ಬುಧವಾರ, ಸೆಪ್ಟೆಂಬರ್ 29, 2021
20 °C
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಅಭಿಮತ

ಹೇಮರಡ್ಡಿ ಮಲ್ಲಮ್ಮ ಸಂದೇಶ ಬದುಕಿಗೆ ದಾರಿ ದೀಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮಾಂಬೆಯ ಸಂದೇಶಗಳು ಸಾರ್ವಕಾಲಿಕವಾದವುಗಳು ಅವು ನಮ್ಮ ಬದುಕಿಗೆ ದಾರಿ ದೀಪ ಅವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.

ತಾಳಿಕೋಟೆ ತಾಲ್ಲೂಕಿನ ಶರಣ ಸೋಮನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರು ಸೇರಿದಂತೆ ಎಲ್ಲ ಶರಣರು, ಸಂತರು, ಮಹಾತ್ಮರ ಸಂದೇಶಗಳು ಎಲ್ಲರಿಗೂ ಅನ್ವಯ ಆಗುತ್ತವೆ. ಅವು ಮನುಕುಲದ ಬೆಳಕಾಗಿವೆ. ಅವುಗಳ ಪರಿಪಾಲನೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಹೇಳಿದರು.

ಹೇಮರಡ್ಡಿ ಮಲ್ಲಮ್ಮಳ ಅಚಲ ಭಕ್ತಿ, ಸಹನಾ ಗುಣ ಸ್ತ್ರೀಕುಲಕ್ಕೆ ಮಾದರಿಯಾಗಿದೆ. ವೇಮನರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ ಎಂದರು.

ಕುಟುಂಬದ ಆದರ್ಶ ಪಾಲಿಸುವ ಮೂಲಕ ಹೇಮರಡ್ಡಿ ಮಲ್ಲಮ್ಮ ಮಹಿಳೆಯರಿಗೆ ಆದರ್ಶಪ್ರಾಯರಾಗಿದ್ದಾರೆ. ಮಹಿಳಾ ಕುಲದ ಅನರ್ಘ್ಯ ರತ್ನವಾಗಿ ಸಮಾಜಕ್ಕೆ ಬೆಳಕಾಗಿದ್ದಾರೆ ಎಂದು ಹೇಳಿದರು.

ಹೇಮರಡ್ಡಿ ಮಲ್ಲಮ್ಮ ಸಾಮಾನ್ಯ ಮಹಿಳೆಯಾಗಿದ್ದರು. ಅವರು ಅರಿವಿಗಿಂತ ಆಚಾರ ದೊಡ್ಡದು ಎಂದು ಸಾಧಿಸಿ ಪ್ರಪಂಚಕ್ಕೆ ತೋರಿಸಿ ಹೆಣ್ಣು ಕುಲಕ್ಕೆ ಮಾದರಿಯಾಗಿದ್ದಾರೆ ಎಂದರು.

ಸಂಸಾರದಲ್ಲಿದ್ದುಕೊಂಡು ಕುಟುಂಬದ ಸದಸ್ಯರ ಕಿರುಕುಳ ಸಹಿಸಿ ಅವರ ಅವಗುಣಗಳನ್ನು ಪ್ರೀತಿ, ಸಹನೆಯಿಂದ ತಿದ್ದಿ, ತೀಡಿ ಸರಿದಾರಿಗೆ ತರಬಹುದು ಎಂಬುದನ್ನು ಜಗತ್ತಿಗೆ ತೋರಿಸಿದ ಮಹಾಸಾದ್ವಿ ಶಿವ
ಶರಣೆ ಹೇಮರಡ್ಡಿ ಮಲ್ಲಮ್ಮ ಎಂದರು.

ಸಮಾಜದ ದುರ್ಬಲರ, ದೀನರ ಮತ್ತು ಅಸಹಾಯಕರಿಗೆ ನೆರವಾಗಬೇಕು. ಆಗ ಮಾತ್ರ ದೇಶದ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ತಿಳಿಸಿದರು.

ಪೂಜ್ಯರು, ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.