ನಿಡಗುಂದಿ: ತಾಲ್ಲೂಕು ಆಡಳಿತ ಹಾಗೂ ನಿಡಗುಂದಿ ಪೊಲೀಸರು ಜಂಟಿಯಾಗಿ ರಾಷ್ಟ್ರೀಯ ಹೆದ್ದಾರಿ-50ರ ಯಲಗೂರ ಕ್ರಾಸ್ ಹತ್ತಿರ ಬರುತ್ತಿದ್ದ ಲಾರಿ ಹಾಗೂ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪಡಿತರ ಅಕ್ಕಿಯನ್ನು ಭಾನುವಾರ ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು ಮೂಲದ ಲಾರಿಯಾಗಿದ್ದು, ಲಿಂಗಸೂರಿನ ಅಂಜನಾದ್ರಿ ಟ್ರೇಡರ್ಸ್‌ನಿಂದ ಪಡಿತರ ಅಕ್ಕಿಯುಳ್ಳ ಚೀಲ ತೆಗೆದುಕೊಂಡು ಗುಜರಾತ್ ರಾಜ್ಯಕ್ಕೆ ಲಾರಿ ಹೊರಟಿತ್ತು.
ಲಾರಿ ಚಾಲಕ ನಾಮಕಲ್ ಜಿಲ್ಲೆಯ ಪರಮತಿ ವೆಲ್ಲೂರ ತಾಲ್ಲೂಕಿನ ಕೊಡಚ್ಚೇರ ಗ್ರಾಮದ ಸರವಣ ಎಸ್ ಸಂಗೋಡನ ಎಂಬಾತನನ್ನು ಬಂಧಿಸಲಾಗಿದ್ದು, ಪೊಲೀಸರುಲಾರಿ ವಶಕ್ಕೆ ಪಡೆದಿದ್ದಾರೆ.
575 ಚೀಲ ಅಕ್ಕಿ: ಲಾರಿಯನ್ನು ವಶಕ್ಕೆ ಪಡೆದು ತೆಲಗಿಯ ಸರ್ಕಾರಿ ಗೋದಾಮಿನಲ್ಲಿ ತೂಕ ಮಾಡಿದಾಗ 575 ಚೀಲಗಳಲ್ಲಿ (ತಲಾ 50 ಕೆ.ಜಿ ತೂಕದ) 28,750 ಕೆ.ಜಿ ಅಕ್ಕಿ ಇರುವುದು ದೃಢಪಟ್ಟಿದೆ. ಇದರ ಒಟ್ಟು ಮೌಲ್ಯ ₹8.45 ಲಕ್ಷ ಎಂದು ನಿಡಗುಂದಿಯ ಆಹಾರ ನಿರೀಕ್ಷಕ ಸಂಜಯ ಕೃಷ್ಣಾರಾವ್ ಪಾಟೀಲ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ಆಗಸ್ಟ್ 3ರಂದು 30ಟನ್ ತೂಕದ 586 ಅಕ್ಕಿ ಚೀಲವನ್ನು ವಶಪಡಿಸಿಕೊಳ್ಳಲಾಗಿತ್ತು. ಆಗಲೂ ರಾಯಚೂರು ಜಿಲ್ಲೆಯ ಮಾನ್ವಿಯಿಂದ ಗುಜರಾತ್‌ಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡಲಾಗುತ್ತಿತ್ತು.
ತಹಶೀಲ್ದಾರ್ ಸತೀಶ ಕೂಡಲಗಿ ಮಾರ್ಗದರ್ಶನದಲ್ಲಿ ಆಹಾರ ನಿರೀಕ್ಷಕ ಸಂಜಯ ಪಾಟೀಲ, ಲೋಕೇಶ ಕುಪ್ಪಸ್ತ, ಅಪ್ಪಾಸಾಹೇಬ ಘಂಟಿ, ಪೊಲೀಸ್ ಕಾನ್ಸಟೇಬಲ್‌ಗಳಾದ ಬಿ.ಎಸ್. ಪತ್ರಿ, ವಿ.ಎಸ್. ಹಿರೇಮಠ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.