ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ₹36 ಸಾವಿರ ಕೋಟಿ ಹೂಡಿಕೆಗೆ ಒಲವು

Published 12 ಮಾರ್ಚ್ 2024, 16:39 IST
Last Updated 12 ಮಾರ್ಚ್ 2024, 16:39 IST
ಅಕ್ಷರ ಗಾತ್ರ

ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ಒಟ್ಟು ₹36 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ಸೌರ ಮತ್ತು ಪವನ ವಿದ್ಯುತ್‌ ಕ್ಷೇತ್ರದ ಎರಡು ಕಂಪನಿಗಳು ಒಲವು ತೋರಿವೆ.

ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ತಮ್ಮ ತವರು ಜಿಲ್ಲೆಗೆ ಬಂಡವಾಳ ಆಕರ್ಷಿಸಲು ಮುಂದಾಗಿದ್ದಾರೆ. ಸುಜ್ಲಾನ್ ಸಮೂಹದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೆ.ಪಿ. ಚಲಸಾನಿ ಹಾಗೂ ರೆನೈಸಾನ್ಸ್‌ ಸೋಲಾರ್ ಅಂಡ್ ಎಲೆಕ್ಟ್ರಾನಿಕ್ಸ್ ಮೆಟಿರಿಯಲ್ಸ್‌ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಿಲಿಂದ್ ಕುಲಕರ್ಣಿ ಜತೆ ಸಚಿವರು, ಮಂಗಳವಾರ ಈ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು.

ಸಭೆ ಬಳಿಕ ಮಾತನಾಡಿದ ಅವರು, ‘ಸುಜ್ಲಾನ್‌ ಕಂಪನಿಯು ಪವನ ವಿದ್ಯುತ್‌ ಕ್ಷೇತ್ರಕ್ಕೆ ಅಗತ್ಯವಿರುವ ಎತ್ತರದ ಕಂಬ ಮತ್ತು ಬೃಹತ್‌ ಬ್ಲೇಡುಗಳ ಉತ್ಪಾದನೆಗೆ ಹೆಸರಾಗಿದೆ. ವಿಜಯಪುರದಲ್ಲಿ ಹಂತ ಹಂತವಾಗಿ ₹30 ಸಾವಿರ ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದೆ’ ಎಂದರು.‌

ಮೊದಲ ಹಂತದಲ್ಲಿ ಬ್ಲೇಡುಗಳ ತಯಾರಿಕಾ ಘಟಕ ಆರಂಭಿಸಲು ಕಂಪನಿ ತೀರ್ಮಾನಿಸಿದ್ದು, 100 ಎಕರೆ ಜಮೀನನ್ನು ಕೇಳಿದೆ. ಇಲ್ಲಿ ತಯಾರಿಸಲಿರುವ ಕಂಬ ಮತ್ತು ಬ್ಲೇಡುಗಳನ್ನು ಸ್ಥಳೀಯವಾಗಿಯೇ ಬಳಸಲಿದೆ. ಇದು ವಿಜಯಪುರ ಜಿಲ್ಲೆಗೆ ಹರಿದು ಬರಲಿರುವ ಬೃಹತ್‌ ಹೂಡಿಕೆಯಾಗಲಿದೆʼ ಎಂದು ಹೇಳಿದರು.

ದೇಶದಲ್ಲಿ ವಿಜಯಪುರ, ಆಂಧ್ರಪ್ರದೇಶದ ಅನಂತಪುರ ಮತ್ತು ರಾಜಸ್ಥಾನದ ಜೈಸಲ್ಮೇರ್‌ ಮಾತ್ರ ಪವನ ವಿದ್ಯುತ್‌ ಉತ್ಪಾದನೆಗೆ ಸೂಕ್ತ ತಾಣಗಳೆಂದು ಅಧ್ಯಯನ ಹೇಳಿದೆ. ಅನಂತಪುರ ಮತ್ತು ಜೈಸಲ್ಮೇರ್‌ ಪವನ ವಿದ್ಯುತ್‌ ಘಟಕಗಳನ್ನು ಹೊಂದಿರುವ ಸುಜ್ಲಾನ್‌, ವಿಜಯಪುರದಲ್ಲಿ 5,000 ಮೆಗಾವ್ಯಾವಾಟ್‌ ಸಾಮರ್ಥ್ಯದ ಘಟಕವನ್ನು ಪ್ರಾರಂಭಿಸಲಿದೆ ಎಂದರು.

ರೆನೈಸಾನ್ಸ್‌ನಿಂದ ₹6,000 ಸಾವಿರ ಕೋಟಿ:

ಸೌರ ಫಲಕಗಳ (ಸೋಲಾರ್‌ ಪ್ಯಾನೆಲ್ಸ್)‌ ತಯಾರಿಕೆಗೆ ಬೇಕಾಗುವ ಬಿಡಿ ಭಾಗಗಳ ಉತ್ಪಾದನೆಗೆ ಹೆಸರಾಗಿರುವ ರೆನೈಸಾನ್ಸ್‌ ಕಂಪನಿ ವಿಜಯಪುರದಲ್ಲಿ ₹6,000 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ತನ್ನ ಘಟಕ ಆರಂಭಿಸಲಿದೆ ಎಂದು ಸಚಿವರು ಹೇಳಿದರು.

ಈ ಕಂಪನಿ ತನಗೆ 100 ಎಕರೆ ಜಮೀನು ಅಗತ್ಯವಿದೆ ಎಂದಿದೆ. ಆರಂಭದಲ್ಲಿ ₹2,500 ಕೋಟಿ ಬಂಡವಾಳ ಹೂಡಲಿದ್ದು, 5,000 ಮೆಗಾವಾಟ್‌ ಸಾಮರ್ಥ್ಯದ ಘಟಕವನ್ನು (ಕ್ರಿಸ್ಟಲ್‌ ಗ್ರೋತ್‌ & ವೇಫರಿಂಗ್‌ ಯೂನಿಟ್)‌ ಆರಂಭಿಸಲಿದೆ. 2025ರ ಕೊನೆಯ ಹೊತ್ತಿಗೆ ತನ್ನ ವಾಣಿಜ್ಯ ಚಟುವಟಿಕೆ ಆರಂಭಿಸಲು ಉದ್ದೇಶಿಸಲಿದೆ. ಇದರಿಂದ 1 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು  ವಿವರಿಸಿದರು.

ಕೆಐಎಡಿಬಿ ಸಿಇಒ ಡಾ.ಮಹೇಶ್‌ ಈ ವೇಳೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT