ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೌಗೋಳಿಕ ಮಾನ್ಯತೆ: ಇಂಡಿ ನಿಂಬೆಗೆ ಬೇಡಿಕೆ; 5 ಲಕ್ಷಕ್ಕೂ ಹೆಚ್ಚು ಸಸಿಗಳ ಮಾರಾಟ

Published 30 ಆಗಸ್ಟ್ 2024, 4:48 IST
Last Updated 30 ಆಗಸ್ಟ್ 2024, 4:48 IST
ಅಕ್ಷರ ಗಾತ್ರ

ಇಂಡಿ: ನಿಂಬೆ ಉತ್ಪಾದನೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿರುವ ಇಂಡಿ ತಾಲ್ಲೂಕಿನ ನಿಂಬೆ ಸಸಿಗಳಿಗೆ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಿದೆ.

ಇಲ್ಲಿನ ಲಿಂಬೆಗೆ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್‌) ದೊರೆತ ಬಳಿಕ ಬೇಡಿಕೆ ವೃದ್ಧಿಸಿದ್ದು, ಈ ವರ್ಷ ಇಂಡಿ ಭಾಗದಿಂದ 5 ಲಕ್ಷಕ್ಕೂ ಹೆಚ್ಚಿನ ಸಸಿಗಳು ಮಾರಾಟವಾಗಿವೆ.

ವಿಜಯಪುರ, ಕಲಬುರಗಿ, ಬಾಗಲಕೋಟೆ, ಲಿಂಗಸುಗೂರು, ರಾಯಚೂರು, ಹುಬ್ಬಳ್ಳಿ, ಸವದತ್ತಿ, ಮಹಾರಾಷ್ಟ್ರದ ಸೋಲಾಪುರ, ಪಂಢರಪುರ, ಉಸ್ಮಾನಾಬಾದ್ ಮತ್ತು ಆಂಧ್ರಪ್ರದೇಶದ ಕರ್ನೂಲ್, ತಮಿಳನಾಡಿನಲ್ಲಿ  ಸಸಿಗಳು ಮಾರಾಟವಾಗಿವೆ.

ಹೊರರಾಜ್ಯಗಳಿಗೆ ಪ್ರತ್ಯೇಕ ವಾಹನಗಳಲ್ಲಿ ಸಸಿಗಳನ್ನು ಸಾಗಣೆ ಮಾಡಿದರೆ, ರಾಜ್ಯದ ವಿವಿಧ ಜಿಲ್ಲೆಗಳಿಗೆ ಬಸ್‌ಗಳಲ್ಲಿ ಸಾಗಿಸಲಾಗುತ್ತದೆ. ವಿಜಯಪುರ ಜಿಲ್ಲೆಯ ಸುತ್ತಮುತ್ತಲ ಬೇಡಿಕೆ ಇರುವ ಪ್ರದೇಶಗಳಿಗೆ ಸಣ್ಣಪುಟ್ಟ ವಾಹನಗಳಲ್ಲಿ ತಲುಪಿಸಲಾಗುತ್ತದೆ.

ರೈತರಿಂದ ಸಸಿಗಳ ಮಾರಾಟ:

ಇಂಡಿ ತಾಲ್ಲೂಕಿನಲ್ಲಿ ಕೆಲ ರೈತರು ನಿಂಬೆ ಬೆಳೆ ಜೊತೆ 1 ರಿಂದ 2 ಎಕರೆ ಜಮೀನು ಮೀಸಲಿಟ್ಟು, ನಿಂಬೆ ಸಸಿಗಳನ್ನು ಬೆಳೆಸುತ್ತಾರೆ. ಪೋಷಕಾಂಶವುಳ್ಳ ಗೊಬ್ಬರ ಬಳಸಿ, ಮಣ್ಣು ಹದ ಮಾಡುತ್ತಾರೆ. ಸಸಿ ಹೊರ ತೆಗೆಯುವಾಗ ಬೇರು ಕತ್ತರಿಸದಂತೆ ಮುಂಜಾಗ್ರತೆ ವಹಿಸುತ್ತಾರೆ. ಗುಣಮಟ್ಟದ ಸಸಿಗಳನ್ನು ಬೆಳೆಸಿ, ಮಾರುತ್ತಾರೆ. ಕೆಲ ರೈತರು ಒಂದು ವರ್ಷದ ಸಸಿಗೆ ₹15, ಎರಡು ವರ್ಷದ ಸಸಿಗೆ ₹25, ಕೆಲವರು  ದೊಡ್ಡ ಪಾಕೆಟ್‌ಗಳಲ್ಲಿ ಸಸಿಗಳನ್ನು ಜೋಡಿಸಿಟ್ಟು, ₹100ಗೆ ಒಂದರಂತೆ ಮಾರಿದ್ದಾರೆ.

ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ ರೈತ ಬೀರಪ್ಪ ವಗ್ಗಿ, ಸಾಲೋಟಗಿ ಗ್ರಾಮದ ಈರಕಾರ ಪೂಜಾರಿ, ಬೆನಕನಹಳ್ಳಿಯ ರಾಜಶೇಖರ ನಿಂಬರಗಿ, ರೂಗಿಯ ಹಣಮಂತ ಮಸಳಿ, ಸಂಜಯ ದಳವಾಯಿ, ಸೋಮು ಬೇನೂರ, ಹೊನ್ನಪ್ಪ ದಳವಾಯಿ, ಸುರೇಶ ದಳವಾಯಿ, ಲಕ್ಷ್ಮಣ ಹೊಟಗಿ ಅವರು ಸಸಿಗಳನ್ನು ಮಾರಿ, ಆದಾಯ ಗಳಿಸಿದ್ದಾರೆ.

ಇಂಡಿ ನಿಂಬೆ ಬೆಳೆಗಾರರು 5 ಲಕ್ಷಕ್ಕೂ ಹೆಚ್ಚು ಸಸಿ ಬೆಳೆದಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಆಲಮಟ್ಟಿ ಸೇರಿ ಸುತ್ತಮುತ್ತ ನಿಂಬೆ ಸಸಿ ಮಾರಲಾಗುತ್ತಿದೆ
ಎಚ್.ಎಸ್.ಪಾಟೀಲಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ 
1 ಎಕರೆ ನಿಂಬೆ ಬೆಳೆಗೆ ಮಳೆಗಾಲದಲ್ಲಿ 1 ವಾರಕ್ಕೆ ₹ 2 ಸಾವಿರದಿಂದ ₹ 5 ಸಾವಿರ. ಬೇಸಿಗೆಯಲ್ಲಿ ಒಂದು ವಾರಕ್ಕೆ ₹10 ಸಾವಿರ ಆದಾಯ ಬರುತ್ತದೆ.
ಎ.ಎಸ್.ಗಾಣಿಗೇರ ರೈತ
ಇಂಡಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಿಂಬೆ ಸಸಿಗಳ ಮಾರಾಟ ಮತ್ತು ಬೆಳೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಇದರಿಂದ ರೈತರಿಗೆ ಉಪಯುಕ್ತವಾಗಿದೆ.
ಡಾ.ಹೀನಾ ಕೃಷಿ ವಿಜ್ಞಾನಿ ಕೃಷಿ ವಿಜ್ಞಾನ ಕೇಂದ್ರ
ನಿಂಬೆ ಅಭಿವೃದ್ದಿ ಮಂಡಳಿಯಿಂದ ಶೀತಲೀಕರಣ ಘಟಕ ಸ್ಥಾಪಿಸಲಾಗುತ್ತಿದೆ. ರೈತರಿಗೆ ಇದರಿಂದ ನಿಶ್ಚಿತವಾಗಿ ಪ್ರಯೋಜನವಾಗಲಿದೆ.
ರಾಹುಲಕುಮಾರ ಭಾವಿದೊಡ್ಡಿ ವ್ಯವಸ್ಥಾಪಕ ನಿರ್ದೇಶಕ ನಿಂಬೆ ಅಭಿವೃದ್ಧಿ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT