ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕಮಾಂಡ್‌ ಸೂಚನೆ ಮೇರೆಗೆ ದೇವೇಗೌಡ–ಬೊಮ್ಮಾಯಿ ಭೇಟಿ: ಬಸನಗೌಡ ಪಾಟೀಲ ಯತ್ನಾಳ

Last Updated 2 ಆಗಸ್ಟ್ 2021, 14:35 IST
ಅಕ್ಷರ ಗಾತ್ರ

ವಿಜಯಪುರ: ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದಾರೆ ಎಂದುಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಡಿಯೂರಪ್ಪ ಹೇಳಿದಂತೆ ಬೊಮ್ಮಾಯಿ ಕೇಳದಿದ್ದರೆ ರಾಜ್ಯ ಸರ್ಕಾರವನ್ನು ಅವರು ಅಸ್ಥಿರಗೊಳಿಸುವ ಸಾಧ್ಯತೆ ಇದೆ. ಅಂತಹ ಸಂದರ್ಭ ಎದುರಾದರೆ ಜೆಡಿಎಸ್‌ ಬೆಂಬಲ ಪಡೆಯಲಾಗುವುದು ಎಂಬ ಸಂದೇಶವನ್ನು ರವಾನಿಸುವ ಉದ್ದೇಶದಿಂದಲೇ ವರಿಷ್ಠರು ಬೊಮ್ಮಾಯಿ–ದೇವೇಗೌಡರನ್ನು ಭೇಟಿ ಮಾಡಿಸಿದ್ದಾರೆ ಎಂದು ಹೇಳಿದರು.

‘ಬೊಮ್ಮಾಯಿ ಸರ್ಕಾರಕ್ಕೆ ಸಂಕಷ್ಟ ಎದುರಾದರೆ ತಮ್ಮ ಪಕ್ಷ ಬೆಂಬಲಕ್ಕೆ ನಿಲ್ಲಲಿದೆ’ ಎಂದು ಈ ಕಾರಣಕ್ಕಾಗಿಯೇ ದೇವೇಗೌಡರು ಘೋಷಿಸಿರುವುದು ಎಂದು ಯತ್ನಾಳ ತಿಳಿಸಿದರು.

ಒಂದು ವೇಳೆ 10–20 ಮಂದಿ ಶಾಸಕರು ಯಡಿಯೂರಪ್ಪನವರ ಜೊತೆ ಹೋದರೆ ದೇವೇಗೌಡ, ಕುಮಾರಸ್ವಾಮಿ ಅವರು ಬೊಮ್ಮಾಯಿ ಸರ್ಕಾರಕ್ಕೆ ಬೇಷರತ್‌ ಬೆಂಬಲ ನೀಡುವ ಸಾಧ್ಯತೆ ಇದೆ ಎಂದರು.

ಬೊಮ್ಮಾಯಿ ಸರ್ಕಾರಕ್ಕೆ ಚೂರಿ ಹಾಕಬೇಡಿ:ಬೊಮ್ಮಾಯಿ ಸರ್ಕಾರದ ಬೆನ್ನಿಗೆ ಚೂರಿ ಹಾಕಿ ಇಳಿಸುವ ಕೆಲಸ ಯಾವುದೇ ಕಾರಣಕ್ಕೂ ಮಾಡಬಾರದು.ರಾಜ್ಯ ಬಿಜೆಪಿಯಲ್ಲಿ ಎರಡನೇ ಹಂತದ ನಾಯಕತ್ವ ಬೆಳೆದಿದೆ. ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ರಾಜ್ಯ ಸರ್ಕಾರಕ್ಕೆ ಅಗತ್ಯ ಸಲಹೆ, ಸಹಕಾರ, ಮಾರ್ಗದರ್ಶನ ನೀಡುತ್ತಾ, ಕೊನೆ ಉಸಿರು ಇರುವವರೆಗೆ ತಮ್ಮ ಮೊಮ್ಮಕ್ಕಳು, ಮರಿ ಮೊಮ್ಮಕ್ಕಳನ್ನು ಆಡಿಸುತ್ತ ನಿವೃತ್ತಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಯಡಿಯೂರಪ್ಪ ಅವರು ತಮ್ಮ ಮಗನನ್ನು ಉತ್ತರಾಧಿಕಾರಿಯಾಗಿ ಮಾಡುವ ಸಲುವಾಗಿಯೇ ಹೈಕಮಾಂಡ್ ಬಳಿ ಹಠಹಿಡಿದು ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ತಾತ್ಕಾಲಿಕವಾಗಿ ನಿಯೋಜನೆ ಮಾಡಿಸಿಕೊಂಡು ಬಂದರು. ಆದರೆ, ಅದು ನಡೆಯುವ ಸಾಧ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟರು.

ನನ್ನನ್ನು ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ:ಪಕ್ಷ ನನ್ನನ್ನು ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. ನನ್ನನ್ನು ಸದುಪಯೋಗ ಪಡಿಸಿಕೊಂಡರೇ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಿಸಿಕೊಂಡು ಬರುತ್ತೇನೆ. ಇದು ನನ್ನ ಬಹಿರಂಗ ಸವಾಲು ಎಂದು ಹೇಳಿದರು.

ನಾನು ಸಚಿವ ಸ್ಥಾನದ ಆಕಾಂಕ್ಷಿ. ಸಚಿವನಾಗಿ ಮಾತ್ರವಲ್ಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವಷ್ಟು ಸಮರ್ಥನಿದ್ದೇನೆ. ಆದರೆ, ಸಚಿವನಾಗಲು ನಾನು ಯಾರನ್ನೂ ಭೇಟಿ ಮಾಡಿಲ್ಲ, ಒತ್ತಡ ಹಾಕಿಲ್ಲ. ಈ ಬಾರಿ ವಿಜಯಪುರಕ್ಕೆ ಸಚಿವ ಸಂಪುಟದಲ್ಲಿ ಅವಕಾಶ ಲಭಿಸಲಿದೆ ಎಂಬ ವಿಶ್ವಾಸವಿದೆ ಎಂದರು.

ಪಕ್ಷದ ಹಿರಿಯ ಮುಖಂಡರಾದ ಕೆ.ಎಸ್‌.ಈಶ್ವರಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರಂತ ಅನುಭವಿ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದೇ ನಿರ್ಲಕ್ಷ್ಯ ಮಾಡಿ, ಭ್ರಷ್ಟರಿಗೆ, ಹೊಗಳುಭಟ್ಟರಿಗೆ ಅವಕಾಶ ನೀಡಬಾರದು ಎಂದು ಹೇಳಿದರು.

ಈಶ್ವರಪ್ಪ ನನ್ನ ಹಿತೈಷಿ:ಈಶ್ವರಪ್ಪ ಮತ್ತು ನಾನು ಆತ್ಮೀಯ ಸ್ನೇಹಿತರು. ಅವರು ಯಾವಾಗಲೂ ನನ್ನ ಹಿತ ಬಯಸುವವರು. ಅವರು ಏನೇ ಬೈಯ್ದಿದ್ದರೂ ನನ್ನ ಒಳಿತಿಗಾಗಿಯೇ ಹೇಳಿರುತ್ತಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT