ಬುಧವಾರ, ಸೆಪ್ಟೆಂಬರ್ 30, 2020
23 °C
ವಿಜಯಪುರ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಾಳೆ

ವಿಜಯಪುರ: ಕಾಂಗ್ರೆಸ್‌ನ ಪಿಂಟು, ಕಾವೇರಿ; ಪಕ್ಷೇತರ ಕಾಳೆ ಪೈಪೋಟಿ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಿಜಯಪುರ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸ್ಥಾನಕ್ಕೆ ಆಗಸ್ಟ್‌ 5ರಂದು ಮಧ್ಯಾಹ್ನ 1ಕ್ಕೆ ಚುನಾವಣೆ ನಿಗದಿಯಾಗಿದೆ.

ಒಟ್ಟು 13 ಸದಸ್ಯ ಸ್ಥಾನವನ್ನು ಹೊಂದಿರುವ ವಿಜಯಪುರ ತಾಲ್ಲೂಕು ಪಂಚಾಯ್ತಿಯಲ್ಲಿ ಸದ್ಯ ಕಾಂಗ್ರೆಸ್‌ ಆರು, ಬಿಜೆಪಿ ಐದು, ಜೆಡಿಎಸ್‌ ಮತ್ತು ಪಕ್ಷೇತರ ತಲಾ ಒಂದು ಸದಸ್ಯ ಬಲ ಹೊಂದಿವೆ. ಯಾವೊಂದು ಪಕ್ಷವೂ ಬಹುಮತ ಹೊಂದಿಲ್ಲ. ಆದರೆ, ಅತಿ ಹೆಚ್ಚು ಸ್ಥಾನ ಹೊಂದಿರುವ ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಮತ್ತು ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಉಪಾಧ್ಯಕ್ಷ ಸ್ಥಾನವನ್ನು ಕೈವಶ ಮಾಡಿಕೊಳ್ಳಲು ತಂತ್ರ ರೂಪಿಸಿದೆ.

ವಿಜಯಪುರ ತಾಲ್ಲೂಕು ಪಂಚಾಯ್ತಿಯ ಹಾಲಿ ಉಪಾಧ್ಯಕ್ಷರಾಗಿದ್ದ ಸುಷ್ಮಾ ಜೆಂಡೆ ಅವರು ಪ್ರತಿನಿಧಿಸುವ ಟಕ್ಕಳಕಿ ಕ್ಷೇತ್ರವು ತಿಕೋಟಾ ತಾಲ್ಲೂಕು ಪಂಚಾಯ್ತಿಗೆ ಸೇರ್ಪಡೆಯಾದ ಕಾರಣ ಅವರು ರಾಜೀನಾಮೆ ನೀಡಿರುವ ಸ್ಥಾನಕ್ಕೆ ಇದೀಗ ಚುನಾವಣೆ ನಡೆಯುತ್ತಿದೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಮುಖನಾಪುರ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಪಿಂಟು(ಪಾಂಡುರಂಗ ಗೋಪು ರಾಠೋಡ), ಗುಣಕಿ ಕ್ಷೇತ್ರದ ಸದಸ್ಯೆ ಕಾವೇರಿ ಶ್ರೀಶೈಲ ಹೊಸಮನಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಅಲಿಯಾಬಾದ್‌ ಕ್ಷೇತ್ರದ ಬಿಜೆಪಿ ಸದಸ್ಯ ಉತ್ತಮ ವೇಣು ನಾಯಕ ಅವರು ಸಹ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಹಿಟ್ಟಿನಹಳ್ಳಿ ಕ್ಷೇತ್ರದ ಪಕ್ಷೇತರ ಸದಸ್ಯ ಶಿವಪ್ಪ ಕಾಳೆ ಮತ್ತು ಶಿವಣಗಿ ಕ್ಷೇತ್ರದ ಜೆಡಿಎಸ್‌ ಸದಸ್ಯ ಸಲೀಂ ಗೂಡುಸಾಬ ಕರ್ನಾಳ ಅವರು ಕಾಂಗ್ರೆಸ್‌ ಬೆಂಬಲಿಸುವ ಸಾಧ್ಯತೆ ದಟ್ಟವಾಗಿದೆ. ಕಾಳೆ ಅವರು ಸಹ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ಹಾಲಿ ಅಧ್ಯಕ್ಷ ಕಾಳಪ್ಪ ಬಾಪೂರಾವ್‌ ಬೆಳ್ಳುಂಡಗಿ ಅವರು ಇನ್ನುಳಿದ ಅವಧಿಗೂ ಮುಂದುವರಿಯಲಿದ್ದಾರೆ.

ಹಂಚಿಹೋದ ವಿಜಯಪುರ ತಾ.ಪಂ

ವಿಜಯಪುರ: ಹೊಸ ತಾಲ್ಲೂಕುಗಳು ರೂಪುಗೊಂಡ ಬಳಿಕ ವಿಜಯಪುರ ತಾಲ್ಲೂಕು ಪಂಚಾಯ್ತಿಯ ಒಟ್ಟು 40 ಸ್ಥಾನಗಳ ಪೈಕಿ 13 ಕ್ಷೇತ್ರಗಳು ತಿಕೋಟಾ ಮತ್ತು 14 ಕ್ಷೇತ್ರಗಳು ಬಬಲೇಶ್ವರ ತಾಲ್ಲೂಕು ಪಂಚಾಯ್ತಿಗೆ ಹಂಚಿಕೆಯಾಗಿದ್ದು, ಇನ್ನುಳಿದ 13 ಕ್ಷೇತ್ರಗಳು ಮಾತ್ರ ಮೂಲ ವಿಜಯಪುರ ತಾಲ್ಲೂಕು ಪಂಚಾಯ್ತಿಯಲ್ಲಿ ಉಳಿದುಕೊಂಡಿವೆ.

ಅಖಂಡ ವಿಜಯಪುರ ತಾಲ್ಲೂಕು ಪಂಚಾಯ್ತಿಯ ಒಟ್ಟು 40 ಸ್ಥಾನಗಳ ಪೈಕಿ 21 ಕಾಂಗ್ರೆಸ್‌, 16 ಬಿಜೆಪಿ, ಜೆಡಿಎಸ್‌ 2 ಮತ್ತು ಪಕ್ಷೇತರ 1 ಸದಸ್ಯ ಬಲಹೊಂದಿತ್ತು.

ಈಗಾಗಲೇ ತಿಕೋಟಾ ಮತ್ತು ಬಬಲೇಶ್ವರ ತಾಲ್ಲೂಕು ಪಂಚಾಯ್ತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ತಿಕೋಟಾ ಕಾಂಗ್ರೆಸ್‌ ಮತ್ತು ಬಬಲೇಶ್ವರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿವೆ. 

ಉಳಿದಿರುವ ಕ್ಷೇತ್ರಗಳು: ವಿಜಯಪುರ ತಾಲ್ಲೂಕು ಪಂಚಾಯ್ತಿ ಮೂರು ಭಾಗವಾಗಿ ಹಂಚಿಕೆಯಾದ ಬಳಿಕ ನಾಗಠಾಣ, ಅಲಿಯಾಬಾದ್‌, ಜಂಬಗಿ, ಆಹೇರಿ, ಶಿವಣಗಿ, ಹಡಗಲಿ, ಮದಬಾವಿ, ಹೊನ್ನುಟಗಿ, ಹಿಟ್ಟಿನಹಳ್ಳಿ, ಜುಮನಾಳ, ಕನ್ನೂರ, ಮುಖನಾಪುರ ಮತ್ತು ಗುಣಕಿ ಕ್ಷೇತ್ರಗಳು ಮಾತ್ರ ವಿಜಯಪುರ ತಾಲ್ಲೂಕು ಪಂಚಾಯ್ತಿಯಲ್ಲಿ  ಉಳಿದುಕೊಂಡಿವೆ. 

***

ವಿಜಯಪುರ ತಾ.ಪಂ.ಉಪಾಧ್ಯಕ್ಷ ಸ್ಥಾನದ ಬಗ್ಗೆ ಚರ್ಚಿಸಲು ಆಗಸ್ಟ್‌ 4ರಂದು ಬೆಳಿಗ್ಗೆ 11ಕ್ಕೆ ಸಭೆ ಕರೆಯಲಾಗಿದೆ. ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲಾಗುವುದು

–ಪ್ರೊ.ರಾಜು ಅಲಗೂರ, ಅಧ್ಯಕ್ಷ, ಕಾಂಗ್ರೆಸ್‌ ಜಿಲ್ಲಾ ಘಟಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು