ಚುನಾವಣಾ ಭರವಸೆಗೆ ಸಿಗದ ಆದ್ಯತೆ
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಯೋಜನೆಯಡಿಯ ಉಪ ಯೋಜನೆಗಳನ್ನು ಪೂರ್ಣಗೊಳಿಸಲು ಹಾಗೂ ಇದರಡಿ ಭೂಸ್ವಾಧೀನ ಮತ್ತು ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಕೃಷ್ಣಾ ನ್ಯಾಯಾಧಿಕರಣ-2ರ ಅಂತಿಮ ತೀರ್ಪಿನ ಬಾಕಿಯಿರುವ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದರೊಂದಿಗೆ ಅಗತ್ಯವಿರುವ ಕಾನೂನಾತ್ಮಕ ಕ್ರಮಗಳನ್ನು ಮುಂದುವರೆಸಲಾಗುವುದು ಎಂದು ಹೇಳಲಾಗಿದ್ದು ಇದರಲ್ಲೂ ಹೊಸತನವೇನಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ ₹50 ಸಾವಿರ ಕೋಟಿ ನೀಡುತ್ತೇವೆ ಎಂಬ ಚುನಾವಣೆ ಘೋಷಣೆಗೆ ಆದ್ಯತೆ ಸಿಕ್ಕಿಲ್ಲ. ಕೃಷ್ಣಾ ಭಾಗ್ಯ ಜಲ ನಿಗಮದಡಿ ಹೊರ್ತಿ-ರೇವಣಸಿದ್ದೇಶ್ವರ ಚಿಮ್ಮಲಗಿ ಮುಳವಾಡ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಲಾಗಿದ್ದು ಜಿಲ್ಲೆಗೆ ಇದು ಸಹ ಹೊಸದೇನಲ್ಲ. ಈ ಹಿಂದಿನ ಬಜೆಟ್‌ನಲ್ಲಿ ಘೋಷಣೆಯಾಗಿ ಅನುಷ್ಠಾನದ ಹಂತದಲ್ಲಿರುವ ಯೋಜನೆಗಳಾಗಿವೆ. ಈಗಾಗಲೇ ಅನುಮೋದನೆಗೊಂಡಿರುವ ವಿಜಯಪುರದಲ್ಲಿ ವಿಜ್ಞಾನ ಕೇಂದ್ರ/ತಾರಾಲಯಗಳನ್ನು ಕಾರ್ಯಾರಂಭ ಮಾಡಲು ಆದ್ಯತೆ ನೀಡಲಾಗುವುದು ಎಂದು ಪುನರುಚ್ಚರಿಸಲಾಗಿದೆ. ನೀರಾವರಿ ಕೈಗಾರಿಕಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಜಿಲ್ಲೆಗೆ ಆದ್ಯತೆ ಸಿಕ್ಕಿಲ್ಲ. ಜಿಲ್ಲೆಯವರೇ ಆದ ಎಂ.ಬಿ.ಪಾಟೀಲ ಅವರು ಬೃಹತ್ ಕೈಗಾರಿಕಾ ಸಚಿವರಾಗಿರುವುದರಿಂದ ಬಜೆಟ್‌ನಲ್ಲಿ ವಿಶೇಷ ಆದ್ಯತೆ ಸಿಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ವಿಜಯಪುರ ಮಹಾನಗರ ಪಾಲಿಕೆ ಲಿಂಬೆ ಅಭಿವೃದ್ಧಿ ಪ್ರಾಧಿಕಾರ ಅಕ್ಕಮಹಾದೇವಿ ಮಹಿಳಾ ವಿವಿ ದ್ರಾಕ್ಷಿ ಮಂಡಳಿಗೆ ವಿಶೇಷ ಅನುದಾನ ಯೋಜನೆಗಳ ಘೋಷಣೆಯಾಗಬಹುದು ಎಂಬ ಭರವಸೆ ಈಡೇರಿಲ್ಲ.