ಮಂಗಳವಾರ, ಮೇ 11, 2021
26 °C
ಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳಿಂದ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ

ಸಿರಿಧಾನ್ಯ ಬೆಳೆಗಾರರಿಗೆ ಅನ್ಯಾಯ: ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಇಂಡಿ, ನಿಡಗುಂದಿ ತಾಲ್ಲೂಕುಗಳಲ್ಲಿ ಸಿರಿ ಧಾನ್ಯ ಬೆಳೆಗಾರರ ಎಫ್‌ಪಿಒ(ರೈತ ಉತ್ಪಾದಕ ಸಂಸ್ಥೆ)ಗಳನ್ನು ರಚಿಸುವಲ್ಲಿ ನಿಯಮಗಳನ್ನು ಪಾಲಿಸದೇ ತಾರತಮ್ಯ ಮಾಡುತ್ತಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳ ಮೇಲೆ ಹಾಗೂ ವಿಜಯಪುರದ ಕೃಷಿ ವಿಸ್ತರಣಾ, ಶಿಕ್ಷಣ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಕೊಳ್ಳುವಂತೆ ಒತ್ತಾಯಿಸಿ ಅಖಂಡ ಕರ್ನಾ‌ಟಕ ರೈತ ಸಂಘದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಹೈದರಾಬಾದ್‌ನ‌ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ (ಐ.ಐ.ಎಂ.ಆರ್)ಯು ಇಂಡಿ ಹಾಗೂ ನಿಡಗುಂದಿ ತಾಲ್ಲೂಕುಗಳಲ್ಲಿ ತಲಾ ಒಂದರಂತೆ ಒಟ್ಟು ಎರಡು ಸಿರಿಧಾನ್ಯ ಬೆಳೆಗಾರರ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸುತ್ತಿದೆ. ಆದರೆ, ನಿಯಮಾವಳಿಗಳನ್ನು ಪಾಲಿಸದೇ ಆಯಾ ತಾಲ್ಲೂಕಿನ ಸಿರಿಧಾನ್ಯ ಬೆಳೆಗಾರರ ಪೂರ್ವಭಾವಿ ಸಭೆಗಳನ್ನು ಕರೆದು ಅವರಿಗೆ ತಿಳಿವಳಿಕೆ, ತರಬೇತಿ ನೀಡದೇ, ನೇರವಾಗಿ ತಮಗೆ ತಿಳಿದ ರೈತರನ್ನು ಆಯ್ಕೆ ಮಾಡಿಕೊಂಡು ಸಿರಿಧಾನ್ಯ ಬೆಳೆಗಾರರ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಇಂಡಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ವಿಜಯಪುರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ತಾರತಮ್ಯ ನೀತಿ ಅನುಸರಿಸಿ, ಕದ್ದು ಮುಚ್ಚಿ ತಮಗೆ ಬೇಕಾದ ಬೆರಳಣಿಕೆಯಷ್ಟು ರೈತರನ್ನು ಮಾತ್ರ ಸೇರಿಸಿಕೊಂಡು ಸಿರಿಧಾನ್ಯ ಬೆಳೆಗಾರರ ರೈತ ಉತ್ಪಾದಕ ಸಂಸ್ಥೆ ರಚಿಸಲು ಮುಂದಾಗಿದೆ. ಇದರಿಂದ ಸಾವಿರಾರು ಜನ ಸಿರಿಧಾನ್ಯ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ ಮಾತನಾಡಿ, ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಿರಿಧಾನ್ಯ ಬೆಳೆಗಾರರನ್ನು ಹೊರಗಿಟ್ಟು, ಸಂಸ್ಥೆಯ ಮಾಲಿಕತ್ವವನ್ನು ಕೆಲವೇ ಕೆಲವು ಪ್ರಭಾವಿ ರೈತರ ಹಿಡಿತಕ್ಕೆ ಒಪ್ಪಿಸುವ ಹುನ್ನಾರವನ್ನು ಇಂಡಿ ಹಾಗೂ ಹಿಟ್ಟಳ್ಳಿ ಕೃಷಿ ವಿಜ್ಞಾನ ಕೇಂದ್ರದವರು ಮಾಡುತ್ತಿದ್ದಾರೆ ಎಂದರು.

ನಿಡಗುಂದಿ ತಾಲ್ಲೂಕಿನಲ್ಲಿ ಸಿರಿಧಾನ್ಯ ಬೆಳೆಗಾರರ ರೈತ ಉತ್ಪಾದಕ ಸಂಸ್ಥೆ ರಚಿಸುವ ಜವಾಬ್ದಾರಿಯನ್ನು ಹಿಟ್ನಳ್ಳಿ ಕೃಷಿ ವಿಸ್ತರಣಾ, ಶಿಕ್ಷಣ ಕೇಂದ್ರಕ್ಕೆ ಐ.ಐ.ಎಂ.ಆರ್. ಸಂಸ್ಥೆಗೆ ವಹಿಸಿದ್ದು, ಈ ಕೇಂದ್ರವವರು ಸಹ ಯಾವುದೇ ನಿಯಮಗಳನ್ನು ಪಾಲಿಸದೇ ಅಲ್ಲಿಯ ಸಿರಿಧಾನ್ಯ ಬೆಳೆಗಾರರಿಗೆ ಯಾವುದೇ ಸೂಕ್ತ ಮಾಹಿತಿ ನೀಡದೇ ತಮಗೆ ಬೇಕಾದ ಕೆಲವೇ ಕೆಲವು ರೈತರನ್ನು ಸೇರಿಸಿಕೊಂಡು ರೈತ ಉತ್ಪಾದಕ ಸಂಸ್ಥೆಯನ್ನು ರಚಿಸಲು ಮುಂದಾಗಿದ್ದು, ಅನುದಾನಕ್ಕಾಗಿಯೇ ಹೊರತು ಸಿರಿಧಾನ್ಯ ಬೆಳೆಗಾರ ರೈತರಿಗಾಗಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈರಣ್ಣ ದೇವರಗುಡಿ, ಬಸವರಾಜ ಜಂಗಮಶೆಟ್ಟಿ, ಬಸವರಾಜ ಅವಟಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು