ಬುಧವಾರ, ಜೂನ್ 29, 2022
24 °C
ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯಿಂದ ಆನ್‌ಲೈನ್‌ ಪ್ರತಿಭಟನೆ

ವಿಜಯಪುರ: ಸೇವಾ ಭದ್ರತೆಗೆ ಅತಿಥಿ ಉಪನ್ಯಾಸಕರ ಆಗ್ರಹ, ಆನ್‌ಲೈನ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ ಜಿಲ್ಲೆಯಲ್ಲಿ ಅತಿಥಿ ಉಪನ್ಯಾಸಕರು ಗುರುವಾರ ಆನ್‌ಲೈನ್‌ ಪ್ರತಿಭಟನೆ ನಡೆಸಿದರು

ವಿಜಯಪುರ: ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು, ಲಾಕ್‍ಡೌನ್ ಅವಧಿಯ ಪ್ಯಾಕೇಜ್ ಘೋಷಿಸಬೇಕು, ಕೋವಿಡ್‌ನಿಂದ ಮೃತರಾದ ಎಲ್ಲರಿಗೂ ಸೂಕ್ತ ಪರಿಹಾರ ಒದಗಿಸಬೇಕು. ಈಗ ನಡೆಯುತ್ತಿರುವ ಆನ್‌ಲೈನ್‌ ತರಗತಿಗಳಿಗೆ ಈ ಹಿಂದೆ ನೇಮಿಸಿದ್ದ ಎಲ್ಲಾ ಉಪನ್ಯಾಸಕರನ್ನೂ ನಿಯೋಜಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ಜಿಲ್ಲೆಯಲ್ಲಿ ಆನ್‌ಲೈನ್‌ ಪ್ರತಿಭಟನೆ ನಡೆಸಲಾಯಿತು.

ರಾಜ್ಯದ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ 14,447 ಅತಿಥಿ ಉಪನ್ಯಾಸಕರು ಕೋವಿಡ್ ಎರಡನೇ ಅಲೆಯ ಲಾಕ್‍ಡೌನ್‍ನಿಂದಾಗಿ ಸೂಕ್ತ ಸೇವಾ ಭದ್ರತೆಯಿಲ್ಲದೇ ಪರದಾಡುವಂತಾಗಿದೆ. ಕಾಲೇಜುಗಳ ರಜೆಘೋಷಣೆಯ ಹಿನ್ನೆಲೆಯಲ್ಲಿ ಕೆಲಸದ ಹೊರೆಯಿಲ್ಲವೆಂದು ಹೇಳಿ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಆದರೆ, ಈಗ ಆನ್‍ಲೈನ್ ತರಗತಿಗಳಿಗೂ ಎಲ್ಲರನ್ನೂ ಸಂಪೂರ್ಣವಾಗಿ ನೇಮಿಸಿಕೊಂಡಿಲ್ಲ. ಲಾಕ್‍ಡೌನ್ ಪರಿಹಾರ ಪ್ಯಾಕೇಜ್ ಅನ್ನೂ ನೀಡಿಲ್ಲ. ಕೋವಿಡ್‍ನಿಂದ ಮೃತರಾದವರ ಕುಟುಂಬಕ್ಕೆ ಯಾವುದೇ ಪರಿಹಾರವನ್ನೂ ನೀಡಿಲ್ಲ ಎಂದು ಆರೋಪಿಸಿದರು.

ಉನ್ನತ ಶಿಕ್ಷಣ ಇಲಾಖೆ ಆನ್‍ಲೈನ್ ತರಗತಿಗಳಿಗೂ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಹೇಳಿದ್ದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ಹಾಗೂ ಹಲವು ಬಾರಿ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಕೊರೊನಾ ಅವಧಿಯ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಕೊರೊನಾದಿಂದಾಗಿ ಮೃತ ಪಟ್ಟ ಅತಿಥಿ ಉಪನ್ಯಾಸಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನಿಧಿ ಒದಗಿಸಿಲ್ಲ. ಅತಿಥಿ ಉಪನ್ಯಾಸಕರಿಗೆ ಇಲ್ಲಿಯವರೆಗೂ ಯಾವುದೇ ರೀತಿಯ ಸೇವಾ ಭದ್ರತೆ ಖಾತ್ರಿಪಡಿಸಿಲ್ಲ. ಇದು ಸರ್ಕಾರದ ಅತ್ಯಂತ ನಿರ್ಲಕ್ಷ್ಯ ಧೋರೆಣೆಯಾಗಿದೆ. ಇದರಿಂದಾಗಿ ಕುಟುಂಬಗಳು ಬೀದಿಗೆ ಬರುವಂತಾಗಿದೆ ಎಂದು ದೂರಿದರು.

ಅತಿಥಿ ಉಪನ್ಯಾಸಕರ ಹೋರಾಟ ಸಮತಿ ರಾಜ್ಯ ಸಂಚಾಲಕರ ಸಿದ್ದಲಿಂಗ ಬಾಗೇವಾಡಿ, ವಿಜಯಪುರ ಜಿಲ್ಲೆಯ ಅತಿಥಿ ಉಪನ್ಯಾಸಕರಾದ ಪ್ರೊ.ರಾಜು ಬಿ. ಕಪಾಲಿ, ಶಿವಾನಂದ ಸಿಂಹಾಸನಮಠ, ಡಾ. ಎಸ್.ಎಸ್. ಅಂಗಡಿ, ಸುರೇಶ ಡಬ್ಬಿ, ರುದ್ರಪ್ಪ ಚಲವಾದಿ, ಸುರೇಖಾ ಪಾಟೀಲ, ಡಾ. ಸಂತೋಷ ಹೊಸಮನಿ, ಡಾ. ನಾರಾಯಣ ಅರುಂಡೆಕರ್, ಸಿ.ಎಂ.ಗಣಿ, ಮಹೇಶ ಕಲ್ಲೂರ, ನೀಲಕಂಠ ಎಸ್. ಹಳ್ಳಿ, ಮಹಾದೇವಿ ಹತ್ತಿ, ರೋಹಿಣಿ ಜತ್ತಿ, ಸವಿತಾ ಜಿ. ಬೋಸಲೆ, ಶಬ್ಬಿರ ಮುಜಾವರ, ಡಾ. ಆರ್. ಬಿ. ಕುಮಟಗಿ, ರಾಜಕುಮಾರ ದಾಯಗೊಂಡ, ಡಾ. ರಮೇಶ ತೇಲಿ, ಸಂಗಮೇಶ ಪಟ್ಟಣದ ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು