜ ಸೇವೆ, ಕ್ರೀಡಾ ಕ್ಷೇತ್ರ, ಶಿಕ್ಷಣ ಕೇತ್ರ, ಸ್ವಯಂ ಉದ್ಯೋಗ ಇತ್ಯಾದಿ ಕ್ಷೇತ್ರಗಳಲ್ಲಿ ಮಾಡಿರುವ ಗಣನೀಯ ಸೇವೆ ಗುರುತಿಸಿ ಸಾಧಕರಿಗೆ ಸನ್ಮಾನಿಸಲಾಯಿತು. 10ನೇ ತರಗತಿಯಲ್ಲಿ ಅತಿ ಹೆಚ್ಚ್ರು ಅಂಕ ಪಡೆದ ಶ್ರವಣದೋಷವುಳ್ಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಡಿವೈಎಸ್‍ಪಿ ಸಿದ್ಧೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಜಿ. ಲೋಣಿ, ವಾರ್ತಾಧಿಕಾರಿ ಅಮರೇಶ ದೊಡಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಸಿ ಮ್ಯಾಗೇರಿ, ದೀಪಾಕ್ಷಿ ಜಾನಕಿ, ಮಾತೃಶ್ರೀ ಅಂಬವ್ವ ಖೇಡ ಕಲಾ ಮತ್ತು ವಾಣಿಜ್ಯ ವಿದ್ಯಾಲಯ ಅಧ್ಯಕ್ಷ ವಿನೋದ ಖೇಡ, ಚನ್ನಯ್ಯ ಸಾರಂಗಮಠ, ನಿಮಿಷ ಆಚಾರ್ಯ, ಮಲ್ಲಿಕಾರ್ಜುನ ಉಮರಾಣಿ ಕಾರ್ಯಕ್ರಮದಲ್ಲಿ ಇದ್ದರು.

ಜಾಥಾಕ್ಕೆ ಚಾಲನೆ:

ನಗರದ ಸೆಟಲೈಟ್ ಬಸ್ ನಿಲ್ದಾಣದಿಂದ ಕಂದಗಲ್‌ ಹನುಮಂತರಾಯ ರಂಗ ಮಂದಿರದ ವರೆಗೆ ನಡೆದ ‘ತ್ರಿಚಕ್ರ ವಾಹನ ಜಾಥಾ’ ಕ್ಕೆ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ದೈವಾಡಿ ಚಾಲನೆ ನೀಡಿದರು.

***

ಅಂಗವಿಕಲರು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡು, ಸ್ವಾವಲಂಬಿ ಜೀವನ ನಡೆಸುವ ನಿಟ್ಟಿನಲ್ಲಿ ಸಮಾಜಕ್ಕೆ ಮಾದರಿಯಾಗಬೇಕು. ಮಾನಸಿಕವಾಗಿ ಸದೃಢರಾಗಿ ಆತ್ಮಸ್ಥೈರ್ಯ ಬೆಳಸಿಕೊಳ್ಳಬೇಕು

–ನಿಂಗಪ್ಪ ಗೋಠೆ,ಮುಖ್ಯ ಯೋಜನಾಧಿಕಾರಿ,ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT