ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚರಕ ಸುತ್ತಿದ್ದರಿಂದಲ್ಲ, ನೇತಾಜಿ ಭಯದಿಂದ ದೇಶಕ್ಕೆ ಸ್ವಾತಂತ್ರ್ಯ: ಯತ್ನಾಳ

Published 15 ಆಗಸ್ಟ್ 2024, 13:17 IST
Last Updated 15 ಆಗಸ್ಟ್ 2024, 13:17 IST
ಅಕ್ಷರ ಗಾತ್ರ

ವಿಜಯಪುರ: ‘ಕೇವಲ ಚರಕ ಸುತ್ತುವುದರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಗಲಿಲ್ಲ. ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಭಯಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಗಾಂಧೀಜಿ ಮಹಾತ್ಮನಲ್ಲ. ಹಾಗೆ ಕರೆಯಬಾರದೆಂದು ಡಾ.ಬಿ.ಆರ್.ಅಂಬೇಡ್ಕರ್ ಅಂದೇ ಹೇಳಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ವಾರ್ಡ್‌ ನಂ.35 ರಲ್ಲಿ ಬರುವ ನೇತಾಜಿ ಸುಭಾಶ್ಚಂದ್ರ ಬೋಸ್ ಮಾರ್ಗದಲ್ಲಿ ನೂತನವಾಗಿ ನಿರ್ಮಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವೃತ್ತದಲ್ಲಿ ನೇತಾಜಿ ಪುತ್ಥಳಿ ಅನಾವರಣಗೊಳಿಸುವ ಮೂಲಕ ವೃತ್ತ ಲೋಕಾರ್ಪಣೆಗೊಳಿಸಿ ಮಾತನಾಡಿದರು.

‘ಶ್ರೀಮಂತರಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಇಂದಿನ ಐಎಎಸ್‌ಗೆ ಸಮವಾದ ಐಸಿಎಸ್ ತ್ಯಜಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಬಲಿಷ್ಠ ಸೈನ್ಯ ಹುಟ್ಟು ಹಾಕಿ ಶ್ರಮಿಸಿದ ಮಹಾನ್ ನಾಯಕ’ ಎಂದು ಬಣ್ಣಿಸಿದರು.

‘ಬೋಸ್ ಅವರನ್ನು ನಿರಂತರವಾಗಿ ತುಳಿಯುತ್ತಲೇ ಬರಲಾಯಿತು. ಇಲ್ಲಿಯವರೆಗೂ ಅವರ ಸಾವಿನ ನಿಖರತೆ ಸಹ ತಿಳಿದಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರೀ ಅವರು ರಷ್ಯಾದಲ್ಲಿ ಹೇಗೆ ನಿಧನರಾದರು ಎನ್ನುವುದು ತಿಳಿಯದೆ ಇರುವುದು ನೋವಿನ ಸಂಗತಿ’ ಎಂದರು.

‘ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯವನ್ನು ಬಿಜೆಪಿ, ಹಿಂದು ಸಂಘಟನೆಗಳು ಬಿಟ್ಟರೇ ಬೇರೆ ಯಾರು ಖಂಡಿಸಲಿಲ್ಲ. ರಾಹುಲ್ ಗಾಂಧಿ ಹೊಸ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದರೆ, ಮೋದಿಯವರು ಅಭಿನಂದನೆ ಜೊತೆಗೆ ಅಲ್ಲಿನ ಹಿಂದೂಗಳು, ಸಿಖ್ಖರು, ಕ್ರೈಸ್ತರ ರಕ್ಷಣೆ ನಿಮ್ಮ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದ್ದಾರೆ’ ಎಂದರು.

‘ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ದಲಿತ ಸಮುದಾಯವರು ನೂರಾರು ವರ್ಷಗಳಿಂದ ವಾಸಿಸುತ್ತಿರುವ ಮನೆಗಳ ಹತ್ತಿರದ ಕಂದಾಯ ಇಲಾಖೆಯ ಏಳು ಎಕರೆ ಆಸ್ತಿಯನ್ನು ವಕ್ಫ್ ಆಸ್ತಿಯಾಗಿ ಮಾಡಿಕೊಂಡಿರುವುದನ್ನು, ಕರ್ನಾಟಕ ಸ್ಲಂ ಬೋರ್ಡ್‌ ಎಂದು ಉತಾರೆ ಮಾಡಿಕೊಡಿ, ಅಲ್ಲಿ ದಲಿತರಿಗಾಗಿ 200 ಆಶ್ರಯ ಮನೆಗಳನ್ನು ನಿರ್ಮಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಿರುವೆ’ ಎಂದರು.

‘ಜಗತ್ತಿನ ಯಾವ ಶಕ್ತಿ ಅಡ್ಡ ಬಂದರೂ ಮನಗೂಳಿ ಅಗಸಿ, ಬಳಿ ದಲಿತರಿಗಾಗಿ ಮನೆಗಳನ್ನು ಕಟ್ಟುವೆ. ಅದಕ್ಕೆ ಡಾ.ಅಂಬೇಡ್ಕರ್ ನಗರ ಅಂತ ಹೆಸರನ್ನೇ ಇಡುವೆ’ ಎಂದು ಭರವಸೆ ನೀಡಿದರು.

ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕುರಿಯವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೃತ್ತ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಕಾಳಿದಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಜಿದ್ದಿ ಸೇರಿದಂತೆ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.

ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ಮಹೇಶ ಒಡೆಯರ, ಮುಖಂಡರಾದ ರಾಜೇಶ ದೇವಗಿರಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ನೇತಾಜಿ ಸುಭಾಷ್ ಚಂದ್ರ ಬೋಸ್ ಸಾಮಾಜಿಕ ಸೇವಾ ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಪಾಟೀಲ, ಸಂಘಟನಾ ಕಾರ್ಯದರ್ಶಿ ಆನಂದ ಹಂಜಿ, ಪ್ರವಚನಕಾರ ಬಾಬುರಾವ್ ಮಹಾರಾಜ್, ರೇವಣಸಿದ್ದ ಮುಳಸಾವಳಗಿ,  ಮರನೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT