ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಕಾರ್ಮಿಕರಿಗೆ ಆರೋಗ್ಯ ತಪಾಸಣೆ

Published 24 ಮೇ 2023, 16:21 IST
Last Updated 24 ಮೇ 2023, 16:21 IST
ಅಕ್ಷರ ಗಾತ್ರ

ವಿಜಯಪುರ: ಗ್ರಾಮೀಣ ಜನರ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಗ್ರಾಮ ಆರೋಗ್ಯ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ನರೇಗಾ ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುದ್ದೇಬಿಹಾಳ ತಾಲ್ಲೂಕು ಪಂಚಾಯ್ತಿ ನರೇಗಾ ಸಹಾಯಕ ನಿರ್ದೇಶಕ ಬಿ.ವೈ.ತಾಳಿಕೋಟಿ ಹೇಳಿದರು.

ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡ ಗ್ರಾಮದ ಕೆರೆ ಪಕ್ಕದಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿ ಸ್ಥಳದಲ್ಲಿ ಕರ್ನಾಟಕ ಆರೋಗ್ಯ ಸಂವರ್ಧನಾ ಸಂಸ್ಥೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಗ್ರಾಮ ಆರೋಗ್ಯ ಅಭಿಯಾನದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣರ ಹಾಗೂ ನರೇಗಾ ಕೂಲಿಕಾರರ ಆರೋಗ್ಯ ಸುಧಾರಣೆ ಜೊತೆಗೆ ಗ್ರಾಮದ ಆರೋಗ್ಯ ಸದೃಢಗೊಳ್ಳಬೇಕು ಎಂಬ ಉದ್ದೇಶದೊಂದಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮೇ 22 ರಿಂದ ಜೂನ್ 22ರ ವರೆಗೆ ಗ್ರಾಮ ಆರೋಗ್ಯ ಅಭಿಯಾನ ಹಮ್ಮಿಕೊಂಡಿದೆ ಎಂದರು.

ನರೇಗಾ ಯೋಜನೆಯಡಿ ನಡೆಯುತ್ತಿರುವ ಸಮುದಾಯ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ನರೇಗಾ ಕೂಲಿಕಾರರಿಗೆ ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಸ್ಥಳದಲ್ಲಿಯೇ ಬಿಪಿ, ಶುಗರ್, ಮಧುಮೇಹ, ಅತಿ ರಕ್ತದೊತ್ತಡದಂತಹ ಪ್ರಾಥಮಿಕ ಅಸಾಂಕ್ರಮಿಕ ಗುಣಲಕ್ಷಣಗಳನ್ನು ಪತ್ತೆ ಹಚ್ಚಿ ಸೂಕ್ತ ಸಮಾಲೋಚನೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಆರೋಗ್ಯ ಸಿಬ್ಬಂದಿ ನರೇಗಾ ಕಾಮಗಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸಿದ 120ಕ್ಕೂ ಹೆಚ್ಚು ಕೂಲಿಕಾರರ ಆರೋಗ್ಯ ತಪಾಸಣೆ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲವ್ವ ಚಲವಾದಿ, ನರೇಗಾ ಜಿಲ್ಲಾ ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಕೆ.ಎಚ್.ಪಿ.ಟಿ ಜಿಲ್ಲಾ ಸಂಯೋಜಕರಾದ ಡಿ.ಎಚ್.ನದಾಫ್, ಸಮುದಾಯ ಆರೋಗ್ಯ ಅಧಿಕಾರಿಗಳಾದ ಆಶ್ವಿನಿ ಚಲವಾದಿ, ಎಂ.ಎಂ.ಯಾಳವಾರ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಭಾರತಿ ಸಿನ್ನೂರ, ತಾಲ್ಲೂಕು ಐಇಸಿ ಸಂಯೋಜಕ ಪರಮೇಶ ಹೊಸಮನಿ, ಕೆ.ಎಚ್.ಪಿ.ಟಿ ತಾಲ್ಲೂಕು ಸಂಯೋಜಕ ಪ್ರಭುಗೌಡ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT