ವಿಜಯಪುರ: ಮುಸ್ಲಿಮರು ಶೈಕ್ಷಣಿವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದ ಕಾರಣಕ್ಕೆ ಚಿನ್ನಪ್ಪರೆಡ್ಡಿ ಆಯೋಗದ ಶಿಫಾರಸಿನ ಮೇರೆಗೆ ಶೇ 4 ರಷ್ಟು ಮೀಸಲಾತಿಯನ್ನು ಎಚ್.ಡಿ. ದೇವೇಗೌಡರ ಸರ್ಕಾರ ನೀಡಿತ್ತು. ಈ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಕಿತ್ತು ಕೊಂಡಿರುವುದು ಘೋರ ಅನ್ಯಾಯ ಮತ್ತು ಅಕ್ಷಮ್ಯ ಎಂದು ಕರ್ನಾಟಕ ಮುಲ್ಲಾ ಅಸೋಸಿಯೇಷನ್ ರಾಜ್ಯ ಸಲಹಾ ಸಮಿತಿ ಸದಸ್ಯ ಇಂಚಗೇರಿಯ ಡಾ. ಶಮಶರಲಿ ಸಿ. ಮುಲ್ಲಾ ಖಂಡಿಸಿದ್ದಾರೆ.
ಚಿನ್ನಪ್ಪರೆಡ್ಡಿ ಆಯೋಗದ ಮೂಲಕ ಬಂದ ಸಣ್ಣದೊಂದು ಸಾಮಾಜಿಕ ನ್ಯಾಯದ ಆಶಯಕ್ಕೆ ಬೊಮ್ಮಾಯಿ ಕೊಡಲಿ ಪೆಟ್ಟು ನೀಡಿ ಮುಸ್ಲಿಮರಿಗೆ ಅನ್ಯಾಯ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ತೀರ ಬಡತನದಲ್ಲಿರುವ ಮುಸಲ್ಮಾನರನ್ನು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯು ಎಸ್)ಗೆ ಸೇರಿಸಲು ಸರ್ಕಾರಕ್ಕೆ ಹೇಳಿದ್ದು ಯಾರು? ಜಾತಿ ಮೂಲ ಬಡತನಕ್ಕೂ, ವರ್ಗ ಮೂಲ ಬಡತನಕ್ಕೂ ತುಂಬ ವ್ಯತ್ಯಾಸ ಇದೆ. ಇದನ್ನು ಅರಿಯದೆ ಕೇವಲ ರಾಜಕಾರಣಕ್ಕಾಗಿ ಮುಸ್ಲಿಮರ ಮೀಸಲಾತಿ ಮುನ್ನೆಲೆಗೆ ತಂದು ಮತಬ್ಯಾಂಕ್ ಸೃಷ್ಠಿಸುವ ಹುನ್ನಾರವಲ್ಲದೆ ಇದರಲ್ಲಿ ಬೇರೆನೂ ಇಲ್ಲ ಎಂದು ಹೇಳಿದ್ದಾರೆ.
ಮುಸ್ಲಿಮರು ಧಾರ್ಮಿಕ ಪಂಗಡದಲ್ಲಿ ಸೇರಿದ್ದಾರೆ ಎನ್ನುವುದಾದರೆ ಹಿಂದುಳಿದ ವರ್ಗದಲ್ಲಿ ಸೇರಿರುವ ಕ್ರೈಸ್ತರು, ಜೈನರು, ಫಾರಸಿಗರು, ಬೌದ್ಧರು ಮತ್ತು ಧರ್ಮ ಪರಿವರ್ತನೆಯ ಮುಖಾಂತರ ಬೇರೆ-ಬೇರೆ ಧರ್ಮ ಸ್ವಿಕರಿಸಿರುವ ದಲಿತರನ್ನು ಏನು ಮಾಡುತ್ತಿರಿ ಎಂಬ ಪ್ರಶ್ನೆಗೆ ಬೊಮ್ಮಾಯಿ ಉತ್ತರಿಸಬೇಕಾಗುತ್ತದೆ ಎಂದಿದ್ದಾರೆ.
ಸಂವಿಧಾನ ಬದ್ದವಾಗಿರುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಸ್ಟೀಸ್ ಚಿನ್ನಪ್ಪರೆಡ್ಡಿ ಆಯೋಗ ಮುಸ್ಲಿಮರನ್ನು ಹಿಂದುಳಿದ ವರ್ಗದಲ್ಲಿ ಪರಿಗಣಿಸಿ ಮೀಸಲಾತಿ ನೀಡಿರುವಾಗ ಈ ಮೀಸಲಾತಿಗೆ ಸಾಂವಿಧಾನಿಕ ಪ್ರಾಮುಖ್ಯತೆ ಇದೆ ಎಂದಲ್ಲವೆ? ಹೀಗಿರುವಾಗ ನಿಮಗೆ ಮುಸ್ಲಿಮರು ಧರ್ಮದ ಆಧಾರದಲ್ಲಿ ಮೀಸಲಾತಿ ಪಡೆದಿದ್ದಾರೆ ಎಂದು ಹೇಳಲು ಯಾವ ಅಧಿಕಾರವಿದೆ? ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಮರು ಹಿಂದುಳಿದ ಜಾತಿಗೆ ಸೇರಿದವರಲ್ಲ ಎಂದು ಈಗಿರುವ ಆಯೋಗ ಏನಾದರು ವರದಿ ನೀಡಿದೆಯೇ?
ಸಂವಿಧಾನದ ಆಶಯಕ್ಕೆ ಮೂಲ ಹೊಡೆತ ನೀಡಲು ಹೊರಟಿರುವ ಸರ್ಕಾರ, ಮುಸ್ಲಿಂ ಸಮುದಾಯದ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಮತ್ತು ನೌಕರಿ ವಿಷಯದ ಕುರಿತು ಅನ್ಯಾಯ ಮಾಡುತ್ತಲ್ಲೆ ಬಂದಿದೆ ಎಂದು ಆರೋಪಿಸಿದರು.
ಮುಸ್ಲಿಮರು ಹಿಂದುಳಿದ ವರ್ಗದಲ್ಲಿದ್ದು, 2 ಬಿ ಮೀಸಲಾತಿಯಲ್ಲಿದ್ದಾಗ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಹಿಂದುಳಿದಿರುವದಾಗಿ ಸಾಬೀತು ಪಡಿಸಲಿಕ್ಕೆ ಅವಕಾಶವಿತ್ತು. ಇಷ್ಟು ದೊಡ್ಡ ಅನ್ಯಾಯ ಕೇವಲ ನಾವು ನಿಮ್ಮ ಪಕ್ಷಕ್ಕೆ ಮತ ನೀಡುವುದಿಲ್ಲ ಎಂಬ ಮಾತ್ರಕ್ಕೆ ಮುಸ್ಲಿಮರನ್ನು ಮೀಸಲಾತಿಯಿಂದ ಹೊರಹಾಕಿದ್ದು ಅಲ್ಲವೆ? ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.