ಬುಧವಾರ, ಜುಲೈ 28, 2021
24 °C
ಗುಮ್ಮಟನಗರಿಯಲ್ಲಿ ನಡೆಯದ ಸಾಮೂಹಿಕ ಪ್ರಾರ್ಥನೆ, ಪರಸ್ಪರ ಆಲಿಂಗನ, ಶುಭಾಷಯ ವಿನಿಮಯ

ಈದ್-ಉಲ್-ಫಿತ್ರ್‌: ಮನೆಗೆ ಸೀಮಿತವಾದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪವಿತ್ರ ಈದ್-ಉಲ್-ಫಿತ್ರ್‌ ಹಬ್ಬವನ್ನು ಗುಮ್ಮಟನಗರಿಯಲ್ಲಿ ಮುಸ್ಲಿಂ ಬಾಂಧವರು ಮನೆ, ಮನೆಯಲ್ಲಿಯೇ ಶ್ರದ್ಧೆ-ಭಕ್ತಿಯಿಂದ ಆಚರಿಸಿದರು.

ಕೊರೊನಾ ಲಾಕ್‌ಡೌನ್‌ನಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ವೈಭವದ ಆಚರಣೆಗೆ ಈ ಬಾರಿ ನಿರ್ಬಂಧ ಇದ್ದ ಕಾರಣ ಮುಸ್ಲಿಮರು ಹಬ್ಬವನ್ನು ಸರಳವಾಗಿ ಆಚರಿಸಿದರು.

ಮನೆಯಲ್ಲಿಯೇ ಈದ್ ನಮಾಜ್ ನೆರವೇರಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಧಾರ್ಮಿಕ ಮುಖಂಡರು ಕರೆ ನೀಡಿದ್ದ ಹಿನ್ನೆಲೆಯಲ್ಲಿ ಬಹುತೇಕ ಮುಸಲ್ಮಾನರು ಬೆಳಿಗ್ಗೆ ಬೇಗನೇ ಎದ್ದು, ಹೊಸಬಟ್ಟೆ ಧರಿಸಿ ತಮ್ಮ ಕುಟುಂಬಸ್ಥರೊಡನೆ ಮನೆಯಲ್ಲಿಯೇ ಈದ್‍ನ ‘ವಾಜೀಬ್’ ನಮಾಜ್ ನಿರ್ವಹಿಸಿದರು.

‘ಕೊರೊನಾ ಸಂಕಷ್ಟದಿಂದ ರಾಜ್ಯ, ದೇಶ, ಜಗತ್ತು ಸೇರಿದಂತೆ ಮನುಷ್ಯರನ್ನು ಪಾರುಮಾಡುವಂತೆ’ ಅಲ್ಲಾಹುವಿನಲ್ಲಿ ವಿಶೇಷವಾಗಿ ಬೇಡಿಕೊಂಡರು.

ಮಕ್ಕಳು, ಮಹಿಳೆಯರು, ಹಿರಿಯರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಕೇವಲ ತಮ್ಮ ಆಪ್ತರನ್ನು ಮನೆಗಳಿಗೆ ಆಹ್ವಾನಿಸಿ ಬಿರಿಯಾನಿ, ಸಿರಕುರುಮಾ ಸೇರಿದಂತೆ ವಿವಿಧ ಖಾದ್ಯ ಸವಿದರು.

ಪ್ರತಿ ಬಾರಿ ಈದ್ ಸಂದರ್ಭದಲ್ಲಿ ನಗರದ ಐತಿಹಾಸಿಕ ಶಾಹಿ ಈದ್ಗಾ, ದಖನಿ ಈದ್ಗಾ, ಜಾಮೀಯಾ ಮಸೀದಿ ಸೇರಿದಂತೆ ಎಲ್ಲೆಡೆಯೂ ಸಹಸ್ರಾರು ಜನರು ಒಂದೆಡೆ ಜಮಾಯಿಸಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದರು. ಪ್ರಾರ್ಥನೆ ಬಳಿಕ ಪರಸ್ಪರ ಆಲಿಂಗನ ಮಾಡಿ, ಕೈಕುಲುಕಿ ಹಬ್ಬದ ಶುಭಾಷಯ ಕೋರುತ್ತಿದ್ದರು. ನಂತರ ಬಂಧು-ಬಳಗ, ಸ್ನೇಹಿತರ ಮನೆಗೆ ತೆರಳಿ ಹಬ್ಬದ ಶುಭಾಷಯ ಕೋರುತ್ತಿದ್ದರು. ಆದರೆ, ಕೊರೊನಾ ಆತಂಕದಿಂದ ಕೈಕುಲುಕುವ ಮತ್ತು ತಬ್ಬಿಕೊಳ್ಳುವ ಸಂಪ್ರದಾಯದಿಂದ ದೂರ ಉಳಿದರು. ಎಲ್ಲರೂ ಮೊಬೈಲ್ ಫೋನ್‌ ಮೂಲಕ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.

ತುಂಬಿ ತುಳುಕುತ್ತಿದ್ದ ಮಸೀದಿಗಳು ಜನರಿಲ್ಲದೇ ಖಾಲಿಯಾಗಿದ್ದವು. ಮಸೀದಿಗಳಲ್ಲಿ ಕೇವಲ ಮೌಲ್ವಿಗಳು, ಮುಖಂಡರು ಮಾತ್ರವೇ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು.

ಪ್ರತಿ ಹಬ್ಬದ ಸಂಭ್ರಮದಲ್ಲಿಯೂ ಮುಸ್ಲಿಂ ಬಾಂಧವರು ಹೊಸ ಬಟ್ಟೆ ಧರಿಸಿ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್...' ಎಂದು ತಕರೀರ್ ಹೇಳುತ್ತಾ ಮಸೀದಿಗಳಿಗೆ ಹೆಜ್ಜೆ ಹಾಕುತ್ತಿದ್ದರು. ಆದರೆ, ಈ ಬಾರಿ ಈ ಯಾವುದೇ ದೃಶ್ಯಾವಳಿಗಳು ಕಂಡುಬರಲಿಲ್ಲ.

ಈದ್-ಉಲ್-ಫಿತ್ರ್‌ ಹಬ್ಬದ ಅಂಗವಾಗಿ ಪ್ರತಿಬಾರಿಯೂ ಮನೆಮನೆಯಲ್ಲಿಯೂ ಔತಣ ಕೂಟಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ, ಈ ಬಾರಿ ಯಾವುದೇ ಇಫ್ತಾರ್‌ ಕೂಟಗಳು ನಡೆಯಲಿಲ್ಲ. ಈದ್‌ ಸಂಭ್ರಮ ಮನೆಗಷ್ಟೇ ಸೀಮಿತವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು